ಬೆಂಗಳೂರು :
ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದ ಕಾರಜೋಳ ಗ್ರಾಮಸ್ಥರು ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ ಕಾರಜೋಳ ಅವರಿಗೆ ಸಮರ್ಪಿಸಿದ್ದ ಬಂಗಾರದ ಕಿರೀಟವನ್ನು ಉಪಮುಖ್ಯಮಂತ್ರಿಯವರು ವಿಧಾನಸೌಧದಲ್ಲಿ ಇಂದು ಮುಖ್ಯಕಾರ್ಯದರ್ಶಿಯರ ಮೂಲಕ ಸರ್ಕಾರಕ್ಕೆ ಒಪ್ಪಿಸಿದರು.
ನಂತರ ಮಾತನಾಡಿದ ಶ್ರೀ ಗೋವಿಂದ ಕಾರಜೋಳ, ತಮ್ಮ ಹುಟ್ಟೂರು ಕಾರಜೋಳ ಗ್ರಾಮದ ಇಡೀ ಗ್ರಾಮಸ್ಥರು ಅತ್ಯಂತ ಪ್ರೀತಿ ಅಭಿಮಾನದಿಂದ 140 ಗ್ರಾಂ ಬಂಗಾರದ ಕಿರೀಟವನ್ನು ಸಮರ್ಪಿಸಿದ್ದರು. ತಾವು ಈ ಗ್ರಾಮದ ಅಭಿವೃದ್ಧಿಗಾಗಿ ಸಲ್ಲಿಸಿದ ಗಣನೀಯ ಸೇವೆ, ಗ್ರಾಮದ ಅಭಿವೃದ್ಧಿಗಾಗಿ ಅತ್ತ್ಯುಮ ಯೋಜನೆಗಳ ಅನುಷ್ಠಾನ, ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ, ತಮ್ಮೂರಿನ ಮನೆಯ ಮಗ ಉಪಮುಖ್ಯಮಂತ್ರಿಯಾಗಿದ್ದಕ್ಕಾಗಿ ಪ್ರೀತಿ ಗೌರವದಿಂದ ಈ ಬಂಗಾರದ ಕಿರೀಟವನ್ನು ಸಮರ್ಪಿಸಿದ್ದರು. ಕಳೆದ 6 ವರ್ಷಗಳಿಂದ ಸನ್ಮಾನ ಮಾಡಿ, ಸಮರ್ಪಿಸಲು ಪ್ರಯತ್ನಿಸಿದ್ದರು.
ನವೆಂಬರ್ 23 ರಂದು ಈ ಗ್ರಾಮದಲ್ಲಿ ನಡೆದ ವಿವಿಧ ಅಭಿವೃದ್ದಿ ಕಾರ್ಯಕ್ರಮದಲ್ಲಿ ಒತ್ತಾಯ ಪೂರ್ವಕವಾಗಿ ಅಭಿಮಾನ, ಪ್ರೀತಿ ವಿಶ್ವಾಸ, ಗೌರವದಿಂದ ಸನ್ಮಾನಿಸಿ, ಈ ಚಿನ್ನದ ಕಿರೀಟವನ್ನು ಸಮರ್ಪಿಸಿದ್ದರು. ತಾವು ಶಾಸಕ, ಮಂತ್ರಿಯಾಗಿ ಮಾಡಿದ ಸೇವೆಯನ್ನು ಪರಿಗಣಿಸಿ ಪೀತಿ, ಗೌರವದಿಂದ ಸನ್ಮಾನಿಸಿದ್ದು, ಈ ಸನ್ಮಾನವು ಸರ್ಕಾರಕ್ಕೆ ಸಲ್ಲುತ್ತದೆ. ಈ ಹಿನ್ನೆಲೆಯಲ್ಲಿ ಈ ಬಂಗಾರದ ಕಿರೀಟವನ್ನು ಮುಖ್ಯಕಾರ್ಯದರ್ಶಿಯವರಾದ ಶ್ರೀ ಟಿ.ಎಂ. ವಿಜಯಬಾಸ್ಕರ್ ಅವರ ಮೂಲಕ ಸರ್ಕಾರಕ್ಕೆ ಒಪ್ಪಿಸಿರುವುದಾಗಿ ತಿಳಿಸಿದ ಅವರು, ಪ್ರೀತಿ, ವಿಶ್ವಾಸದಿಂದ ಸನ್ಮಾನಿಸಿದ ಕಾರಜೋಳ ಗ್ರಾಮದ ಸಮಸ್ತ ಗ್ರಾಮಸ್ಥರಿಗೆ ಉಪಮುಖ್ಯಮಂತ್ರಿಯವರು ಕೃತಜ್ಞತೆ ಸಲ್ಲಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ