ಬೆಂಗಳೂರು:
ಹೊಸ ಸರ್ಕಾರದಲ್ಲಿ ವರ್ಗಾವಣೆ ದಂಧೆಯ ಗುರುತರ ಆರೋಪ ಮಾಡಿದ್ದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ದಾಖಲೆಗಳನ್ನು ಸರ್ಕಾರಕ್ಕೆ ಒಪ್ಪಿಸುವುದಾಗಿ ಬುಧವಾರ ವಿಧಾನಸಭೆಯಲ್ಲಿ ತಿಳಿಸಿದರು. ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ಪ್ರಸ್ತಾಪದ ಚರ್ಚೆಯಲ್ಲಿ ಮಾತನಾಡಿದರು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಂದ ಮೇಲೆ ಅಧಿಕಾರಿಗಳ ವರ್ಗಾವಣೆಯಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪ ಮಾಡುತ್ತಿದ್ದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ, ಕೃಷಿ ಇಲಾಖೆಯಲ್ಲಿ ಅಧಿಕಾರಿಗಳ ವರ್ಗಾವಣೆ ಮತ್ತು ವಿವಿಧ ಯೋಜನೆಗಳಿಗೆ ನಿಗದಿಪಡಿಸಲಾಗಿದೆ ಎನ್ನಲಾದ ‘ಕಮಿಷನ್ ದರಪಟ್ಟಿ’ಯೊಂದನ್ನು ಬುಧವಾರ ವಿಧಾನಸಭೆಗೆ ಸಲ್ಲಿಸಿದರು.
ಎಲ್ಲ ಇಲಾಖೆಗಳಲ್ಲಿ ವರ್ಗಾವಣೆಗೆ ದರ ನಿಗದಿ ಆಗಿದೆ. ಈ ಬಗ್ಗೆ ಹಾದಿಬೀದಿಯಲ್ಲಿ ಜನರು ಆಡಿಕೊಳ್ಳುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಯಾವುದೋ ಒಂದು ಇಲಾಖೆಯಲ್ಲಿ ನಿಗದಿ ಮಾಡಿರುವ ವರ್ಗಾವಣೆಯ ದರಪಟ್ಟಿ ನನ್ನ ಕೈಯ್ಯಲ್ಲಿ ಇದೆ. ಅದನ್ನು ಯಾರೋ ನನಗೆ ತಂದು ಸಂಪೂರ್ಣ ವಿವರ ನೀಡಿದ್ದಾರೆ ಎಂದರು.
ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ ನೀವು (ಕಾಂಗ್ರೆಸ್), ನೇಮಕಾತಿ, ಅಧಿಕಾರಿಗಳ ವರ್ಗಾವಣೆ ಹಾಗೂ ಸ್ಥಳ ನಿಯುಕ್ತಿಗೆ ದರ ನಿಗದಿ ಮಾಡಿದ್ದ ಬಗ್ಗೆ ಜಾಹೀರಾತನ್ನೂ ನೀಡಿದ್ದೀರಿ. ದರಪಟ್ಟಿಯನ್ನೂ ಪ್ರಕಟಿಸಲಾಗಿತ್ತು. ಈಗ ಒಂದು ಇಲಾಖೆಯ ದರಪಟ್ಟಿ ನನ್ನ ಬಳಿ ಇದೆ. ಅಧಿಕಾರಿಗಳೇ ನನಗೆ ಕೊಟ್ಟಿದ್ದಾರೆ ಎಂದು ತಮ್ಮ ಬಳಿ ಇದ್ದ ಪಟ್ಟಿಯನ್ನು ಪ್ರದರ್ಶಿಸಿದರು.
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದುಬಾರಿ ದರಕ್ಕೆ ಸೋಲಾರ್ ವಿದ್ಯುತ್ ಖರೀದಿ ಪ್ರಕರಣ ಪ್ತಸ್ತಾಪಿಸಿದ ಮಾಜಿ ಮುಖ್ಯಮಂತ್ರಿ ಅವರು, ಸೋಲಾರ್ ಪಿಪಿಎಸ್ ವಿಚಾರದಲ್ಲಿ ಅಕ್ರಮದ ನಡೆದಿದೆ. ಒಂದು ಯೂನಿಟ್ ವಿದ್ಯುತ್‌ಗೆ 9.60ರೂ.ನಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ.