ಕುಂಭ ಮೇಳ ಕಾಲ್ತುಳಿತದಲ್ಲಿ ಮೃತಪಟ್ಟ, ಗಾಯಗೊಂಡವರ ಬಗ್ಗೆ ಮಾಹಿತಿ ಇಲ್ಲ: ಕೇಂದ್ರ

ನವದೆಹಲಿ: 

    ಇತ್ತೀಚೆಗೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಮತ್ತು ಗಾಯಗೊಂಡ ವ್ಯಕ್ತಿಗಳ ಸಂಖ್ಯೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ಸಂಸತ್ತಿಗೆ ತಿಳಿಸಿದೆ.

    ಇಂದು ಲೋಕಸಭೆಯಲ್ಲಿ ಕುಂಭ ಮೇಳ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ ಬಗ್ಗೆ ಕೇಳಲಾದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು, “ಅಂತಹ ಯಾವುದೇ ಡೇಟಾವನ್ನು ಕೇಂದ್ರ ಸರ್ಕಾರ ಸಂಗ್ರಹಿಸವುದಿಲ್ಲ” ಎಂದು ಹೇಳಿದ್ದಾರೆ.

   ಸಂವಿಧಾನದ ಏಳನೇ ವಿಧಿಯ ಪ್ರಕಾರ ‘ಸಾರ್ವಜನಿಕ ಸುವ್ಯವಸ್ಥೆ’ ಮತ್ತು ‘ಪೊಲೀಸ್’ ರಾಜ್ಯದ ವಿಷಯಗಳಾಗಿವೆ ಎಂದು ನಿತ್ಯಾನಂದ ರೈ ಹೇಳಿದ್ದಾರೆ. ಧಾರ್ಮಿಕ ಸಭೆಗಳ ಸಂಘಟನೆ, ಜನಸಂದಣಿ ನಿರ್ವಹಣೆ, ಭಕ್ತರಿಗೆ ಸೌಲಭ್ಯಗಳನ್ನು ಒದಗಿಸುವುದು, ಸಭೆಯ ಸಮಯದಲ್ಲಿ ಯಾವುದೇ ರೀತಿಯ ವಿಪತ್ತು ತಡೆಗಟ್ಟುವಿಕೆ ಇತ್ಯಾದಿಗಳು ‘ಸಾರ್ವಜನಿಕ ಸುವ್ಯವಸ್ಥೆ’ಗೆ ನಿಕಟ ಸಂಬಂಧ ಹೊಂದಿವೆ. ಇದು ರಾಜ್ಯದ ವಿಷಯವಾಗಿದೆ ಎಂದು ಅವರು ತಿಳಿಸಿದ್ದಾರೆ.

  “ಕಾಲ್ತುಳಿತಗಳು ಮತ್ತು ಮೃತ ಭಕ್ತರ ಕುಟುಂಬಗಳಿಗೆ, ಗಾಯಗೊಂಡ ವ್ಯಕ್ತಿಗಳಿಗೆ ಹಣಕಾಸಿನ ನೆರವು ಸೇರಿದಂತೆ ರಾಜ್ಯದಲ್ಲಿ ಸಂಭವಿಸಿದ ಯಾವುದೇ ರೀತಿಯ ವಿಪತ್ತುಗಳ ಬಗ್ಗೆ ಯಾವುದೇ ರೀತಿಯ ವಿಚಾರಣೆ ನಡೆಸುವುದು ಸಹ ಸಂಬಂಧಪಟ್ಟ ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಬರುತ್ತದೆ. ಅಂತಹ ಸಂದರ್ಭಗಳನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರಗಳು ಸಮರ್ಥವಾಗಿವೆ. ಅಂತಹ ಯಾವುದೇ ಡೇಟಾವನ್ನು ಕೇಂದ್ರ ಸಂಗ್ರಹಿಸುವುದಿಲ್ಲ” ಎಂದು ಅವರು ಹೇಳಿದ್ದಾರೆ.

   ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಕಾರ್ಯಕ್ರಮಗಳು ಮತ್ತು ಸಾಮೂಹಿಕ ಸಭೆಗಳ ಸ್ಥಳಗಳಲ್ಲಿ ಜನಸಂದಣಿಯನ್ನು ನಿರ್ವಹಿಸುವ ಕುರಿತು ವಿವರವಾದ ಮಾರ್ಗಸೂಚಿಗಳನ್ನು ವಿತರಿಸಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವರ ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.