ಕುಣಿಗಲ್:
ಹಳ್ಳಿಗಳಲ್ಲಿ ಕೋವಿಡ್ ಪ್ರಕರಣಗಳು ದಿನೆ ದಿನೆ ಹೆಚ್ಚು ಉಲ್ಭಣಗೊಳ್ಳುತ್ತಿರುವುದರಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರೋಗಿಗಳನ್ನು ಗುರುತಿಸಿ ಕೂಡಲೆ ಆಸ್ಪತ್ರೆಗೆ ದಾಖಲು ಮಾಡುವಂತೆ ಹಾಗೂ ಟಾಸ್‍ಫೋರ್ಸ್ ಸಮಿತಿಗಳನ್ನು ರಚನೆ ಮಾಡಬೇಕೆಂದು ಶಾಸಕ ಡಾ.ಎಚ್.ಡಿ.ರಂಗನಾಥ್ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೊರೋನಾ ನಿಯಂತ್ರಣ ಸಲುವಾಗಿ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಪಿಡಿಒಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ತಾಲೂಕಿನಲ್ಲಿ ಕೋವಿಡ್ ಪ್ರಕರಣಗಳು ಉಲ್ಭಣಗೊಳ್ಳುತ್ತಿದ್ದು ಕೂಡಲೇ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮನೆಯಲ್ಲಿರುವ ಸಣ್ಣಪುಟ್ಟ ರೋಗಿಗಳನ್ನು ಗುರುತಿಸಿ ಆಸ್ಪತ್ರೆಗೆ ಸೇರಿಸುವಂತಹ ಕೆಲಸವನ್ನು ನಿರ್ವಹಿಸಲು ಅಧ್ಯಕ್ಷರು, ಪಿಡಿಒ, ಆಶಾ, ಅಂಗನವಾಡಿ ಕಾರ್ಯಕರ್ತರ ತಂಡದಲ್ಲಿ ಟಾಸ್‍ಫೋರ್ಸ್ ಸಮಿತಿಗಳನ್ನು ರಚಿಸಿ ಕೋವಿಡ್ ಪ್ರಕರಣದಲ್ಲಿ ತುತ್ತಾಗಿರುವರನ್ನ ಕೂಡಲೇ ಕೋವಿಡ್ ಸೆಂಟರ್‍ಗಳಿಗೆ ದಾಖಲು ಮಾಡುವಂತೆ ಸೂಚಿಸಿದರು. ಈಗಾಗಲೇ ಅಮೃತೂರು, ಮಲ್ಲನಾಯಕನಹಳ್ಳಿ, ಹಿಮಗಿರಿಯಲ್ಲಿ ಕೋವಿಡ್ ಸೆಂಟರ್ ಸ್ಥಾಪನೆ ಮಾಡಿದ್ದು ಹಳ್ಳಿಗಳಲ್ಲಿ 10ಕ್ಕಿಂತ ಹೆಚ್ಚು ಸೊಂಕಿತರಿರುವ ಪ್ರದೇಶವನ್ನು ಹಾಟ್ಸ್ಪಾಟ್ ಪ್ರದೇಶವೆಂದು 15 ಕ್ಕಿಂತ ಹೆಚ್ಚು ಸೋಂಕಿತರಿರುವ ಪ್ರದೇಶವನ್ನು ರೆಡ್‍ಜೋನ್ ಪ್ರದೇಶಗಳೆಂದು ಸರ್ಕಾರ ಘೋಷಿಸಿದೆ. ಆ ಪ್ರದೇಶಗಳಿಗೆ ಆರೋಗ್ಯ ಕಿಟ್, ಪಡಿತರ ವ್ಯವಸ್ಥೆಯನ್ನು ಕೈಗೊಳ್ಳಲಾಗುವುದು. ನರೇಗಾ ಯೋಜನೆಯಲ್ಲಿ ಕೆಲಸ ಮಾಡಿದವರಿಗೆ ಕೂಡಲೇ ಹಣ ಪಾವತಿ ಮಾಡುವಂತೆ ಸೂಚಿಸಿದರು.
ತಾಲೂಕಿನ 12 ಅಧಿಕಾರಿಗಳನ್ನು ಕೋವಿಡ್ ನಿಯಂತ್ರಣಕ್ಕಾಗಿ ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಿದ್ದು ಇವರುಗಳು ಯಾವುದೇ ಹಳ್ಳಿಗಳ ನಿಖರವಾದ ಮಾಹಿತಿ ಪಡೆದು ರೋಗವನ್ನು ಹತೋಟಿಗೆ ತರಲು ಕ್ರಮವಹಿಸಬೇಕು ಎಂಬ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷ ಎಸ್.ಕೆ.ನಾಗೇಂದ್ರ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ರಮೇಶ್, ತಾ.ಪಂ. ಇ.ಒ. ಜೋಸೆಫ್, ತಹಸೀಲ್ದಾರ್ ಮಹಾಬಲೇಶ್ವರ, ಡಿ.ವೈ.ಎಸ್ಪಿ.ರಮೇಶ್, ಸಿ.ಪಿ.ಐ. ಗುರುಪ್ರಸಾದ್ ಮತ್ತು ಡಿ.ಎಲ್.ರಾಜು ಪುರಸಭೆ ಸಿ.ಒ.ರವಿಕುಮಾರ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ