ಶಿರಾ ಶಾಸಕರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ

ಶಿರಾ

    ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಲೋಕಸಭೆಯ ಅಭ್ಯರ್ಥಿ ಚಂದ್ರಪ್ಪ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿದ ನಂತರ ಕೆಲ ದಿನ ವಿಶ್ರಾಂತಿ ಪಡೆದು ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶಾಸಕ ಹಾಗೂ ರಾಜ್ಯ ಸಾರಿಗೆ ನಿಗಮದ ಅಧ್ಯಕ್ಷ ಬಿ.ಸತ್ಯನಾರಾಯಣ್ ಶನಿವಾರ ವೀಕ್ಷಣೆ ಮಾಡಿದರು.

     ನಗರದ ವಕೀಲರ ಸಂಘದ ವಕೀಲರ ಭವನದ ವೀಕ್ಷಣೆಯ ನಂತರ ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಸುಮಾರು 1.20 ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ಹಾಗೂ ಸಾರಿಗೆ ಬಸ್ ನಿಲ್ದಾಣದ 5.80 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಯನ್ನು ಶಾಸಕರು ವೀಕ್ಷಣೆ ಮಾಡಿದರು.

    ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಮಾಣಗೊಂಡಿದ್ದ ಶುದ್ಧ ಕುಡಿಯುವ ನೀರಿನ ಘಟಕ ಕಳೆದ ಮೂರು ದಿನಗಳಿಂದ ದುರಸ್ಥಿಗೊಳ್ಳದೆ ಇದ್ದದ್ದರಿಂದ ಈ ಬಗ್ಗೆ ಶಾಸಕರಿಗೆ ಪ್ರಯಾಣಿಕರು ದೂರು ನೀಡಿದಾಗ ಕೂಡಲೇ  ನಗರಸಭೆಯ ಪ್ರಭಾರ ಆಯುಕ್ತರನ್ನು ಸ್ಥಳಕ್ಕೆ ಕರೆಸಿ ಶುದ್ಧ ನೀರಿನ ಘಟಕದಿಂದ ನೀರು ಪೂರೈಸುವ ತನಕವೂ ಶಾಸಕರು ಜಾಗಬಿಟ್ಟು ಕದಲಲೇ ಇಲ್ಲ.

     ಖಾಸಗಿ ಬಸ್ ನಿಲ್ದಾಣದಲ್ಲಿನ ವ್ಯಾಪಾರಸ್ಥರ ಜೊತೆ ಮಾತುಕತೆಯನ್ನೂ ನಡೆಸಿದ ಸತ್ಯನಾರಾಯಣ್ ನಿಲ್ದಾಣದ ವ್ಯಾಪಕ ಅಭಿವೃದ್ಧಿ ಕೈಗೊಳ್ಳುವ ಭರವಸೆಯನ್ನೂ ನೀಡಿದರು.ಜೆ.ಡಿ.ಎಸ್. ಮುಖಂಡರಾದ ಹೆಚ್.ಎಸ್.ಮೂಡಲಗಿರಿಯಪ್ಪ, ನಗರಸಭೆಯ ಮಾಜಿ ಅಧ್ಯಕ್ಷ ಆರ್.ರಾಮು, ಹೊಸಹಳ್ಳಿ ರಾಮಚಂದ್ರಪ್ಪ, ನಗರಸಭೆಯ ಪ್ರಭಾರ ಆಯುಕ್ತ ಸೇತುರಾಮ್‍ಸಿಂಗ್, ಟಿ.ಡಿ.ಮಲ್ಲೇಶ್, ಬಿ.ಆರ್.ನಾಗಭೂಷಣ್ , ಕಾಂತರಾಜು ಮುಂತಾದವರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ