ಕುಣಿಗಲ್ : ಬೆಳೆಯುತ್ತಿರುವ ಪಟ್ಟಣಕ್ಕೆ ಶಾಪವಾದ ರಸ್ತೆ ಸಂಚಾರ!!

ಕುಣಿಗಲ್ : 

     ಜಿಲ್ಲೆಯಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿರುವ ತಾಲ್ಲೂಕು ಕೇಂದ್ರಗಳ ಪೈಕಿ ರಾಜಧಾನಿಗೆ ಬಹಳ ಸಮೀಪ ಇರುವ ಕುಣಿಗಲ್ ನಗರ ಮೊದಲ ಸ್ಥಾನದಲ್ಲಿದೆ. ಆದರೇ ಇಲ್ಲಿನ ನಾಗರಿಕರಿಗೆ ಸೌಲತ್ತುಗಳನ್ನು ಪೂರೈಸುವ ನಿಟ್ಟಿನಲ್ಲಿ ಮಾತ್ರ ತಾಲೂಕು ಬಹಳ ಹಿಂದಿನ ಸಾಲಿನಲ್ಲಿದೆ ಎಂಬುದಕ್ಕೆ ಹಲವು ಸಾಕ್ಷಿಗಳು ಕಣ್ಣ ಮುಂದೆ ಸುಳಿಯುತ್ತವೆ. ನಗರದ ಅದೆಷ್ಟೊ ಸಮಸ್ಯೆಗಳು ಅಧಿಕಾರಿ ವಲಯ, ಜನಪ್ರತಿನಿಧಿಗಳ ಕಣ್ಣಿಗೆ ಕಂಡರೂ ಇವರು ಕಾಣದಂತೆ ಮೌನ ತಾಳಿರುವುದು ಇಲ್ಲಿನ ನಾಗರಿಕರ ದುರ್ದೈವವಾಗಿದೆ.

ಸಂಚಾರಕ್ಕೆ ಅಡಚಣೆ :

     ತಾಲ್ಲೂಕಿನ ಕೇಂದ್ರ ಸ್ಥಾನವಾದ ಕುಣಿಗಲ್ ಒಂದು ಪಟ್ಟಣವೇ, ನಗರವೇ, ಟೌನ್ ಆಗಿದೆಯೇ, ಎಂಬ ಗೊಂದಲದಲ್ಲಿ ಇಲ್ಲಿನ ಪ್ರಜ್ಞಾವಂತ ನಾಗರಿಕರು ಹಾಗೂ ಜನಸಾಮಾನ್ಯರು ಇದ್ದಾರೆ. ಈ ಬಗ್ಗೆ ಒಂದೇ ಒಂದು ಉದಾಹಾರಣೆಯಾಗಿ ಹೇಳಬೇಕೆಂದರೆ ಇಲ್ಲಿನ ಟ್ರಾಫಿಕ್ ಸಮಸ್ಯೆ ದಿನೆ ದಿನೆ ಹೆಚ್ಚುತ್ತಿದ್ದು, ಜನರ ಸಂಚಾರಕ್ಕೆ ಅಡಚಣೆಯುಂಟು ಮಾಡಿದೆ. ಕಳೆದ ಒಂದೂವರೆ ವರ್ಷದಿಂದ ಕೊರೋನಾ ರೋಗದಿಂದ ಬಳಲಿ ಬೆಂಡಾದ ಜನರಿಗೆ ಈಗ ಸಂಚಾರ ದಟ್ಟಣೆ ಒಂದು ರೀತಿ ಕೊರೋನಾ ರೋಗದಂತೆ ಕಾಡುತ್ತಿದೆ.

ಸಮಸ್ಯೆ ಬಗೆಹರಿಸದ ತಾಲ್ಲೂಕಾಡಳಿತ :

      ಕೊರೋನ ಬಂದ ಹಿನ್ನೆಲೆಯಲ್ಲಿ ಬಹುತೇಕ ವ್ಯಾಪಾರ ವಹಿವಾಟುಗಳು ನೆಲಕಚ್ಚಿದ್ದು ಒಂದೆಡೆಯಾದರೆ, ಇನ್ನೂ ಶಾಲಾ ಕಾಲೇಜುಗಳು, ದೇವಾಲಯಗಳು ಬಂದ್ ಆಗಿದ್ದರಿಂದ ರಸ್ತೆಗಳೆಲ್ಲ ಬಹುತೇಕ ಬಣಗುಡುತ್ತಿದ್ದವು. ಆದರೆ 2-3 ತಿಂಗಳಿನಿಂದ ಮತ್ತೆ ಶಾಲಾ, ಕಾಲೇಜುಗಳು, ದೇವಾಲಯಗಳು ಪುನರಾರಂಭಗೊಂಡಿವೆ. ಈಗ ರಸ್ತೆಗಳು ಹಿಂದಿನಂತೆಯೆ ತುಂಬಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ, ಆದರೂ ಇಲ್ಲಿನ ಆಡಳಿತ ವ್ಯವಸ್ಥೆ ಮಾತ್ರ ಇನ್ನೂ ಸಂಚಾರಿ ಅವ್ಯವಸ್ಥೆ ಸರಿಪಡಿಸುವ ಕಾಯಕಕ್ಕೆ ಮುಂದಾಗದೇ ಬರೀ ಲಾಭಗಳಿಕೆಯತ್ತ ಗಮನ ಹರಿಸಿ, ಜನಸಾಮಾನ್ಯರ ನೋವು ಅರ್ಥಮಾಡಿಕೊಳ್ಳದೇ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.

ಮುಚ್ಚಿಹೋದ ಫುಟ್‍ಪಾತ್ :

      ಪಟ್ಟಣದ ಹೃದಯಭಾಗವಾದ ಹುಚ್ಚಮಾಸ್ತಿಗೌಡ ವೃತ್ತದ ಸುಮಾರು 200 ಮೀಟರ್ ರಸ್ತೆ ಹಾಳುಬಿದ್ದು, ಧೂಳು ಹರಡುವ ತಾಣವಾಗಿದೆ. ಹಾಗೇ ಮುಂದೆ ಬಂದರೆ ಪಟ್ಟಣದ ಪುರಸಭಾ ಮುಂಭಾಗ ಎಡೆಯೂರು ಪ್ರಯಾಣಿಕರ ತಂಗುದಾಣ, ಹಾಗೂ ಆಜುಬಾಜು ಪುಟ್‍ಪಾತ್ ಮುಚ್ಚಿ ಹೋಗಿರುವುದರಿಂದ ಕಗ್ಗೆರೆ, ಕಡಗೀಹಳ್ಳಿ, ಅಮೃತೂರು ಹೋಬಳಿಕಡೆಗೆ ಹೋಗುವ ಪ್ರಯಾಣಿಕರು, ಎಡಯೂರು ಹೋಬಳಿಗೆ ಹೋಗುವ ಜನ, ಇನ್ನೂ ಶ್ರವಣಬೆಳಗೊಳ, ಹಾಸನ, ಧರ್ಮಸ್ಥಳ, ಮಂಗಳೂರು ಕಡೆಗೆ ಹೋಗುವ ಜನರು ಈ ತಂಗುದಾಣದ ಆಶ್ರಯ ಪಡೆದು ಇಲ್ಲಿಂದಲೇ ಪ್ರಯಾಣ ಬೆಳೆಸುತ್ತಾರೆ. ಅಲ್ಲದೆ ಇದೇ ಭಾಗದಿಂದ ಸಾವಿರಾರು ವಿದ್ಯಾರ್ಥಿಗಳು ಪ್ರಯಾಣ ಬೆಳಸುತ್ತಾರೆ. ಆದ್ದರಿಂದ ರಸ್ತೆಗಳು ದಟ್ಟಣೆಯಿಂದ ತುಂಬಿವೆ.

     ಇನ್ನಾದರೂ ಇಲ್ಲಿನ ಪುರಸಭಾ ಅಧಿಕಾರಿಗಳಾಗಲಿ, ಪೊಲೀಸ್ ಇಲಾಖೆಯಾಗಲಿ ತಮ್ಮ ಜವಾಬ್ದಾರಿ ಅರಿತು ನಿತ್ಯ ಬೆಳಗೆ-ಸಂಜೆ ಈ ಭಾಗಗಳಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸುವ ಮೂಲಕ ಆಗುತ್ತಿರುವ ಪ್ರಯಾಣಿಕರ ನೋವಿಗೆ ಸ್ಪಂದಿಸುವರೆ ಕಾದುನೋಡಬೇಕಿದೆ.

ರಸ್ತೆ ದಾಟಲು ಹೋದರೆ ಪ್ರಾಣಕ್ಕೆ ಸಂಚಕಾರ :

      ರಸ್ತೆಗಳ ಮಧ್ಯೆ ಅಡ್ಡಲಾಗಿ ಕಟ್ಟಿರುವ ಮಹಾನುಭಾವರ ಭಾವಚಿತ್ರ ಪಟಗಳನ್ನು ದಾಟಿ ಪಡ್ಡೆ ಹುಡುಗರು ಓಡಿಸುವ ಬೈಕ್ ಹಾವಳಿ, ಎರ್ರಾಬಿರ್ರಿ ಸಂಚರಿಸುವ ಆಟೋಗಳ ಕಿರಿಕಿರಿ ಅನುಭವಿಸಿಕೊಂಡು, ಪ್ರಯಾಣಿಕರು ತಮ್ಮ ಜೀವ ಕೈಹಿಡಿದು ರಸ್ತೆ ದಾಟುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಬರುವ ಬಸ್ಸುಗಳಿಗೆ, ಆಟೋಗಳಿಗೆ, ಹತ್ತಲು ಸಾರ್ವಜನಿಕರು ಫುಟ್‍ಪಾತ್‍ಗಳನ್ನು ಆಶ್ರಯಿಸಿದ್ದಾರೆ. ಪುಟ್‍ಪಾತ್ ವ್ಯಾಪಾರಿಗಳು ಹಾಗೂ ಖಾಸಗಿ ವಾಹನಗಳು ಮನಬಂದಂತೆ ಫುಟ್‍ಪಾತ್‍ಗಳನ್ನು ಆಕ್ರಮಿಸಿಕೊಂಡಿರುವುದರಿಂದ ರಸ್ತೆಕಾಣದಾಗಿದ್ದು, ಈ ಎಲ್ಲ ಕಡೆಯ ಪ್ರಯಾಣಿಕರು ವಾಹನಗಳನ್ನು ಏರಲು ನಡು ರಸ್ತೆಗೆ ಬಂದು ಕೈ ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿ ಹೀಗೆ ಮುಂದುವರೆದರೆ ನಿತ್ಯ ಸಂಚರಿಸುವ ಅಂಗವಿಕಲರು, ವಯೋವೃದ್ದರು, ಮಹಿಳೆಯರು, ಮಕ್ಕಳು ರಸ್ತೆದಾಟುವ ಸಲುವಾಗಿಯೇ ತಮ್ಮ ಪ್ರಾಣಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗುವುದರಲ್ಲಿ ಅನುಮಾನವಿಲ್ಲ.

ಸಾರ್ವಜನಿಕರಿಂದ ಹಿಡಿಶಾಪ :

      ಪಟ್ಟಣದ ಮಹಾವೀರ ನಗರ, ತುಮಕೂರು ರಸ್ತೆ, ಉದ್ಯಾನವನ, ದೇವಾಲಯಗಳ ಸಾಲಿನಲ್ಲಿ ಟೀ ಅಂಗಡಿಯ ಮುಂದೆ ಗಂಟೆಗಟ್ಟಲೆ ಮುಖ್ಯರಸ್ತೆಯನ್ನು ಆಕ್ರಮಿಸಿಕೊಂಡ ಬೈಕ್ ವಾಹನಗಳ ನಿಲುಗಡೆಯು ಪಾದಚಾರಿ ಸಂಚಾರಕ್ಕೆ ತೊಂದರೆಯಾಗಿದೆ. ಮದ್ದೂರು ರಸ್ತೆ, ಮುಜಾಫರ್‍ಖಾನೆ ಸಮೀಪ ಮತ್ತು ಹುಚ್ಚಮಾಸ್ತಿಗೌಡ ವೃತ್ತದ ಆಜು ಬಾಜು ಪ್ರದೇಶಗಳಲ್ಲಿ ಪಾದಚಾರಿ ಪುಟ್‍ಪಾತ್‍ಗಳು ಮಾಯವಾಗಿದ್ದು, ನಿತ್ಯ ನಾಗರಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದರೆ.

-ಎಂ.ಡಿ.ಮೋಹನ್

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link