ಕರ್ನೂಲ್‌ ದುರಂತ ಮಾಸುವ ಮುನ್ನವೇ ಮತ್ತೊಂದು ಪ್ರಕರಣ…..!

ಮುಂಬೈ

     ಆಂಧ್ರ ಪ್ರದೇಶದ ಕರ್ನೂಲ್‌ನಲ್ಲಿ ಇತ್ತೀಚೆಗೆ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು 19 ಮಂದಿ ಸಜೀವ ದಹನವಾಗಿರುವ ಘಟನೆಯ ಆಘಾತದಿಂದ ದೇಶ ಇನ್ನೂ ಹೊರ ಬಿದ್ದಿಲ್ಲ. ಅದಾಗಲೇ ಮಹಾರಾಷ್ಟ್ರದಲ್ಲಿ ಅಂತಹದ್ದೇ ಘಟನೆಯೊಂದು ನಡೆದಿದ್ದು, ಐಷಾರಾಮಿ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ . ಬಸ್‌ ಚಾಲಕನ ಸಮಯಪ್ರಜ್ಞೆಯಿಂದ ಅದೃಷ್ಟವಶಾತ್‌ ಯಾವುದೇ ಅನಾಹುತ ಸಂಭವಿಸಿಲ್ಲ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ಬಸ್‌ ನಿಲ್ಲಿಸಿ ಪ್ರಯಾಣಿಕರ ಜೀವ ಉಳಿಸಿದ್ದಾನೆ. ಸಮೃದ್ಧಿ ಹೆದ್ದಾರಿಯಲ್ಲಿ  ಅಕ್ಟೋಬರ್‌ 29ರ ಮುಂಜಾನೆ ಈ ಘಟನೆ ನಡೆದಿದೆ.

    ಘಟನೆ ವೇಳೆ ಖಾಸಗಿ ಬಸ್‌ ಮುಂಬೈಯಿಂದ ಜಲ್ನಾಗೆ ತೆರಳುತ್ತಿತ್ತು. ಬಸ್‌ನಲ್ಲಿ 12 ಪ್ರಯಾಣಿಕರು, ಚಾಲಕ, ಆತನ ಸಹಾಯಕ ಸೇರಿ ಒಟ್ಟು 14 ಮಂದಿ ಇದ್ದರು. ಇದ್ದಕ್ಕಿದ್ದಂತೆ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ಬಸ್‌ ಅನ್ನು ರಸ್ತೆ ಬಳಿ ನಿಲ್ಲಿಸಿ ಪ್ರಯಾಣಿರನ್ನೆಲ್ಲ ಸುರಕ್ಷಿತವಾಗಿ ಕೆಳಗೆ ಇಳಿಸಿ, ದೊಡ್ಡ ಅನಾಹುತವನ್ನು ತಪ್ಪಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

     ʼರಾಷ್ಟ್ರೀಯ ಹೆದ್ದಾರಿ ನಾಗಪುರ ಲೇನ್‌ನಲ್ಲಿ ಮುಂಜಾನೆ ಸುಮಾರು 3 ಗಂಟೆಗೆ ಘಟನೆ ವರದಿಯಾಗಿದ್ದು, ಚಾಲಕ ಹುಸೇನ್‌ ಸಯ್ಯದ್ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ದುರಂತದಿಂದ ಪಾರಾಗಿದ್ದಾರೆʼʼ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಬಸ್‌ನಲ್ಲಿ ಯಾವ ಕಾರಣಕ್ಕೆ ಬೆಂಕಿ ಕಾಣಿಸಿಕೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ. 

    ಸದ್ಯ ಘಟನೆಯ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ, ಹೆದ್ದಾರಿ ಪೊಲೀಸರು, ಟೋಲ್‌ ಗೇಟ್‌ ಸಿಬ್ಬಂದಿ ಬೆಂಕಿ ನಂದಿಸಿದರು. ಆಂಬುಲೆನ್ಸ್‌ ಮತ್ತು ತುರ್ತು ಚಿಕಿತ್ಸಾ ತಂಡವೂ ಸ್ಥಳದಲ್ಲಿ ಹಾಜರಿತ್ತು. ನಾಗಪುರ ಲೇನ್‌ನಲ್ಲಿ ಕೆಲಹೊತ್ತು ಸಂಚಾರ ವ್ಯವಸ್ಥೆಯಲ್ಲಿ ಏರುಪೇರಾಗಿತ್ತು.

   ಇದೇ ರೀತಿಯ ಮತ್ತೊಂದು ಘಟನೆ ಅಕ್ಟೋಬರ್‌ 26ರಂದು ನಡೆದಿತ್ತು. ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯ ರೆವ್ರಿ ಟೋಲ್ ಪ್ಲಾಜಾ ಬಳಿ ಡಬಲ್ ಡೆಕ್ಕರ್ ಸ್ಲೀಪರ್ ಬಸ್‌ಗೆ ಬೆಂಕಿ ಹೊತ್ತಿಕೊಂಡಿತು. ಎಲ್ಲ 70 ಪ್ರಯಾಣಿಕರನ್ನು ಚಾಲಕ ಮತ್ತು ನಿರ್ವಾಹಕರು ಸುರಕ್ಷಿತವಾಗಿ ಸ್ಥಳಾಂತರಿಸುವ ಮೂಲಕ ಭಾರಿ ಅನಾಹುತವನ್ನು ತಪ್ಪಿಸಿದ್ದರು. 

   ಹೈದರಾಬಾದ್‌ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಎಸಿ ಸ್ಲೀಪರ್ ಬಸ್‌ಗೆ ಅಕ್ಟೋಬರ್‌ 24ರ ಮುಂಜಾನೆ 3 ಗಂಟೆ ಸುಮಾರಿಗೆ ಕರ್ನೂಲ್‌ನಲ್ಲಿ ಮೋಟಾರ್‌ಸೈಕಲ್‌ ಡಿಕ್ಕಿ ಹೊಡೆದಿತ್ತು. ಬೈಕ್ ಬಸ್‌ನ ಕೆಳಗೆ ಸಿಲುಕಿಕೊಂಡು ಬಹಳ ದೂರ ಎಳೆದುಕೊಂಡು ಹೋಗಿತ್ತು. ಇದರಿಂದ ಉಂಟಾದ ಘರ್ಷಣೆಯಿಂದಾಗಿ ಕಿಡಿಗಳು ಹೊತ್ತಿಕೊಂಡು, ಬಸ್‌ಗೆ ಬೆಂಕಿ ತಗುಲಿತ್ತು. ಈ ಘಟನೆಯಲ್ಲಿ ಸುಮಾರು 19 ಮಂದಿ ಬಲಿಯಾಗಿದ್ದರು. ಜತೆಗೆ ಬಸ್‌ ಸಂಪೂರ್ಣ ಸುಟ್ಟು ಭಸ್ಮವಾಗಿತ್ತು. ಸದ್ಯ ಸ್ಲೀಪರ್‌ ಬಸ್‌ಗಳಲ್ಲಿ ಬೆಂಕಿ ಆಕಸ್ಮಿಕ ಘಟನೆಗಳ ಸಂಖ್ಯೆ ಹೆಚ್ಚತ್ತಿರುವುದು ಆತಂಕಕ್ಕೆ ಕಾರಣವಾಗಿದೆ

Recent Articles

spot_img

Related Stories

Share via
Copy link