ಬೆಂಗಳೂರು :
ಸೋಮವಾರ ಅಲ್ಪ ಕುಸಿತ ಕಂಡಿದ್ದ ಚಿನ್ನದ ಬೆಲೆ ನಿರೀಕ್ಷೆಯಂತೆಯೇ ಮಂಗಳವಾರ ಕೂಡ ಮತ್ತಷ್ಟು ಬೆಲೆ ಕುಸಿತವಾಗಿದೆ. ಸತತ ಎರಡನೇ ದಿನ ಚಿನ್ನದ ಬೆಲೆ ಕುಸಿತವಾಗಿದ್ದು, ಹೂಡಿಕೆದಾರರ ಮತ್ತು ಆಭರಣ ಪ್ರಿಯರಲ್ಲಿ ಬೆಲೆ ಕುಸಿತದ ನಿರೀಕ್ಷೆ ಹೆಚ್ಚಿಸಿದೆ. ಯುಎಸ್ ಫೆಡರಲ್ ರಿಸರ್ವ್ ಬಡ್ಡಿ ಕಡಿತ ಮಾಡುವುದನ್ನು ಎದುರು ನೋಡುತ್ತಿದ್ದು, ಚಿನ್ನದ ಬೆಲೆಯಲ್ಲಿ ಅಲ್ಪ ಕುಸಿತಕ್ಕೆ ಕಾರಣವಾಗಿದೆ.
ಅಮೆರಿಕ ಚುನಾವಣೆ ಕೂಡ ಚಿನ್ನದ ಬೆಲೆ ಮೇಲೆ ಪರಿಣಾಮ ಬೀರುವ ನಿರೀಕ್ಷೆ ಮಾಡಲಾಗಿದೆ. ಸದ್ಯ ಚಿನ್ನದ ಬೆಲೆ ಕುಸಿತ ಕಂಡಿದ್ದರೂ, ಮುಂದಿನ ದಿನಗಳಲ್ಲಿ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ. 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಇಂದು 200 ರೂಪಾಯಿ ಕುಸಿದು 70,950 ರೂಪಾಯಿಯಲ್ಲಿ ವಹಿವಾಟು ನಡೆಸಿದೆ. 100 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 2200 ರೂಪಾಯಿಗಳಷ್ಟು ಕುಸಿದು 7,74,000 ರೂಪಾಯಿಗೆ ಮಾರಾಟವಾಗುತ್ತಿದೆ.
1 ಗ್ರಾಂ 22 ಕ್ಯಾರಟ್ ಅಥವಾ ಆಭರಣ ಚಿನ್ನದ ಬೆಲೆಯಲ್ಲಿ 20 ರೂಪಾಯಿ ಕಡಿಮೆಯಾಗಿದೆ. ಮಂಗಳವಾರ ಪ್ರತಿ ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 7095 ರೂಪಾಯಿಗೆ ಇಳಿಕೆಯಾಗಿದೆ. 18 ಕ್ಯಾರಟ್ ಚಿನ್ನ ಬೆಲೆ 10 ಗ್ರಾಂಗೆ 170 ರೂಪಾಯಿ ಕಡಿಮೆಯಾಗಿದ್ದು, 58,050 ರೂಪಾಯಿಗಳಲ್ಲಿ ವಹಿವಾಟು ನಡೆಸುತ್ತಿದೆ. 100 ಗ್ರಾಂ 18 ಕ್ಯಾರಟ್ ಚಿನ್ನದ ಬೆಲೆ 1700 ಕುಸಿತವಾಗಿದ್ದು 5,80,500 ರೂಪಾಯಿಗೆ ಮಾರಾಟವಾಗುತ್ತಿದೆ.
ಆಗ್ಮಾಂಟ್ ಗೋಲ್ಡ್ ಫಾರ್ ಆಲ್ ಮುಖ್ಯ ಸಂಶೋಧಕಿ ರೆನಿಶಾ ಚೈನಾನಿ ಪ್ರಕಾರ, ಯುಎಸ್‌ನಲ್ಲಿ ಫೆಡರಲ್ ರಿಸರ್ವ್ 25 ಬೇಸಿಸ್ ಪಾಯಿಂಟ್ ಬಡ್ಡಿದರ ಕಡಿತ ಮಾಡುವ ಮುನ್ಸೂಚನೆ ಹೊರತಾಗಿಯೂ, ನವೆಂಬರ್ ನಲ್ಲಿ ಮತ್ತೊಮ್ಮೆ ಬಡ್ಡಿದರ ಇಳಿಕೆ ಮಾಡುವ ನಿರೀಕ್ಷೆಗಳು ಚಿನ್ನದ ಬೇಡಿಕೆಯನ್ನು ಕಡಿಮೆ ಮಾಡಿವೆ. ಆದರೂ ಮಧ್ಯಪ್ರಾಚ್ಯ ರಾಷ್ಟ್ರಗಳ ನಡುವಿನ ಬಿಕ್ಕಟ್ಟು, ಯುದ್ಧದ ಭೀತಿಯಿಂದ ಚಿನ್ನದ ಬೆಲೆ ಏರಿಕೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈಗ ಕುಸಿಯುತ್ತಿರುವ ಚಿನ್ನದ ಬೆಲೆ ತಾತ್ಕಾಲಿಕವೆಂದು ನಿರೀಕ್ಷೆ ಮಾಡಲಾಗಿತ್ತು, ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಏರಿಕೆಯ ಹಾದಿಗೆ ಮರಳುವುದು ಖಚಿತವಾಗಿದೆ.
ಮಂಗಳವಾರ ಒಂದೇ ದಿನ ಬೆಳ್ಳಿ ಬೆಲೆಯಲ್ಲಿ ಭಾರಿ ಕುಸಿತ ಕಂಡಿದೆ ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 7500 ರೂಪಾಯಿ ಕುಸಿತವಾಗಿದೆ. ಸೋಮವಾರ ಸ್ಥಿರತೆ ಕಾಯ್ದುಕೊಂಡಿದ್ದ ಬೆಳ್ಳಿ ಧಾರಣ, ಇಂದು ಪತನ ಕಂಡಿದ್ದು ಮತ್ತೆ 90,000 ರೂಪಾಯಿ ಒಳಗೆ ವಹಿವಾಟು ನಡೆಸುತ್ತಿದೆ. ಸೋಮವಾರ 93,500 ಇದ್ದ ಒಂದು ಕೆಜಿ ಬೆಳ್ಳಿ ಬೆಲೆ ಮಂಗಳವಾರ 86,000 ರೂಪಾಯಿಗೆ ಕುಸಿದಿದೆ. ಅಕ್ಟೋಬರ್ 12ರಂದು 84,900 ರೂಪಾಯಿ ಇದ್ದ ಒಂದು ಕೆಜಿ ಬೆಳ್ಳಿ ಬೆಲೆ ಅಕ್ಟೋಬರ್ 13ರಂದು ಒಂದೇ ದಿನ 8600 ರೂಪಾಯಿಗಳ ಭರ್ಜರಿ ಏರಿಕೆ ಕಂಡು, 93,500 ರೂಪಾಯಿಗೆ ತಲುಪಿತ್ತು.
