ಬೆಂಗಳೂರು:
ಕೋಲಾರ ಲೋಕಸಭಾ ಮೀಸಲು ಕ್ಷೇತ್ರಕ್ಕೆ ಕೊನೆಗೂ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಿಸಿದೆ. ಭಾರೀ ರಾಜಕೀಯ ಹೈಡ್ರಾಮಾಕ್ಕೆ ತೆರೆಬಿದ್ದಿದ್ದು, ಕಾರ್ಪೊರೇಟರ್ ವಿಜಯ್ ಕುಮಾರ್ ಅವರ ಪುತ್ರ ಕೆ ವಿ ಗೌತಮ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಲಾಗಿದೆ.
ಈ ಕುರಿತು ಎಐಸಿಸಿ ಅಧಿಕೃತ ಪ್ರಕಟಣೆ ಹೊರಡಿಸಿದೆ. ಈ ಮೂಲಕ ಸಚಿವ ಕೆ ಹೆಚ್ ಮುನಿಯಪ್ಪ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣಕ್ಕೆ ಹಿನ್ನಡೆಯಾಗಿದೆ. ಕೋಲಾರ ಮೀಸಲು ಲೋಕಸಭೆ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆ ಭಾರೀ ಕಗ್ಗಂಟಾಗಿ ಎಡಗೈ ಮತ್ತು ಬಲಗೈ ಬಣಗಳು ತೀವ್ರ ಹೊಡೆದಾಟ ನಡೆಸಿದ್ದವು.
ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿ, ಎಸ್‌ಸಿ ಮೀಸಲು ಕ್ಷೇತ್ರವಾಗಿರುವ ಕೋಲಾರದಲ್ಲಿ ಅಭ್ಯರ್ಥಿಯಾಗಿ ಕೆವಿ ಗೌತಮ್ ಅವರ ಹೆಸರನ್ನು ಒಪ್ಪಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ. ಕೋಲಾರ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್‌ನ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನ ಮಲ್ಲೇಶ್ ಬಾಬು ಕಣಕ್ಕಿಳಿದಿದ್ದಾರೆ.
ಟಿಕೆಟ್ ಆಯ್ಕೆಯ ಕಗ್ಗಂಟಿನ ನಡುವೆ ಬೆಂಗಳೂರು ಕೇಂದ್ರ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿರುವ ಕೆವಿ ಗೌತಮ್ ಹೆಸರನ್ನು ಶಿಫಾರಸು ಮಾಡಲಾಗಿತ್ತು. ಕೋಲಾರದಲ್ಲಿ ಪ್ರಾತಿನಿಧ್ಯಕ್ಕಾಗಿ ರಮೇಶ್ ಕುಮಾರ್ ಹಾಗೂ ಮುನಿಯಪ್ಪ ಅವರ ತಿಕ್ಕಾಟದ ನಡುವೆ ಎರಡೂ ಬಣಗಳಿಗೆ ಒಪ್ಪಿಗೆಯಾಗಬಲ್ಲ ಮೂರು ಹೆಸರನ್ನು ಶಿಫಾರಸು ಮಾಡಲಾಗಿತ್ತು. ಅದರಲ್ಲಿ ಕೆವಿ ಗೌತಮ್ ಅವರ ಹೆಸರೇ ಪ್ರಮುಖವಾಗಿತ್ತು. ಕೊನೆಗೆ ಇದೇ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಅಂತಿಮ ಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ