ಲಕ್ಷ್ಮಿ ಹೆಬ್ಬಾಳ್ಕರ್‌ ಸಿ ಟಿ ರವಿ ಕೇಸ್‌ :ಫೆ.13ಕ್ಕೆ ಮುಂದೂಡಿಕೆ…!

ಬೆಂಗಳೂರು

   ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿಷಯಕ್ಕೆ ಸಂಬಂಧಿಸಿ ತಮ್ಮ ವಿರುದ್ಧದ ಪ್ರಕರಣ ರದ್ದತಿ ಕೋರಿ ಬಿಜೆಪಿ ಎಂಎಲ್​​ಸಿ ಸಿಟಿ ರವಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಕರ್ನಾಟಕ ಹೈಕೋರ್ಟ್​​ನಲ್ಲಿ ಗುರುವಾರ ನಡೆಯಿತು. ನ್ಯಾ. ನಾಗಪ್ರಸನ್ನ ಅವರಿದ್ದ ಪೀಠ ವಿಚಾರಣೆ ನಡೆಸಿತು. ವಾದ, ಪ್ರತಿವಾದ ಆಲಿಸಿದ ಕೋರ್ಟ್​, ವಿಚಾರಣೆಯನ್ನು ಫೆಬ್ರವರಿ 13ಕ್ಕೆ ಮುಂದೂಡಿಕೆ ಮಾಡಿದೆ. ಹೈಕೋರ್ಟ್ ವಿಚಾರಣೆ ವೇಳೆ ವಿವಿಧ ವಿಚಾರಗಳ ಪ್ರಸ್ತಾಪವಾಯಿತು.

   ಸಿಟಿ ರವಿ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ವಾದ ಮಂಡಿಸಿ, ವಿಧಾನ ಪರಿಷತ್​​ನಲ್ಲಿ ಘಟನೆ ನಡೆದಿರುವುದರಿಂದ ರವಿ ಅವರಿಗೆ ಶಾಸಕಾಂಗ ವಿನಾಯಿತಿ ಇದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.ಈ ವೇಳೆ, ಲಕ್ಷ್ಮೀ ಹೆಬ್ಬಾಳ್ಕರ್ ದೂರುದಾರರೇ ಎಂದು ನ್ಯಾ. ನಾಗಪ್ರಸನ್ನ ಪ್ರಶ್ನಿಸಿದರು. ಇದೇ ವೇಳೆ, ಹೆಬ್ಬಾಳ್ಕರ್ ಪ್ರಕರಣದಲ್ಲಿ ಕಕ್ಷಿದಾರರಾಗಿ ಇರುವುದಾಗಿ ವಕೀಲರು ದೃಢಪಡಿಸಿದರು. 

   ಸದನದ ಸದಸ್ಯರಿಗೆ ನೀಡಿದ ರಕ್ಷಣೆ ಏನು? ಸಭಾಪತಿಗಳು ಪೀಠದಲ್ಲಿ ಇಲ್ಲದೆ ಇದ್ದ ಸಂದರ್ಭದಲ್ಲಿಯೂ ಅದು ಅನ್ವಯವಾಗುತ್ತದೆಯೇ? ಶಾಸಕಾಂಗವು ಈ ಪ್ರಕರಣದ ಬಗ್ಗೆ ಗಮನಹರಿಸಿ ತೀರ್ಪು ನೀಡಿದ ನಂತರ, ಸಿಐಡಿಯಂತಹ ಸಂಸ್ಥೆ ಇನ್ನೂ ತನಿಖೆ ನಡೆಸಬಹುದೇ ಎಂದು ಪ್ರಭುಲಿಂಗ ನಾವದಗಿ ಪ್ರಶ್ನಿಸಿದರು.

    ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ನಾಗಪ್ರಸನ್ನ, ಆದರೆ ಮಾತನಾಡಿದ ವಿಷಯಕ್ಕೂ ಶಾಸಕಾಂಗಕ್ಕೂ ಯಾವುದೇ ಸಂಬಂಧವಿಲ್ಲದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.ಆಗ ಸೀತಾ ಸೊರೇನ್ ಹಾಗೂ ಕೇಂದ್ರ ಸರ್ಕಾರದ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್​ ನೀಡಿದ್ದ ತೀರ್ಪನ್ನು ನಾವದಗಿ ಉಲ್ಲೇಖಿಸಿದರು. ಸಂವಿಧಾನದ ಆರ್ಟಿಕಲ್ 194(2) ರ ಅನ್ವಯ ಸದನದಲ್ಲಿದ್ದಾಗ ಸದಸ್ಯರು ಅಲ್ಲಿನ ಕಾನೂನು ವ್ಯಾಪ್ತಿಗೇ ಬರುತ್ತಾರೆ. ಪರಿಸ್ಥಿತಿಯ ಆಧಾರದ ಮೇಲೆ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದರು. ಆರ್ಟಿಕಲ್ 194(2) ಶಾಸಕನಿಗೆ ನಿರ್ಭೀತಿಯಿಂದ ಮಾತನಾಡಲು ಅವಕಾಶ ನೀಡುತ್ತದೆ. ಅವರಿಗೆ ಸದನದ ಒಳಗೆ ಸಂಪೂರ್ಣ ಹಕ್ಕಿದೆ ಎಂದರು.

   ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಏನನ್ನೂ ಮಾತನಾಡಲು ಸಂಪೂರ್ಣ ಸ್ವಾತಂತ್ರ್ಯ ಇದಯೇ? ಈ ಪ್ರಕರಣದಲ್ಲಿ ಆಡಿದ್ದಾರೆ ಎನ್ನಲಾದ ಮಾತುಗಳನ್ನೂ ಆಡಬಹುದೇ ಎಂದು ಪ್ರಶ್ನಿಸಿದರು.ಮಾತನಾಡಿದ ವಿಷಯವನ್ನು ಕಾನೂನಿನಡಿಯಲ್ಲಿ ದೂಷಣೆ ಎಂದು ಪರಿಗಣಿಸಿದರೂ, ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕನ್ನು ಸದನ ಹೊಂದಿರುತ್ತದೆ ಮತ್ತು ಯಾವುದೇ ಬಾಹ್ಯ ಸಂಸ್ಥೆ ಅಲ್ಲ ಎಂದು ನಾವದಗಿ ವಾದ ಮಂಡಿಸಿದರು. 

   ವಿಚಾರಣಾ ನ್ಯಾಯಾಲಯದ ಮುಂದೆ ಬಾಕಿ ಉಳಿದಿರುವ ಪ್ರಕ್ರಿಯೆಗಳ ಮೇಲೆ ವಿಧಿಸಲಾದ ತಡೆಯಾಜ್ಞೆಯನ್ನು ತೆರವು ಮಾಡಲು ಎಸ್​​ಪಿಪಿ ನ್ಯಾಯಾಲಯವನ್ನು ಮನವಿ ಮಾಡಿದರು. ಹೈಕೋರ್ಟ್ ಆದೇಶದ ಕಾರಣ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಕೈಗಳನ್ನು ಕಟ್ಟಿಹಾಕಿದಂತಾಗಿದೆ. ಸಿಟಿ ರವಿ ಅವರ ವಾಯ್ಸ್ ಸ್ಯಾಂಪಲ್ ಪಡೆಯುವುದಕ್ಕೆ ಸಂಬಂಧಿಸಿದ ಅರ್ಜಿ ಬಾಕಿ ಇದೆ ಎಂದರು. 

   ವಾದ ಪ್ರತಿವಾದ ಆಲಿಸಿದ ಹೈಕೋರ್ಟ್, ಮುಂದಿನ ವಿಚಾರಣೆಯನ್ನು ಫೆಬ್ರವರಿ 13ಕ್ಕೆ ನಿಗದಿಪಡಿಸಿದೆ. ಈ ಹಿಂದೆ ಸಿಟಿ ರವಿ ವಿರುದ್ಧ ಜನವರಿ 30 ರವರೆಗೆ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಸೂಚನೆ ನೀಡಿತ್ತು.

Recent Articles

spot_img

Related Stories

Share via
Copy link