ಡರ್ಬನ್:
ಟೀಮ್ ಇಂಡಿಯಾ ವಿರುದ್ಧ ಬಾರಿಸಿದ ಒಂದು ಸಿಕ್ಸ್ನೊಂದಿಗೆ ಹೆನ್ರಿಕ್ ಕ್ಲಾಸೆನ್ 2024ರ ಕ್ಯಾಲೆಂಡರ್ ವರ್ಷದಲ್ಲಿ ಟಿ20 ಕ್ರಿಕೆಟ್‌ನಲ್ಲಿ100 ಸಿಕ್ಸರ್ ಬಾರಿಸಿದ ದಕ್ಷಿಣ ಆಫ್ರಿಕಾದ ಮೊದಲ ಬ್ಯಾಟರ್ ಹಾಗೆಯೇ ವಿಶ್ವದ 2ನೇ ಆಟಗಾರ ಎಂಬ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ. ವಿಶ್ವದಾಖಲೆ ವೆಸ್ಟ್ ಇಂಡೀಸ್ ತಂಡದ ಎಡಗೈ ಬ್ಯಾಟರ್ ನಿಕೋಲಸ್ ಪೂರನ್ ಹೆಸರಿನಲ್ಲಿದೆ. ಪೂರನ್ 2024ರಲ್ಲಿ ಸದ್ಯ 165 ಸಿಕ್ಸರ್ ಬಾರಿಸಿದ್ದಾರೆ. ಒಟ್ಟಾರೆಯಾಗಿ ಕ್ಯಾಲೆಂಡರ್ ವರ್ಷದಲ್ಲಿ 100 ಸಿಕ್ಸರ್ ಬಾರಿಸಿದ ಯಾದಿಯಲ್ಲಿ ಹೆನ್ರಿಚ್ ಕ್ಲಾಸೆನ್‌ಗೆ ನಾಲ್ಕನೇ ಸ್ಥಾನ.
ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾದ ಹೆನ್ರಿಚ್ ಕ್ಲಾಸೆನ್ ಶುಕ್ರವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ನಿರೀಕ್ಷಿತ ಬ್ಯಾಟಿಂಗ್ ತೋರುವಲ್ಲಿ ವಿಫಲರಾಗಿದ್ದರು. ಒಂದೊಮ್ಮೆ ಅವರು ಸಿಡಿದು ನಿಲ್ಲುತ್ತಿದ್ದರೆ ಭಾರತಕ್ಕೆ ಸೋಲು ಎದುರಾಗುವ ಸಾಧ್ಯತೆಯೂ ಇತ್ತು. 22 ಎಸೆತ ಎದುರಿಸಿದ ಅವರು 25 ರನ್ ಮಾತ್ರ ಗಳಿಸಿದರು. ಈ ಹಿಂದೆ ಐಪಿಎಲ್ ಟೂರ್ನಿಯಲ್ಲಿ ಹೈದರಾಬಾದ್ ತಂಡದ ಪರ ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಹಲವು ಪಂದ್ಯಗಳಲ್ಲಿ ತಂಡಕ್ಕೆ ಸ್ಮರಣೀಯ ಗೆಲುವು ತಂದು ಕೊಟ್ಟಿದ್ದರು. ಇದೇ ಕಾರಣಕ್ಕೆ ಅವರನ್ನು ಹೈದರಾಬಾದ್ ತಂಡ 23 ಕೋಟಿ ರೂ. ನೀಡಿ ರಿಟೇನ್ ಮಾಡಿಕೊಂಡಿದೆ.
ಪಂದ್ಯಕ್ಕೂ ಮುನ್ನ ಭಾರತದ ರಾಷ್ಟ್ರಗೀತೆಯನ್ನು ಎರಡು ಬಾರಿ ಅಸಮರ್ಪಕವಾಗಿ ಹಾಕಲಾಯಿತು. ಮೊದಲ ಬಾರಿಗೆ ಜನಗಣಮನ ಆರಂಭವಾದ ಕೆಲವೇ ಕ್ಷಣಗಳಲ್ಲಿ ಸ್ಥಗಿತಗೊಂಡಿತು. ಆದರೆ ಆಟಗಾರರು ಗಾಯನವನ್ನುಮುಂದುವರಿಸಿದರು. ಆಟಗಾರರು ಜಯ ಜಯ ಜಯ ಜಯ ಹೇ ಎಂದು ಹಾಡಿ ಮುಗಿಸಿದಾಗ ಮತ್ತೆ ಆಡಿಯೊವನ್ನು ಪ್ರಸಾರ ಮಾಡಲಾಯಿತು. ಒಂದು ಕ್ಷಣ ಆಟಗಾರರು ಗಲಿಬಿಲಿಗೊಂಡರೂ ಮತ್ತೆ ರಾಷ್ಟ್ರಗೀತೆಯನ್ನು ಸಂಪೂರ್ಣವಾಗಿ ಹಾಡುವ ಮೂಲಕ ರಾಷ್ಟ್ರಗೀತೆಗೆ ಗೌರವ ಸೂಚಿಸಿದರು. ಆಟಗಾರರ ಈ ನಡೆಗೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ.
ಗೆಲುವಿನೊಂದಿಗೆ ಭಾರತ 2024ರ ಕ್ಯಾಲೆಂಡರ್ ವರ್ಷದಲ್ಲಿ ಅತ್ಯಧಿಕ ಟಿ20 ಪಂದ್ಯಗಳನ್ನು ಗೆದ್ದ ತಂಡ ಎಂಬ ದಾಖಲೆಯನ್ನೂ ನಿರ್ಮಿಸಿದೆ. ಇದು 2024ರಲ್ಲಿ ಭಾರತಕ್ಕೆ ಒಲಿದ 22ನೇ ಗೆಲುವು. ವಿಶ್ವ ದಾಖಲೆ ಉಗಾಂಡ ಹೆಸರಿನಲ್ಲಿದೆ. 2023ರಲ್ಲಿ ಉಗಾಂಡ ಶೇ. 87.9 ಗೆಲುವಿನ ಪ್ರತಿಶತದೊಂದಿಗೆ 29 ಪಂದ್ಯವನ್ನು ಗೆದ್ದು ಬೀಗಿತ್ತು. ಭಾರತ 2022ರಲ್ಲಿ ಶೇ.70.0 ಗೆಲುವಿನ ಪ್ರತಿಶತದೊಂದಿಗೆ 28 ಗೆಲುವು ಸಾಧಿಸಿತ್ತು.