ನಾನೇನು ಹೆಚ್ಚು ಓದಿದವಳಲ್ಲ : ಲಕ್ಷ್ಮಿ ಹೆಬ್ಬಾಳ್ಕರ್

ವಿಜಯಪುರ: 

   ನಾನೇನು ಹೆಚ್ಚು ಓದಿದವಳಲ್ಲ, ನಾವು 5 ಜನ ಹೆಣ್ಣು ಮಕ್ಕಳು, ನಾನು ಎರಡನೆಯವಳು, ನೋಡೋಕೆ ಚೆಂದ ಇದ್ದೀವಿ, 10ನೇ ಕ್ಲಾಸ್ ಇದ್ದಾಗ ನಮ್ಮಪ್ಪ ಮದ್ವೆ ಮಾಡಿಕೊಟ್ಟುಬಿಟ್ಟ, ಎಲ್ಲಿ ಕಲಿಯೋದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

    ವಿಜಯಪುರದಲ್ಲಿ ನಿನ್ನೆ ಸಿದ್ಧೇಶ್ವರ ಮಹಾಸ್ವಾಮಿಗಳ ‘ಗುರುನಮನ’ ಮಹೋತ್ಸವದ ಪ್ರಯುಕ್ತ ವಿಜಯಪುರದ ಜ್ಯಾನಯೋಗಾಶ್ರಮದಲ್ಲಿ ಹಮ್ಮಿಕೊಂಡಿದ್ದ ‘ ಮಹಿಳೆ ಮತ್ತು ಸಂಸ್ಕ್ರತಿ ’ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣುಮಕ್ಕಳು ಮಾನಸಿಕವಾಗಿ, ಆರ್ಥಿಕವಾಗಿ ಸಬಲರಾಗಬೇಕು, ಎಂದಿಗೂ ದುರ್ಬಲರಾಗಬಾರದು ಎಂದು ಹೇಳಿದರು. ನಮ್ಮ ತಂದೆ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡಿಕೊಟ್ಟರೂ ನಮ್ಮ ತಾಯಿ, ಅಜ್ಜಿ ಹೇಳಿಕೊಟ್ಟ ಸಂಸ್ಕೃತಿಯಿಂದ ಇಂದು ನಿಮ್ಮ ಮುಂದೆ ನಿಂತು ಮಾತನಾಡುವ ಧೈರ್ಯವನ್ನು ಕಲಿಸಿಕೊಟ್ಟಿತು ಎಂದರು.

    ಭಾರತ ದೇಶದಲ್ಲಿ ಹೆಣ್ಣನ್ನು ಬರೀ ಮನೆ, ಮಗುವನ್ನು ಹೆರೋಕೆ, ಲಾಲಿ ಹಾಡೋಕೆ, ಅಡುಗೆ ಮಾಡಲು, ಸಂಸ್ಕೃತಿ ಉಳಿಸೋದಿಕ್ಕಷ್ಟೇ ಎಂದು ಸೀಮಿತಗೊಳಿಸಿದ್ದ ಕಾಲವಿತ್ತು. ಆದರೆ ಇಂದು ಹೆಣ್ಣು ಪೈಲಟ್ ಆಗಿದ್ದಾಳೆ, ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡುತ್ತಾಳೆ, ಕುಟುಂಬ ನಿರ್ವಹಣೆ, ಸಂಸಾರದ ಚಕ್ಕಡಿಯನ್ನು ಹೊರುವವಳಾಗಿದ್ದಾಳೆ ಎಂದು ಶ್ಲಾಘಿಸಿದರು.

    ನಿತ್ಯ ನಮ್ಮ ಕಾಯಕದಲ್ಲಿ ಭಗವಂತನನ್ನು ಕಾಣಬೇಕು, ನಮ್ಮ ಜೀವನ ಆದರ್ಶಪ್ರಾಯವಾಗಬೇಕು. ಹೆಣ್ಣು-ಗಂಡುವಿನ ಬಗ್ಗೆ ನಮ್ಮ ಭಾವನೆಗಳು ಬದಲಾಗಬೇಕು. ಸಂಸ್ಕೃತಿಯ ಬ್ರಾಂಡ್ ಅಂಬಾಸಿಡರ್ ಮಹಿಳೆ. ನಮ್ಮ ದೇಶದಲ್ಲಿ, ವಿಶ್ವದಲ್ಲಿ ಸಂಸ್ಕೃತಿ, ಮಾನವೀಯತೆ ಉಳಿದಿದ್ದರೆ ಅದಕ್ಕೆ ಕಾರಣ ಮಹಿಳೆ ಎಂದರು.

    ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಪುರುಷರು ಮಹಿಳೆಯರ ಬಗ್ಗೆ ಆಲೋಚಿಸುವುದಿಲ್ಲ. ಆದರೆ ಮಹಿಳೆ ಕೂಲಿಯಾದರೂ ಮಾಡಿ ತನ್ನ ಸಂಸಾರವನ್ನು ನಿರ್ವಹಿಸುತ್ತೇನೆ ಎಂದು ಆತ್ಮವಿಶ್ವಾಸ, ಛಲ, ಧೈರ್ಯ ತೋರಿಸುತ್ತಾಳೆ ಎಂದು ಶ್ಲಾಘಿಸಿದರು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap