ಗುಬ್ಬಿ:
ಕೃಷಿ ಕಾಯಿದೆ ವಾಪಸ್ ಪಡೆದ ಕೇಂದ್ರ ಸರ್ಕಾರದಿಂದ ಕಾಯಿದೆ ವಾಪಸ್ಸಾತಿಯನ್ನು ಖಚಿತ ಎಚ್ಚರ ತಪ್ಪದೆ ಪಡೆಸಿಕೊಳ್ಳಬೇಕಿದೆ. ಕೇಂದ್ರವು ಈ ಕುರಿತು ಗೆಜೆಟ್ ಆದೇಶ ಹೊರಡಿಸಬೇಕು. ಜೊತೆಗೆ ರಾಜ್ಯ ಸರ್ಕಾರ ಕೂಡಾ ಕಾಯಿದೆ ಮರಳಿ ವಾಪಸ್ ಪಡೆಯಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಒತ್ತಾಯಿಸಿದರು.
ಪಟ್ಟಣದ ಎಪಿಎಂಸಿ ಅವರಣದಲ್ಲಿ ರೈತ ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹೋರಾಟದ ಜೊತೆ ಬೆಂಬಲ ಬೆಲೆ ಖಾತರಿ ಕಾನೂನು ಹಾಗೂ ಖಾಸಗಿ ವಿದ್ಯುತ್ ಮಸೂದೆಯನ್ನು ಸಹ ಕೂಡಲೆ ಇತ್ಯರ್ಥಗೊಳಿಸಿ, ನಿರಂತರ ರೈತ ಹೋರಾಟದಲ್ಲಿ ಹುತಾತ್ಮರಾದ 700ಕ್ಕೂ ಅಧಿಕ ರೈತ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಿ, ಈ ದುರ್ಘಟನೆಗೆ ಕಾರಣರಾದವರಿಗೆ ಶಿಕ್ಷಿಸಬೇಕು ಎಂದು ಆಗ್ರಹಿಸಿದರು.
ರೈತರನ್ನು ಮುಗಿಸಲು ಸರ್ವಾಧಿಕಾರಿ ಧೋರಣೆ ಮಾಡುತ್ತಿರುವ ಕೇಂದ್ರ ಸರ್ಕಾರ ಕಾರ್ಪೋರೇಟ್ ಕಂಪೆನಿಗಳ ಗುಲಾಮಗಿರಿ ಮಾಡುತ್ತಿದೆ. ಶೋಷಣೆಗೆ ಆಸ್ಪದ ನೀಡುವ ಕಾರ್ಮಿಕ ವಿರೋಧಿ ನಾಲ್ಕು ಸಂಹಿತೆಗಳನ್ನು ರದ್ದುಗೊಳಿಸುವ ಕೆಲಸ ಮಾಡಬೇಕು. ಈ ಎಲ್ಲಾ ಬೇಡಿಕೆಗಳ ಈಡೇರಿಕೆಗಾಗಿ ದೇಶದಾದ್ಯಂತ ಚಳವಳಿ ಮುಂದುವರಿಸಲಾಗುವುದು. ಇದೇ ತಿಂಗಳ 26 ರಂದು ಹೆದ್ದಾರಿ ತಡೆ ಮತ್ತು ಟೋಲ್ ಪ್ಲಾಜಾಗಳನ್ನು ನಿರ್ಬಂಧಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಕ್ಯಾತಸಂದ್ರ ಬಳಿಯ ಹೆದ್ದಾರಿ ಟೋಲ್ ಬಳಿ ಜಿಲ್ಲೆಯ ರೈತರು ಹೋರಾಟ ನಡೆಸಲಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಾ ತಾಲ್ಲೂಕಿನಲ್ಲಿ ಸಂಘಟನೆ ನಡೆಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಅಜ್ಜಪ್ಪ, ಶಿವಕುಮಾರ್, ಸಿ.ಜಿ.ಲೋಕೇಶ್, ಅರೇಹಳ್ಳಿ ಮಂಜು, ಅವ್ವೆರಹಳ್ಳಿ ಲೋಕೇಶ್, ಮೋಹನ್, ಅಸ್ಲಾಂಪಾಷ, ಇತರರು ಇದ್ದರು.
ಲಕ್ಷ ಹೆಕ್ಟೇರ್ ಬೆಳೆನಷ್ಟ :
ಈಚೆಗೆ ಸುರಿದ ಬಾರಿ ಮಳೆಯಿಂದ ಸಾಕಷ್ಟು ಬೆಳೆ ಹನಿಯಾಗಿದೆ. ನಮ್ಮ ಜಿಲ್ಲೆಯಲ್ಲಿ ಲಕ್ಷ ಹೆಕ್ಟೇರ್‍ಗೂ ಅಧಿಕ ಜಮೀನಿನಲ್ಲಿ ಬೆಳೆ ನಷ್ಟವಾಗಿದೆ. ಕೈಗೆ ಬಂದ ರಾಗಿ ಮತ್ತು ಶೇಂಗಾ ಬೆಳೆ ಕಳೆದುಕೊಂಡ ರೈತರ ಸ್ಥಿತಿ ಶೋಚನೀಯವಾಗಿದೆ. ಈ ಜೊತೆಗೆ ತೋಟಗಾರಿಕೆ ಬೆಳೆ ಕೂಡಾ ಸಾಕಷ್ಟು ಹಾನಿಯಾಗಿದೆ. ಮಳೆ ನೀರಿನಲ್ಲಿ ಕೊಚ್ಚಿಹೋದ ಕೃಷಿ ಬೆಳೆಗೆ ಈವರೆಗೆ ಪರಿಹಾರ ಘೋಷಿಸದ ಸರ್ಕಾರ ಕೂಡಲೆ ಕ್ರಮವಹಿಸಬೇಕು ಎಂದು ಎನ್.ಗೋವಿಂದರಾಜು ಒತ್ತಾಯಿಸಿದರು.
ರೈತರಿಗೆ ತೀವ್ರ ತೊಂದರೆ ಮಾಡುವ ತಾಲ್ಲೂಕು ಕಚೇರಿ ಸೇರಿದಂತೆ ಹಲವು ಇಲಾಖೆಯಲ್ಲಿ ರೈತರಿಗೆ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಮನವಿ ಮಾಡಿದ್ದರೂ ತಾಲ್ಲೂಕು ಆಡಳಿತ ಮನವಿ ಪುರಸ್ಕರಿಸದೆ ನಕಾರಾತ್ಮಕ ಸ್ಪಂದನೆ ವ್ಯಕ್ತಪಡಿಸಿದೆ. ಈ ಹಿನ್ನಲೆ ಮುಂದಿನ ತಿಂಗಳು ಡಿ.20 ರಂದು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
-ಕೆ.ಎನ್.ವೆಂಕಟೇಗೌಡ, ತಾಲ್ಲೂಕು ಅಧ್ಯಕ್ಷರು, ರೈತಸಂಘ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ