ದಾವಣಗೆರೆ : ಭಾರೀ ಮಳೆಗೆ ಧರೆಗುರುಳಿದ ಮರಗಳು

ದಾವಣಗೆರೆ

    ಕಳೆದ ಎರಡು ವಾರಗಳಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಇನ್ನು ಕೆಲವೆಡೆ ಮಾತ್ರ ಮಳೆರಾಯ ಅನಾಹುತಗಳನ್ನೇ ಸೃಷ್ಟಿಸಿದ್ದಾನೆ. ಹಾಗೆಯೇ ನಿನ್ನೆಯೂ (ಏಪ್ರಿಲ್‌ 19) ಹಲವು ಜಿಲ್ಲೆಗಳಲ್ಲಿ ಮಳೆರಾಯ ಅನಾಹುತಗಳನ್ನು ಸೃಷ್ಟಿಸಿದ್ದಾನೆ. ಇಂತಹದ್ದೇ ಒಂದು ಘಟನೆ ದಾವಣಗೆರೆ ಜಿಲ್ಲೆಯಲ್ಲೂ ನಡೆದಿದೆ.

    ನಿನ್ನೆ (ಏಪ್ರಿಲ್‌ 19) ಹಲವು ಜಿಲ್ಲೆಗಳಲ್ಲಿ ಮಳೆರಾಯ ತಂಪೆರೆದಿದ್ದು, ಇದರಿಂದ ರೈತರ ಮುಖದಲ್ಲಿ ತುಸು ಮಂದಹಾಸ ಮೂಡಿದಂತಾಗಿದೆ. ಮತ್ತೊಂದೆಡೆ ಕೆಲವೆಡೆ ಬಿರುಗಾಳಿ ಮಳೆಗೆ ಅನಾಹುತಗಳು ಸಂಭವಿಸಿರುವ ಘಟನೆಗಳು ಕೂಡ ನಡೆದಿವೆ.

    ಜಿಲ್ಲೆಯ ಹಲವೆಡೆ ಭಾರೀ ಗಾಳಿ ಮಳೆಯಿಂದಾಗಿ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆ ಮೇಲೆ ಮರಗಳು ಬಿದ್ದ ಕಾರಣ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿತ್ತು. ಭಾರೀ ಗಾಳಿಗೆ ವಿದ್ಯುತ್ ಕಂಬಗಳು ಧರಶಾಯಿಯಾದ ಕಾರಣ, ವಿದ್ಯುತ್ ಇಲ್ಲದೇ ಜನರು ಪರದಾಡುವಂತಾಗಿದೆ. ಅಲ್ಲದೆ, ಬಿಸಿಲಿನ ಬೇಗೆಯಿಂದ ಬೇಸತ್ತಿದ್ದ ಜನರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.

    ದಾವಣಗೆರೆ ನಗರದ ಹಲವೆಡೆ ಬಿರುಗಾಳಿ ಮಳೆಗೆ ಮರಗಳು, ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಜಯದೇವ ವೃತ್ತದ ಪ್ರವಾಸಿ ಮಂದಿರದ ರಸ್ತೆಯಲ್ಲಿ ಮೂರು ವಿದ್ಯುತ್ ಕಂಬಗಳು ಬಿದ್ದಿದ್ದು, ರಸ್ತೆ ಬದಿ ನಿಲ್ಲಿಸಿದ್ದ ಬೈಕ್‌ಗಳಿಗೆ ಹಾನಿಯಾಗಿದೆ. ಜಯದೇವ ವೃತ್ತ, ಯಲ್ಲಮ್ಮ ನಗರ, ನಿಜಲಿಂಗಪ್ಪ ಬಡಾವಣೆ, ತರಳಬಾಳು ಬಡಾವಣೆ ಸೇರಿದಂತೆ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಬಿದ್ದಿವೆ.

    ನಗರದ ಹಲವು ರಸ್ತೆಗಳಲ್ಲಿ ನೀರು ನಿಂತಿದ್ದ ದೃಶ್ಯವೂ ಕಂಡು ಬಂದಿದ್ದು, ಕೆಲ ನಿಮಿಷ ಸುರಿದ ಮಳೆಯಲ್ಲಿಯೇ ವಾಹನ ಸವಾರರು ಸಂಚರಿಸಿದರು. ಮಲೇಬೆನ್ನೂರು, ಜಗಳೂರಿನಲ್ಲೂ ಸಹ ಗುಡುಗು ಸಹಿತ ಸಾಧಾರಣ ಮಳೆ ಸುರಿದಿದೆ.

    ಸಿಡಿಲು ಬಡಿದು 25 ಮೇಕೆ ಸಾವು: ದಾವಣಗೆರೆ ತಾಲೂಕಿನ ಆನಗೋಡು ಸಮೀಪದ ಈಚಘಟ್ಟ ಗ್ರಾಮದಲ್ಲಿ ಸಿಡಿಲು ಬಡಿದು 16 ಮೇಕೆ, 9 ಗಂಡು ಮೇಕೆ ಮೃತಪಟ್ಟಿರುವ ಘಟನೆ ಗುರುವಾರ (ಏಪ್ರಿಲ್‌ 18) ಸಂಜೆ ನಡೆದಿದೆ.

    ದಾವಣಗೆರೆ ತಾಲೂಕಿನ ಸುತ್ತಮುತ್ತ ಗುರುವಾರ ಸಂಜೆ ಭಾರೀ ಗುಡುಗು, ಮಿಂಚು, ಗಾಳಿ ಸಹಿತ ಮಳೆ ಸುರಿಯಿತು. ಈಚಘಟ್ಟ ಗ್ರಾಮದ ರೈತ ಪಾಪ್ಯಾನಾಯ್ಕ ಮತ್ತು ರೇವತಿಬಾಯಿ ಅವರಿಗೆ ಸೇರಿದ ತಮ್ಮ ಮೇಕೆಗಳನ್ನು ಮೇಯಿಸಲು ಜಮೀನಿಗೆ ತೆರಳಿದ್ದರು. ಮಳೆ ಆರಂಭವಾದಾಗ ಮೇಕೆಗಳು ಮರದ ಕೆಳಗೆ ಬಂದು ನಿಂತಿವೆ. ಈ ವೇಳೆ ಸಿಡಿಲು ಬಡಿದು 16 ಮೇಕೆ ಮತ್ತು 9 ಗಂಡು ಮೇಕೆ ಮೃತಪಟ್ಟಿವೆ ಎಂದು ತಿಳಿದುಬಂದಿದೆ.

    ಅಂದಾಜು 5 ಲಕ್ಷ ರೂಪಾಯಿ ನಷ್ಟ ಸಂಭವಿಸಿದ್ದು, ಪಾಪ್ಯಾನಾಯ್ಕ ಅವರು ಉಳಿದ ಮೇಕೆಗಳನ್ನು ಹೊಡೆದುಕೊಂಡು ಬರಲು ಸಿಡಿಲು ಬಡಿದ ಸ್ಥಳದಿಂದ ದೂರ ಹೋಗಿದ್ದರಿಂದ ಪಾಪ್ಯಾನಾಯ್ಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ ನೀಡಿ ಮೇಕೆಗಳನ್ನು ಕಳೆದುಕೊಂಡ ಕುಟುಂಬಕ್ಕೆ ಸಂತ್ವಾನ ಹೇಳಿದ್ದಾರೆ. ಈ ವೇಳೆ ಕಂದಾಯ ಅಧಿಕಾರಿಗಳು, ಪೊಲೀಸರು ಪರಿಶೀಲನೆ ನಡೆಸಿದರು.

 

Recent Articles

spot_img

Related Stories

Share via
Copy link
Powered by Social Snap