ಹಿರಿಯೂರು :
ಸಂವಿಧಾನ ನಿಯಮಾನುಸಾರ ವಾಲ್ಮೀಕಿ ಸಮುದಾಯಕ್ಕೆ ಶೇ.7.5 ಮೀಸಲಾತಿ ನೀಡುವಂತೆ ಆಗ್ರಹಿಸಿ ಗುರುವಾರ ವಾಲ್ಮೀಕಿ ನಾಯಕ ಮಹಾಸಭಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
2005ರಲ್ಲಿ ಕೇಂದ್ರಸರ್ಕಾರ ಹೊರಡಿಸಿರುವ ಆದೇಶದಲ್ಲಿ ವಾಲ್ಮೀಕಿ ನಾಯಕ ಸಮುದಾಯಕ್ಕೆ ರಾಜಕೀಯ, ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಶೇ.7.5ಮೀಸಲಾತಿ ನೀಡಿದೆ. ಆದರೆ, ರಾಜ್ಯ ಸರ್ಕಾರ ಮೀಸಲಾತಿಯನ್ನು ರಾಜಕೀಯಕ್ಕೆ ಮಾತ್ರ ಸೀಮಿತಗೊಳಿಸಿ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ಸಮುದಾಯಕ್ಕೆ ತೀವ್ರ ಅನ್ಯಾಯ ಮಾಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪರಿಶಿಷ್ಠ ಪಂಗಡಕ್ಕೆ 1956 ರಲ್ಲಿ ಶೇ.3ರಷ್ಟು ಮೀಸಲಾತಿ ನಿಗದಿ ಪಡಿಸಿದ್ದು, ಅಲ್ಲಿಂದ ಜನಸಂಖ್ಯೆ ಹಲವು ಪಟ್ಟು ಹೆಚ್ಚಿದ್ದರೂ ಅದೇ ಪ್ರಮಾಣದ ಮೀಸಲಾತಿ ಮುಂದುವರಿಸುವುದು ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ವಿರುದ್ಧವಾಗಿದೆ. ಅಲ್ಲದೆ, ರಾಜ್ಯ ಸರ್ಕಾರ ಪರಿಶಿಷ್ಠ ಪಂಗಡಕ್ಕೆ ಸುಮಾರು 50 ಬೇರೆ ಬೇರೆ ಜಾತಿಗಳನ್ನು ಸೇರಿಸಿದ್ದು, ಸಮುದಾಯದ ಪ್ರಗತಿಗೆ ಮಾರಕವಾಗಿದೆ.
ಭಾರತೀಯ ಸಂವಿಧಾನದ ಕಲಂ 340, 341 ಮತ್ತು 342 ಮತ್ತು 1949ರ ಪ್ರಕಾರ ಎಸ್.ಸಿ.ಎಸ್.ಟಿಗೆ ಸೇರಿಸಿರುವ ಜಾತಿ ಮತ್ತು ಅದರಲ್ಲಿರುವ ಅನುವಂಶೀಯ ಗುಣಗಳು ಮತ್ತು ಭಾವನೆಗಳನ್ನು ಬಿಟ್ಟು, ರಾಜಕೀಯ ಒತ್ತಡದಿಂದ ಕೆಲವು ಪ್ರಭಾವಿ ಜಾತಿಗಳನ್ನು ಸೇರ್ಪಡೆ ಮಾಡಿರುವುದು ಸರಿಯಲ್ಲ. ಪರಿಶಿಷ್ಠ ಪಂಗಡಕ್ಕೆ ಅನ್ಯ ಜಾತಿಗಳ ಸೇರ್ಪಡೆ ನಿಲ್ಲಬೇಕು. ನಕಲಿ ಜಾತಿ ಪ್ರಮಾಣ ಪತ್ರ ನೀಡುವಿಕೆಗೆ ಕಡಿವಾಣ ಹಾಕಬೇಕು ಎಂಬುದಾಗಿ ಪ್ರತಿಭಟನಾಕಾರರು ಆಗ್ರಹಿಸಿದರು. ಈ ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಜೆ.ಬಿ.ರಾಜು, ಮಂಜುನಾಥ್ಮಾಳಿಗೆ, ಪುಟ್ಟರಂಗಪ್ಪ, ಅಂಜನಪ್ಪ, ಲೋಕೇಶ್, ಸಿದ್ದೇಶ್, ಶ್ರೀಧರ್, ರಮೇಶ್, ಶ್ರೀನಿವಾಸ್, ಗಿರೀಶ್, ನೀಲಕಂಠಪ್ಪ, ಸುರೇಶ್, ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ