ಹುಳಿಯಾರು
ಕೆಲಸ ಎಷ್ಟಾದ್ರೂ ಕೇಳಿ, ಶಕ್ತಿ ಮೀರಿ ಮಾಡ್ತೀನಿ. ಆದರೆ, ಹಣ ಕೇಳೋಕೆ ನನ್ನ ಹತ್ತಿರ ಅವಕಾಶ ಇಲ್ಲ. ಇದೊಂದೆ ಕಾರಣಕ್ಕೆ ಕೆಲವರು ನನ್ನ ಬೈಕೊಂಡ್ ಓಡಾಡ್ತಾರೆ. ಹೀಗಂತ ಹೇಳಿದ್ದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ.ಅವರು ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಶಿಡ್ಲೆಕೋಣ ಗ್ರಾಮದಲ್ಲಿನ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನೆ ಮಾಡಿ ಮಾತನಾಡಿದರು.
ಸಚಿವರು ನಾನು ಯಾರ ಜೇಬಿಗೂ ಕೈ ಇಟ್ಟವನಲ್ಲ. ಅಡ್ಡದಾರಿ ಹಿಡಿದು ದುಡ್ದು ಮಾಡಿ ರಾಜಕಾರಣ ಮಾಡೋ ಜಾಯಮಾನ ನನ್ನದಲ್ಲ. ಇದೇ ಸಿದ್ಧಾಂತ ಮೈಗೂಡಿಸಿಕೊಂಡು 30 ವರ್ಷ ರಾಜಕಾರಣದಲ್ಲಿ ಹೆಜ್ಜೆ ಸವೆಸಿದ್ದೇನೆ. ನಿಮ್ಮ ಪ್ರೀತಿ, ವಿಶ್ವಾಸ ಎಂದೆಂದಿಗೂ ಹೀಗೆಯೇ ಮುಂದುವರಿಯಲಿ. ಮತ ನೀಡಿ ಚುನಾಯಿಸಿದ ನಿಮ್ಮ ಋಣವನ್ನು ಪ್ರಾಮಾಣಿಕವಾಗಿಯೆ ತೀರಿಸುವೆ ಎಂದು ಭಾವುಕರಾಗಿ ನುಡಿದರು.
ಯಾವುದೇ ನೀರಾವರಿ ಯೋಜನೆ ಕಾಣದ ಬುಕ್ಕಾಪಟ್ಟಣ ಹೋಬಳಿಗೆ ಭದ್ರಾಮೇಲ್ದಂಡೆ ಯೋಜನೆಯಡಿಯಲ್ಲಿ ನೀರು ಹರಿಸುವ ದೊಡ್ಡ ಸವಾಲು ನನ್ನ ಮುಂದೆ ಇತ್ತು. ಅದೃಷ್ಟವಶಾತ್ ನಮ್ಮ ಸರ್ಕಾರ ರಚನೆಯಾಗಿ ಮಂತ್ರಿಗಿರಿಯೂ ದೊರೆತ ಕಾರಣ, ಈ ಹೋಬಳಿಯ ಬುಕ್ಕಾಪಟ್ಟಣ, ರಾಮಲಿಂಗಾಪುರ ಹಾಗೂ ದೊಡ್ಡಅಗ್ರಹಾರ ಕೆರೆಗಳನ್ನು ಭದ್ರಾ ಮೇಲ್ದಂಡೆ ಯೋಜನಾ ವ್ಯಾಪ್ತಿಗೆ ಸೇರ್ಪಡೆ ಮಾಡುವಲ್ಲಿ ಯಶ ಕಂಡಿದ್ದೇನೆ ಎಂದರು.
ಮಹರ್ಷಿ ವಾಲ್ಮೀಕಿ ಪೀಠದ (ಶಿಡ್ಲೆಕೋಣ ) ಸದ್ಗುರು ಶ್ರೀ ವಾಲ್ಮೀಕಿ ಸಂಜಯ ಕುಮಾರ ಮಹಾ ಸ್ವಾಮೀಜಿಯವರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡರು, ಜಿ.ಪಂ.ಸದಸ್ಯ ಬಿ.ಸಿ.ಜಯಪ್ರಕಾಶ್, ಶಿರಾ ತಾ.ಪಂ. ಉಪಾಧ್ಯಕ್ಷ ರಂಗನಾಥಗೌಡ್ರು, ತಾ.ಪಂ. ಸದಸ್ಯರಾದ ಪುಟ್ಟರಾಜು ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
