ತುರುವೇಕೆರೆ:
ನೋಡ್ ಗುರು, ನೀನೇನ್ ಮಾಡ್ತೀಯೋ ನನಗ್ ಗೊತ್ತಿಲ್ಲ. ಒಟ್ನಲ್ಲಿ ನನ್ನ ಫ್ಲೆಕ್ಸ್ ಎಲ್ರೂ ನೋಡೋಂತ ಜಾಗದಲ್ಲಿ ನಿಲ್ಲಿಸ್ಬೇಕು. ಟೋಟಲ್ ದುಡ್ಡೆಸ್ಟು ಹೇಳು ಕೊಟ್ಟೋಗ್ತೀನಿ. ಬೆಳಕಾಗದ್ರೊಳಗೆ ನಾನು ನನ್ನ ಫ್ರೆಂಡ್ಸ್ ಇರೋ ಫ್ಲೆಕ್ಸ್ ಬಿದ್ದಿರಬೇಕಷ್ಟೆ?.ಇದು ತುರುವೇಕೆರೆ ಜಾತ್ರಾ ಮಹೋತ್ಸವಕ್ಕೇ ಶುಭ ಕೋರುವವರು ಹಾಗೂ ಗುರ್ತಿಸಿಕೊಳ್ಳುವವರು ಫ್ಲೆಕ್ಸ್ ಮಾಲೀಕರ ಅಂಗಡಿ ಬಳಿ ಮಾತಾಡುವ ವಿಷಯ ಇದು.
ಪಟ್ಟಣದ ಶ್ರೀ ಸತ್ಯಗಣಪತಿ ಜಾತ್ರಾ ಮಹೋತ್ಸವ ಡಿ.8 ರಿಂದ ಪ್ರಾರಂಭವಾಗಿ 24 ರಂದು ಗಣಪತಿ ವಿಸರ್ಜನೆಯೊಂದಿಗೆ ಮುಗಿಯಲಿದೆ. ಡಿ.8 ರಿಂದಲೇ ಜಾತ್ರಾ ಮಹೋತ್ಸವಕ್ಕೆ ಶುಭ ಕೋರುವವರ ಫ್ಲೆಕ್ಸ್ ಗಳು ಪಟ್ಟಣದ ತುಂಬ ರಾರಾಜಿಸುತ್ತಿವೆ. ಜನ ಪ್ರತಿನಿಧಿಗಳಿಂದ ಹಿಡಿದು ಚಿಕ್ಕ ಮಕ್ಕಳವರೆಗೆ ದೊಡ್ಡ ದೊಡ್ಡ ಫ್ಲೆಕ್ಸ್‍ಗಳು ರಸ್ತೆಯುದ್ದಕ್ಕೂ ರಾರಾಜಿಸುತ್ತಿವೆ. ಬಾಣಸಂದ್ರ ವೃತ್ತದಿಂದ ದೆಬ್ಬೆಘಟ್ಟ ವೃತ್ತ ಹಾಗೂ ದೆಬ್ಬೆಘಟ್ಟ ರಸ್ತೆಯ ಹೊಸ ಬಸ್ ನಿಲ್ದಾಣದವರೆಗೆ ರಸ್ತೆಯ ಇಕ್ಕೆಲಗಳಲ್ಲಿ ರೈಲು ಭೋಗಿಗಳೋಪಾದಿಯಲ್ಲಿ ರಾರಾಜಿಸುತ್ತಿವೆ.
ರಸ್ತೆ ಬದಿ ವ್ಯಾಪಾರಿಗಳ ಆತಂಕ: ದೊಡ್ಡ ದೊಡ್ಡ ಫ್ಲೆಕ್ಸ್‍ಗಳಿಂದ ಅಂಗಡಿ ಮುಂಗಟ್ಟುಗಳು ಮರೆಯಾಗಿರುವುದರಿಂದ ವ್ಯಾಪಾರವಾಗುತ್ತಿಲ್ಲವಲ್ಲ ಎಂಬ ಆತಂಕ ವ್ಯಾಪಾರಿಗಳಿಗೆ ಎದುರಾಗಿದೆ. ರಸ್ತೆಯಲ್ಲಿ ಓಡಾಡುವ ಜನರನ್ನು ನೋಡುತ್ತಾ ಸಪ್ಪೆ ಮುಖ ಹೊತ್ತು ಕೂರುವಂತಾಗಿದೆ. ಫ್ಲೆಕ್ಸ್ ಮುಂಬಾಗ ಅಡ್ಡಾದಿಡ್ಡಿ ವಾಹನ ನಿಲ್ಲಿಸುವುದರಿಂದ ಕೊಳ್ಳುವವರು ಅಂಗಡಿಗಳಿಗೆ ದಾಟಿಹೋಗಲು ಸಾದ್ಯವಾಗದ ಕಾರಣ ಬೇರೆ ಅಂಗಡಿಯೆಡೆಗೆ ಮುಖಮಾಡುತ್ತಾನೆ. ಇದರಿಂದ ದುಪ್ಪಟ್ಟು ಅಂಗಡಿ ಬಾಡಿಗೆ ಕಟ್ಟುವ ವ್ಯಾಪಾರಿಗಳಿಗೆ ಜಾತ್ರೆ ಸಮಯದಲ್ಲಾದರೂ ಎರಡು ಕಾಸು ಮಾಡುವ ಆಲೋಚನೆಗೆ ಪಟ್ಟು ಬಿದ್ದಂತಾಗಿದೆ.
ಬೀದಿ ಬದಿ ವ್ಯಾಪಾರಿಗಳಿಗೆ ಪೆಟ್ಟು: ರಸ್ತೆ ಇಕ್ಕೆಲಗಳಲ್ಲಿ ಫ್ಲೆಕ್ಸ್ ನಿಲ್ಲಿಸಿರುವುದರಿಂದ ಬೀದಿ ಬದಿ ಮಾರಾಟ ಮಾಡುತ್ತಿದ್ದ ಸಣ್ಣಪುಟ್ಟ ವ್ಯಾಪಾರಿಗಳು ಫ್ಲೆಕ್ಸ್ ಹಿಂಭಾಗ ವ್ಯಾಪಾರ ಮಾಡಬೇಕಾಗಿದೆ. ಬೇಗ ಹಾಳಾಗುವಂತ ಹಾರ, ಹೂವು, ಹಣ್ಣು, ತರಕಾರಿ ಮಾರುವವರು ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ಫ್ಲೆಕ್ಸ್ ಹಿಂಬದಿ ಕಾಣದಿರುವುದರಿಂದ ವ್ಯಾಪಾರವಿಲ್ಲದೆ ಫ್ಲೆಕ್ಸ್ ನಲ್ಲಿರುವ ಪೋಟೋ ನಿರೀಕ್ಷಣೆ ಮಾಡುತ್ತಾ ಕಾಲಹರಣ ಮಾಡುವಂತಾಗಿದೆ.
ನಗರ, ಪಟ್ಟಣಗಳಲ್ಲಿ ಫ್ಲೆಕ್ಸ್, ಪ್ಲಾಸ್ಟಿಕ್‍ಗೆ ಸರ್ಕಾರದ ನಿಷೇಧವಿದ್ದರೂ ಸಹಾ ತುರುವೇಕೆರೆ ಪಟ್ಟಣ ಇದಕ್ಕೆ ಹೊರತಾಗಿರು ವಂತಿದೆ. ಪಟ್ಟಣ ಪಂಚಾಯಿತಿ ಸಹಾ ಅಸಹಾಯಕತೆಯಿಂದ ಕೂಡಿದೆಯೇನೋ ಎಂಬ ಯಕ್ಷಪ್ರಶ್ನೆ ನಾಗರೀಕರಿಂದ ಕೇಳಿಬರುತ್ತಿದೆ. ಇತ್ತೀಚೆಗೆ ಸಣ್ಣ ಫ್ಲೆಕ್ಸ್‍ಗಳು ಕಣ್ಮರೆಯಾಗುತ್ತಿದ್ದು ಫ್ಲೆಕ್ಸ್ ಮೇಲೆ ಇಷ್ಟರಿಂದ ಇಷ್ಟರವರೆಗೆ ದಿನಾಂಕ ಮುದ್ರಿತವಾದರೆ ಮುಗಿಯಿತು, ಅಲ್ಲಿಯವರೆವಿಗೆ ಆ ಫ್ಲೆಕ್ಸ್‍ನ್ನು ಯಾರೂ ಕದಲಿಸುವಂತಿಲ್ಲ. ತೆರವು ಗೊಳಿಸುವಂತಿಲ್ಲ.
ಒಮ್ಮೆ ತಮ್ಮ ಅಂಗಡಿ ಮುಂದಿದ್ದ ಫ್ಲೆಕ್ಸ್‍ನ್ನು ಪಕ್ಕಕ್ಕೆ ಸರಿಸಿದ್ದರಿಂದ ದೊಡ್ಡ ಗಲಾಟೆಯೇ ನಡೆದು ಪೋಲೀಸ್ ಠಾಣೆ ಮೆಟ್ಟಿಲೇರಿತು. ಫ್ಲೆಕ್ಸ್ ಮಾಲೀಕರುಗಳಿಗೆ ಒಟ್ಟು ಹಣ ಇಷ್ಟು ಅಂತ ಕೊಟ್ಟರೆ ಸಾಕು ಅವರೇ ಪ್ರಿಂಟ್ ಮಾಡಿ, ಪ್ರೇಮ್ ಮಾಡಿ ಕೆಲಸಗಾರರ ಮೂಲಕ ಪಟ್ಟಣದ ಹೃದಯ ಬಾಗದಲ್ಲಿ ಮನಸೋ ಇಚ್ಚೆ ಎಲ್ಲೆಂದರಲ್ಲಿ ನೆಡುತ್ತಿರುವುದರಿಂದ ಇತ್ತೀಚೆಗೆ ನಾಗರೀಕರ ಅಕ್ರೋಶಕ್ಕೆ ಕಾರಣವಾದಂತಿದೆ.
ಪಟ್ಟಣದ ಸೌಂಧರ್ಯಕ್ಕೆ ಧಕ್ಕೆ: ಶ್ರೀ ಸತ್ಯಗಣಪತಿ ಜಾತ್ರಾ ಮಹೋತ್ಸವದ ಅಂಗವಾಗಿ ತಮ್ಮ ತಮ್ಮ ಅಂಗಡಿ ಮುಂಗಟ್ಟುಗಳನ್ನು ವಿಧ್ಯುದ್ದೀಪಗಳಿಂದ ಅಲಂಕರಿಸಿ ಪಟ್ಟಣದ ಸೌಂದರ್ಯ ಹೆಚ್ಚಿಸುವಂತೆ ಸತ್ಯಗಣಪತಿ ಸೇವಾ ಸಮಾಜದ ಅದ್ಯಕ್ಷರು ಹಾಗೂ ಪದಾಧಿಕಾರಿಗಳು ಪತ್ರಿಕೆಗಳ ಮೂಲಕ ವಿನಂತಿಸಿಕೊಂಡಿದ್ದಾರೆ. ಆದರೆ ದೊಡ್ಡ ದೊಡ್ಡ ಫ್ಲೆಕ್ಸ್ ಹಿಂಬಾಗದಲ್ಲಿರುವ ಅಂಗಡಿ ಮಳಿಗೆಗಳನ್ನು ಒಂದು ವೇಳೆ ಮಾಲೀಕರುಗಳು ಸಿಂಗರಿಸಿದರೂ ಪ್ರಯೋಜನವಾದರೂ ಏನು? ಸುಮ್ಮನೆ ಹಣ ಪೋಲು ಎಂಬುದು ಕೆಲ ವ್ಯಾಪಾರಿಗಳಲ್ಲಿ ಆತಂಕ ಮನೆಮಾಡಿದಂತಿದೆ.
ವೈಭವದಿಂದ ನಡೆಯುವ ಗಣಪತಿ ವಿಸರ್ಜನಾ ಮಹೋತ್ಸವ: ವರ್ಷದ ಕೊನೆ ಗಣಪತಿ ಎಂದೆ ಹೆಸರಾದ ತುರುವೇಕೆರೆ ಶ್ರೀ ಸತ್ಯಗಣಪತಿ ವಿಸರ್ಜನಾ ಮಹೋತ್ಸವವು ಡಿ.23 ರ ಸೋಮವಾರ ಬಹಳ ವೈಭವಯುತವಾಗಿ ನಡೆಸಲು ಸೇವಾ ಸಮಿತಿ ಈಗಾಗಲೇ ಸಕಲ ಸಿದ್ದತೆ ನಡೆಸಿದೆ. ಸಂಜೆ ಮಹಾಮಂಗಳಾರತಿ, ತೀರ್ಥಪ್ರಸಾದದ ನಂತರ ಶ್ರೀ ಸ್ವಾಮಿಯವರನ್ನು ಹಾಗೂ ಗ್ರಾಮದೇವತೆ ಶ್ರೀ ಉಡುಸಲಮ್ಮ ದೇವಿಯನ್ನು ಪುಷ್ಪಾಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಕೀಲುಕುದುರೆ, ನಯ್ಯಾಡಿ ನೃತ್ಯ, ವೀರಭದ್ರ ಹಾಗು ಭದ್ರಕಾಳಿ ನರ್ತನ, ನಾಸಿಕ್ ಬ್ಯಾಂಡ್ ಮೂವಿಂಗ್ ಆಕೆಸ್ಟ್ರಾ, ತಮಟೆವಾದ್ಯ ಸೇರಿದಂತೆ ಅನೇಕ ಜಾನಪದ ಕಲಾ ಪ್ರಕಾರಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ.
ಈಗಾಗಲೆ ಜಾಯಿಂಟ್ ವೀಲ್ ಸೇರಿದಂತೆ ಮಕ್ಕಳ ಆಟೋಪಕರಣಗಳು, ಅಂಗಡಿ ಮುಂಗಟ್ಟುಗಳು ಪಟ್ಟಣಕ್ಕೆ ಲಗ್ಗೆ ಇಟ್ಟಿದ್ದು ತಾಲ್ಲೂಕಿನಾದ್ಯಂತ ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಮಂಗಳವಾರ ಸಂಜೆವರೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆದು ಸಂಜೆ 6 ಗಂಟೆಗೆ ಕೆರೆಕೋಡಿಯ ತುರುವೇಕೆರೆ ಕೆರೆಯಲ್ಲಿ ತೆಪ್ಪೋತ್ಸವ ಏರ್ಪಡಿಸಿದ್ದು ಸುತ್ತ ಮುತ್ತಲ ಗ್ರಾಮ ಸೇರಿದಂತೆ ಸಾವಿರಾರು ಜನ ಪಲ್ಗೋಂಡು ತಪ್ಪೋತ್ಸವದ ದೃಶ್ಯವನ್ನು ಕಣ್ತುಂಬಿಸಿಕೊಳ್ಳಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
