ಬೆಂಗಳೂರು
ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನ ಸೋಮವಾರದಿಂದ(ಡಿ.10)ಆರಂಭವಾಗಲಿದ್ದು ಸರ್ಕಾರ ಹಾಗೂ ಪ್ರತಿಪಕ್ಷದ ನಡುವೆ ಭಾರೀ ಸಂಘರ್ಷ ನಡೆಯುವುದು ನಿಶ್ಚಿತವಾಗಿದೆ.
ರಾಜ್ಯ ಸರ್ಕಾರವನ್ನುರುಳಿಸಲು ಪ್ರತಿಪಕ್ಷ ಬಿಜೆಪಿ ಯತ್ನಿಸುತ್ತಿದೆ ಎಂಬ ವಿಷಯವನ್ನು ಟಾರ್ಗೆಟ್ ಮಾಡಿಕೊಂಡು ಕಮಲ ಪಾಳೆಯದ ಮೇಲೆ ಮುಗಿಬೀಳಲು ಸರ್ಕಾರ ಸಜ್ಜಾಗಿದ್ದರೆ,ರೈತರ ಸಾಲ ಮನ್ನಾ, ಕಬ್ಬು ಬೆಳೆಗಾರರ ಬಾಕಿ ವಿವಾದ,ಕೊಡಗಿನಲ್ಲಿ ಅತಿವೃಷ್ಟಿಗೆ ಸಂಬಂಧಿಸಿದಂತೆ ಪರಿಹಾರ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ ಎಂಬುದೂ ಸೇರಿದಂತೆ ಹಲವು ಅಸ್ತ್ರಗಳನ್ನು ಬಿಜೆಪಿ ತನ್ನ ಬತ್ತಳಿಕೆಯಲ್ಲಿಟ್ಟುಕೊಂಡು ಹೋರಾಡಲು ಸಜ್ಜಾಗಿದೆ.
ರೈತರ ಸಾಲ ಮನ್ನಾ ಮಾಡುವುದಾಗಿ ಸರ್ಕಾರ ಹೇಳಿದರೂ ಇದುವರೆಗೆ ರೈತರ ಸಾಲ ಮನ್ನಾಗೆ ಸಂಬಂಧಿಸಿದಂತೆ ಸಮರ್ಪಕ ಪ್ರಮಾಣದ ಹಣ ಬಿಡುಗಡೆಯಾಗಿಲ್ಲ ಎಂದು ಬಿಜೆಪಿ ಆರೋಪಿಸುತ್ತಲೇ ಬಂದಿದೆ.
ಇದು ಕೇವಲ ರೈತರ ಮೂಗಿಗೆ ತುಪ್ಪ ಒರೆಸುವ ತಂತ್ರ,ತಕ್ಷಣವೇ ರೈತರ ಸಾಲ ಮನ್ನಾ ವಿಷಯಕ್ಕೆ ಸಂಬಂಧಿಸಿದಂತೆ ಹಣ ಬಿಡುಗಡೆ ಮಾಡಿ ಎಂದು ವಿಧಾನಮಂಡಲದಲ್ಲಿ ಕೋಲಾಹಲವೆಬ್ಬಿಸಲು ಸಜ್ಜಾಗಿದೆ.
ಸರ್ಕಾರ ಎಂದರೆ ದೇವೇಗೌಡ,ಕುಮಾರಸ್ವಾಮಿ ಮತ್ತು ರೇವಣ್ಣ ಎಂದು ಪ್ರತಿಪಕ್ಷದ ನಾಯಕ ಯಡಿಯೂರಪ್ಪ ಟೀಕೆ ಮಾಡುತ್ತಲೇ ಬಂದಿದ್ದು ವಿಧಾನಮಂಡಲ ಅಧಿವೇಶನದಲ್ಲೂ ಇದು ಪ್ರತಿಫಲಿಸುವ ಲಕ್ಷಣಗಳು ಹೆಚ್ಚಾಗಿವೆ.
ಕಬ್ಬು ಬೆಳೆಗಾರರ ಬಾಕಿ ವಿವಾದದ ವಿಷಯದಲ್ಲಿ ಸರ್ಕಾರ ದಿವ್ಯ ನಿರ್ಲಕ್ಷ್ಯ ತೋರುತ್ತಿದೆ.ಕೇಳಿದರೆ ಅತ್ಯಂತ ಕಡಿಮೆ ಪ್ರಮಾಣದ ಬಾಕಿ ಇದೆ ಎನ್ನುತ್ತಲೇ ಪರೋಕ್ಷವಾಗಿ ಸಕ್ಕರೆ ಕಾರ್ಖಾನೆಗಳ ಮಾಲೀಕರ ಪರವಾಗಿ ನಿಂತಿದೆ ಎಂದು ಬಿಜೆಪಿ ಧಾಳಿ ನಡೆಸುವುದು ಸ್ಪಷ್ಟ.
ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಪ್ರಮಾಣ ಹೆಚ್ಚಾಗಿದೆ.ಹೀಗಾಗಿ ಪರ ರಾಜ್ಯಗಳಿಗೆ ವಿದ್ಯುತ್ ಸರಬರಾಜು ಮಾಡುವ ಸ್ಥಿತಿಯಲ್ಲಿ ರಾಜ್ಯ ಇದೆ ಎಂದು ಕುಮಾರಸ್ವಾಮಿ ಸರ್ಕಾರ ಹೇಳುತ್ತಿದ್ದರೂ,ನಗರ ಪ್ರದೇಶಗಳಲ್ಲಿ ಆಗಲೇ ದಿನಕ್ಕೆರಡು ಗಂಟೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ದಿನಕ್ಕೆ ಆರು,ಎಂಟು ಗಂಟೆ ವಿದ್ಯುತ್ ಕಡಿತವಾಗುತ್ತಿದೆ ಎಂಬುದು ಬಿಜೆಪಿ ಆರೋಪ.
ವಿದ್ಯುತ್ ಉತ್ಪಾದನೆ ಹೆಚ್ಚಳವಾಗಿದ್ದರೆ,ಬೇರೆ ರಾಜ್ಯಗಳಿಗೂ ಸಮರ್ಪಕ ಪ್ರಮಾಣದಲ್ಲಿ ಪೂರೈಸುವ ಪರಿಸ್ಥಿತಿ ಇದ್ದರೆ ಈ ಸ್ಥಿತಿ ಏಕೆ ಬರಬೇಕಿತ್ತು?ಒಂದು ವೇಳೆ ವಿದ್ಯುತ್ ಸರಬರಾಜು ಕಾರ್ಯ ಸಮರ್ಪಕವಾಗಿ ನಡೆಯುತ್ತಿದ್ದರೆ ಜನ ಏಕೆ ಹಾಹಾಕಾರ ಎಬ್ಬಿಸುತ್ತಾರೆ? ಹೀಗಾಗಿ ಅಗತ್ಯ ಬಿದ್ದರೆ ಹೊರರಾಜ್ಯಗಳಿಗೆ ಸರಬರಾಜು ಮಾಡುತ್ತಿರುವ ವಿದ್ಯುತ್‍ನ್ನು ನಿಲ್ಲಿಸಿ ಎಂಬುದು ಬಿಜೆಪಿ ಆಗ್ರಹ.
ಸರ್ಕಾರದ ಖಜಾನೆ ಖಾಲಿಯಾಗಿದೆ.ಬಂದ ಹಣವೆಲ್ಲ ನಿರ್ದಿಷ್ಟ ಖಾತೆಗಳಿಗೆ ಮಾತ್ರ ಹೋಗುತ್ತಿದ್ದು ಪರಿಣಾಮವಾಗಿ ಸರ್ಕಾರ ದಿನದಿಂದ ದಿನಕ್ಕೆ ಸುಸ್ತಾಗುತ್ತಿದೆ.ಸರ್ಕಾರಿ ಯೋಜನೆಗಳ ಕಾಮಗಾರಿಯನ್ನು ಅನುಷ್ಟಾನಗೊಳಿಸಿದವರು ತಮಗೆ ಬರಬೇಕಾದ ಬಾಕಿ ಹಣಕ್ಕಾಗಿ ಪರದಾಡುವ ಸ್ಥಿತಿ ಸೃಷ್ಟಿ ಆಗಿದೆ.
ಸರ್ಕಾರ ಆರ್ಥಿಕವಾಗಿ ದಿವಾಳಿ ಆಗಿದೆ ಎಂಬುದರ ಸಂಕೇತ ಇದು.ಒಂದು ವೇಳೆ ಸರ್ಕಾರ ಆರ್ಥಿಕವಾಗಿ ಸಧೃಢವಾಗಿದ್ದರೆ ಗುತ್ತಿಗೆದಾರರ ಹಣವನ್ನು ಬಾಕಿ ಇಟ್ಟುಕೊಳ್ಳುವ ಪ್ರಮೇಯವೇನಿತ್ತು? ಅನ್ನುವುದು ಬಿಜೆಪಿ ನಾಯಕರ ಪ್ರಶ್ನೆ.
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ಅಲುಗಾಡುತ್ತಿದೆ.ಉಭಯ ಪಕ್ಷಗಳು ಪರಸ್ಪರ ಕಚ್ಚಾಟ ನಡೆಸುತ್ತಿದ್ದು ಇದರಿಂದಾಗಿ ಸುಭದ್ರ ಸರ್ಕಾರ ಕೊಡುವ ಕೆಲಸ ಆಗುತ್ತಿಲ್ಲ.ಇಂತಹ ಸರ್ಕಾರ ಇದ್ದೂ ಜನರಿಗೆ ಪ್ರಯೋಜನವಿಲ್ಲ ಎಂಬುದು ಬಿಜೆಪಿ ಆರೋಪ.
ಈ ವಿಷಯದಲ್ಲಿ ಸರ್ಕಾರವೇ ಬಿಜೆಪಿ ವಿರುದ್ಧ ಮುಗಿಬೀಳುವ ಲಕ್ಷಣಗಳಿದ್ದು ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪದೇ ಪದೇ ಯತ್ನಿಸುತ್ತಿದೆ. ಇದಕ್ಕೆ ಇತ್ತೀಚೆಗೆ ದುಬೈ ಮೂಲದ ಉದ್ಯಮಿಯೊಂದಿಗೆ ಕಮಲ ಪಾಳೆಯದ ನಾಯಕ ಬಿ.ಶ್ರೀರಾಮುಲು ಆಪ್ತ ಸಹಾಯಕ ನಡೆಸಿರುವ ಮಾತುಕತೆಯ ಧ್ವನಿಸುರುಳಿಯೇ ಸಾಕ್ಷಿ ಎಂದು ಅಬ್ಬರಿಸಲಿದೆ.
ಈ ಮಧ್ಯೆ ರಾಜ್ಯದ ಹಲವೆಡೆ ಅತಿವೃಷ್ಟಿ ಸಂಭವಿಸಿದ್ದರೆ,ಹಲವೆಡೆ ಬರಗಾಲ ಇದೆ.ಈ ಅತಿವೃಷ್ಟಿ-ಅನಾವಷ್ಟಿಗಳ ಪರಿಹಾರಕ್ಕಾಗಿ ಸರ್ಕಾರ ಏನೇನೂ ಕೆಲಸ ಮಾಡುತ್ತಿಲ್ಲ.ಸರ್ಕಾರ ಸುಭದ್ರವಲ್ಲ ಎಂಬ ಬಾವನೆ ಇರುವುದರಿಂದ ಅಧಿಕಾರಿಗಳೂ ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬುದು ಬಿಜೆಪಿ ಆರೋಪ.
ಮೇಕೆದಾಟು ಆಣೆಕಟ್ಟಿನ ನಿರ್ಮಾಣ ವಿಷಯದಲ್ಲಿ ಕರ್ನಾಟಕ ಹಾಗೂ ತಮಿಳ್ನಾಡುಗಳ ನಡುವೆ ಭಾರೀ ಸಂಘರ್ಷ ನಡೆದಿದ್ದು ಇದರ ಪರಿಹಾರಕ್ಕಾಗಿ ಕೇಂದ್ರದ ನೆರವು ಕೊಡಿಸುವಂತೆ ಸರ್ಕಾರ ಪ್ರತಿಪಕ್ಷಗಳ ನೆರವು ಕೋರುವ,ಆ ಮೂಲಕ ಅದನ್ನು ಪೇಚಿನಲ್ಲಿ ಸಿಲುಕಿಸುವ ಸಾಧ್ಯತೆಗಳಿವೆ.
ಅಧಿಕಾರಕ್ಕೆ ಬರುವ ಮುನ್ನ ಕುಮಾರಸ್ವಾಮಿ ಅವರು ನೈಸ್ ಸೇರಿದಂತೆ ಹಲವು ವಿಷಯಗಳ ಕುರಿತು ಪ್ರಸ್ತಾಪಿಸಿ, ಅಂದಿನ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.ಆದರೆ ಈಗ ಮುಖ್ಯಮಂತ್ರಿಯಾಗಿ ಆರು ತಿಂಗಳಾದರೂ ಮೌನವಾಗಿದ್ದಾರೆ ಎಂದು ಬಿಜೆಪಿ ತರಾಟೆಗೆ ತೆಗೆದುಕೊಳ್ಳಲಿದೆ.
ಹೀಗಾಗಿ ಬೆಳಗಾವಿಯ ವಿಧಾನಮಂಡಲ ಅಧಿವೇಶನ ಆಡಳಿತ-ಪ್ರತಿಪಕ್ಷಗಳ ನಡುವೆ ಕುರುಕ್ಷೇತ್ರವಾಗಿ ಮಾರ್ಪಡುವ ಲಕ್ಷಣಗಳು ದಟ್ಟವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ