ಬೆಂಗಳೂರು
ಸಚಿವ ಸ್ಥಾನ ಕಳೆದುಕೊಂಡ ಬಳಿಕ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಕಳೆದೊಂದು ತಿಂಗಳಿನಿಂದ ಕ್ಷೇತ್ರದ ಜನರಿಂದಲೂ ದೂರವಾಗಿದ್ದಾರೆ.
ಮೂಲಗಳ ಪ್ರಕಾರ ರಮೇಶ್ ಜಾರಕಿಹೊಳಿ ಅವರು ಮುಂಬೈನ ಐಷಾರಾಮಿ ಹೋಟೆಲ್‍ನಲ್ಲಿ ಬೀಡುಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಕೆಲ ದಿನಗಳ ಹಿಂದೆ ಇವರ ಜತೆಗೆ ಮುಂಬೈನ ಐಶಾರಾಮಿ ಹೋಟೆಲ್ ನಲ್ಲಿದ್ದ ಕಾಂಗ್ರೆಸ್‍ನ ಅತೃಪ್ತ ಆರೇಳು ಶಾಸಕರು ಕ್ಷೇತ್ರಕ್ಕೆ ಮರಳಿದರೂ ರಮೇಶ್ ಮಾತ್ರ ಮುಂಬೈನಲ್ಲೇ ಉಳಿದಿರುವುದು ಚರ್ಚೆಗೆ ಗ್ರಾಸವಾಗಿದೆ.
ಸಚಿವ ಸಂಪುಟ ವಿಸ್ತರಣೆ ಬಳಿಕ ಈವರೆಗೂ ಸಹೋದರ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ಕಾಂಗ್ರೆಸ್‍ನ ಯಾವ ನಾಯಕರ ಸಂಪರ್ಕಕ್ಕೂ ರಮೇಶ್ ಜಾರಕಿಹೊಳಿ ಸಿಕ್ಕಿಲ್ಲ. ಸಿದ್ದರಾಮಯ್ಯ ನೇತೃತ್ವದಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಿಎಲ್‍ಪಿ ವಿಶೇಷ ಸಭೆಗೆ ಗೈರಾಗುವ ಮೂಲಕ ಶಾಸಕ ರಮೇಶ್ ಜಾರಕಿಹೊಳಿ ತಾನು ಅತೃಪ್ತ ಎಂಬ ಸಂದೇಶವನ್ನೂ ರವಾನಿಸಿದ್ದಾರೆ.
ರಮೇಶ್ ಜಾರಕಿಹೊಳಿ ಅವರ ಈ ನಡೆಯಿಂದ ಕಾಂಗ್ರೆಸ್ ನಾಯಕರು ಅಸಮಾಧಾನಗೊಂಡಿದ್ದಾರೆ. ಸಭೆಗೆ ಗೈರಾಗಿದಕ್ಕೆ ರಮೇಶ್ ಜಾರಕಿಹೊಳಿ ಅವರಿಗೆ ಶೋಕಾಸ್ ನೋಟಿಸ್ ಕೂಡ ಜಾರಿಯಾಗಿದೆ. ಕಾಂಗ್ರೆಸ್ ನಾಯಕರು ನೋಟಿಸ್ ನೀಡಿದರೂ ಜಗ್ಗದ ರಮೇಶ್ ಜಾರಕಿಹೊಳಿ ಇನ್ನೂ ಮುಂಬೈನಲ್ಲೇ ಉಳಿದಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಅಥಣಿ ಕ್ಷೇತ್ರದ ಶಾಸಕ ಮಹೇಶ ಕುಮಟಳ್ಳಿ ನಿನ್ನೆ ರಾತ್ರಿಯಷ್ಟೇ ಒಂದು ತಿಂಗಳ ಬಳಿಕ ಕ್ಷೇತ್ರಕ್ಕೆ ಮರಳಿದ್ದಾರೆ. ನಾಳೆ ಗಣರಾಜ್ಯೋತ್ಸವ ಇದ್ದು, ತಾಲೂಕಾಡಳಿತದಿಂದ ಆಯೋಜಿಸುವ ಕಾರ್ಯಕ್ರಮದಲ್ಲಿ ಆದರೂ ರಮೇಶ್ ಜಾರಕಿಹೊಳಿ ಪಾಲ್ಗೊಳ್ಳುವರೇ ಎಂಬುವುದು ಕ್ಷೇತ್ರದ ಜನರ ಪ್ರಶ್ನೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ