ಹುಳಿಯಾರು
ಸಮೀಪದ ಯಳನಡು ಗ್ರಾಮದ ಸಾರ್ವಜನಿಕ ಕೊಳವೆಬಾವಿಯಿಂದ ರಾತ್ರಿ ಹೊತ್ತು ಕೃಷಿ ಹೊಂಡಕ್ಕೆ ನೀರು ಬಿಟ್ಟುಕೊಂಡು ಗ್ರಾಮಕ್ಕೆ ಕೃತಕ ನೀರಿನ ಅಭಾವ ಸೃಷ್ಠಿಸಿರುವುದನ್ನು ಖುದ್ದು ಗ್ರಾಮಸ್ಥರೇ ಪತ್ತೆ ಹಚ್ಚಿ ಆ ವ್ಯಕ್ತಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಯಳನಾಡು ಗ್ರಾಮದ ಕೊಳವೆಬಾವಿಗಳಲ್ಲಿ ಅಂತರ್ಜಲ ಕಡಿಮೆಯಾಗಿ ಕಳೆದ ಐದಾರು ತಿಂಗಳ ಹಿಂದೆ ನೀರಿನ ಸಮಸ್ಯೆ ಸೃಷ್ಠಿಯಾಗಿತ್ತು. ಪರಿಣಾಮ ಬರ ಪರಿಹಾರ ಯೋಜನೆಯಡಿ ಮೋಟರ್, ಪೈಪ್, ವಿದ್ಯುತ್ ನೀಡಿ ಮಾಸಿಕ 10 ಸಾವಿರ ರೂ. ನಂತೆ ರಾಜಣ್ಣ ಅವರ ತೋಟದ ಬೋರಿನಿಂದ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿತ್ತು.
ನಂತರದ ದಿನಗಳಲ್ಲಿ ಮಳೆ ಬಂದ ಹಿನ್ನೆಲೆಯಲ್ಲಿ ಊರಿನ ಕೊಳವೆಬಾವಿಗಳು ರೀಚಾರ್ಜ್ ಆಗಿ ಪುನಃ ಇದೇ ಬೋರ್‍ವೆಲ್‍ಗಳಿಂದ ಊರಿಗೆ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ ಕಳೆದ ವಾರದಿಂದ ಏಕಾಏಕಿ ಮೋಟರ್ ಕೆಟ್ಟಿದೆ ಎಂದು ಸಾರ್ವಜನಿಕ ಕೊಳವೆಬಾವಿಯಿಂದ ಗ್ರಾಮಕ್ಕೆ ನೀರು ಸರಬರಾಜು ನಿಲ್ಲಿಸಿ ಪುನಃ ಮಾಸಿಕ 10 ಸಾವಿರ ರೂನಂತೆ ಟ್ಯಾಂಕರ್ ಮೂಲಕ ಗ್ರಾಮಕ್ಕೆ ನೀರು ಪೂರೈಸಲಾಗುತ್ತಿತ್ತು.
ಹೀಗೆ ಗ್ರಾಮಕ್ಕೆ ನೀರು ಪೂರೈಸುತ್ತಿದ್ದ ರಾಜಣ್ಣ ಅವರ ಕೃಷಿಹೊಂಡ ಮಳೆಯಿಲ್ಲದೆ ಬರಿದಾಗಿದ್ದು ಕಂಡಿದ್ದ ಗ್ರಾಮಸ್ಥರು ಬೆಳಗಾಗುವುದರೊಳಗೆ ತುಂಬಿರುವುದನ್ನು ಕಂಡು ಬೆಕ್ಕಸ ಬೆರಗಾದರು. ಮಳೆ ಅಂತೂ ಬಂದಿಲ್ಲ. ಇರುವ ಒಂದೇ ಬೋರ್‍ನಲ್ಲಿ ಕೃಷಿ ಹೊಂಡೆ ತುಂಬಿಸುವುದು ಅಸಾಧ್ಯ.
ಇದರಲ್ಲೇನೋ ಗೋಲ್ ಮಾಲ್ ನಡೆದಿದೆ ಎಂದು ಅನುಮಾನ ಪಟ್ಟ ಗ್ರಾಮಸ್ಥರು ಗುರುವಾರ ಬೆಳ್ಳಂಬೆಳಿಗ್ಗೆ ಕೃಷಿ ಹೊಂಡದ ಬಳಿ ಜಮಾಯಿಸಿ ಪೈಪ್ ಲೈನ್ ಪರಿಶೀಲಿಸಲಾಗಿ ಊರಿನ 3 ಬೋರ್‍ವೆಲ್‍ಗಳ ನೀರನ್ನೂ ಕೃಷಿ ಹೊಂಡಕ್ಕೆ ಬಿಟ್ಟು ಇದೇ ನೀರನ್ನು ಮಾಸಿಕ 10 ಸಾವಿರ ರೂ. ನಂತೆ ಪಂಚಾಯ್ತಿಯಿಂದ ಹಣ ಪಡೆದು ಗ್ರಾಮಕ್ಕೆ ಪುರೈಸುತ್ತಿದ್ದಾರೆ ಎಂಬ ಅಂಶವನ್ನು ಬೆಳಕಿಗೆ ತಂದರು.
ತಕ್ಷಣ ಪಂಚಾಯ್ತಿಗೆ ಮುತ್ತಿಗೆ ಹಾಗಿ ಗ್ರಾಮಕ್ಕೆ ಕೃತಕ ನೀರಿನ ಅಭಾವ ಸೃಷ್ಠಿಸಿ ಕೃಷಿ ಹೊಂಡಕ್ಕೆ ನೀರು ಪೂರೈಸಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಟ್ಟು ಹಿಡಿದರು. ವಿಚಾರ ತಿಳಿದ ಗ್ರಾಪಂ ಅಧ್ಯಕ್ಷ ಕಾಟಲಿಂಗಯ್ಯ, ಪಿಡಿಓ ಕಾವ್ಯ ಅವರು ಸ್ಥಳಕ್ಕೆ ಆಗಮಿಸಿ ತಕ್ಷಣದಿಂದಲೇ ಸಾರ್ವಜನಿಕ ಕೊಳವೆ ಬಾವಿಯಿಂದ ಗ್ರಾಮಕ್ಕೆ ನೀರು ಪುರೈಸುವಂತೆ ನೀರುಗಂಟಿಗಳಿಗೆ ಸೂಚಿಸಿ ಪಂಚಾಯ್ತಿಯಿಂದ ಕೊಟ್ಟಿದ್ದ ಮೋಟರ್, ಪೈಪ್‍ಗಳನ್ನು ಹಿಂಪಡೆಯುವ ಜೊತೆಗೆ ಈ ವರೆವಿಗೆ ಕೊಟ್ಟಿರುವ ಹಣವನ್ನು ಹಿಂದಿರುಗಿಸುವಂತೆ ಸೂಚನೆ ನೀಡುವ ಮೂಲಕ ಪರಿಸ್ಥಿತಿ ತಿಳಿಗೊಳಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
