ಡಿಸಿ ಇನೋವಾ ಕಾರಿಗೆ ಬಯೋ ಡಿಸೈಲ್ ಬಳಕೆ

ಹಾವೇರಿ

         ಹಾವೇರಿ ಜಿಲ್ಲೆಯಲ್ಲಿ ಕೃಷಿ ವಿವಿ ಹಾಗೂ ಖಾಸಗಿ ಉದ್ಯಮಿಗಳು ಹಾಗೂ ರೈತರ ಸಹಯೋಗದಲ್ಲಿ ಜೈವಿಕ ಇಂಧನ ಉತ್ಪಾದನೆಗೆ ಜಿಲ್ಲಾಡಳಿತ ಉತ್ತೇಜನ ನೀಡಲು ವಿಶೇಷ ಕಾರ್ಯಕ್ರಮ ಹಾಕಿಕೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ತಿಳಿಸಿದರು.

           ಗುರುವಾರ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಜೈವಿಕ ಇಂಧನ ಸಂಸ್ಕರಣಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೃಷಿ ವಿಜ್ಞಾನಿಗಳು, ರೈತರು ಹಾಗೂ ಉದ್ಯಮಿಗಳೊಂದಿಗೆ ಸಮಾಲೋಚನೆ ನಡೆಸಿ ಅವರು ಮಾತನಾಡಿದರು.

           ಪ್ರಸ್ತುತ ಜಾಗತಿಕವಾಗಿ ಇಂಧನ ಬಿಕ್ಕಟ್ಟು ಹಾಗೂ ದರ ಸಮರದಿಂದ ಪರ್ಯಾಯ ವ್ಯವಸ್ಥೆಯ ಬಗ್ಗೆ ಚಿಂತಿಸುವುದು ಅಗತ್ಯವಾಗಿದೆ. ಪರಿಸರಕ್ಕೆ ಪೂರಕವಾದ ಜೈವಿಕ ಇಂಧನಗಳ ಉತ್ಪಾದನೆಗೆ ಜಿಲ್ಲಾಡಳಿತ ಎಲ್ಲ ನೆರವು ನೀಡಲಿದೆ. ಜಿಲ್ಲೆಯಲ್ಲಿ ಜೈವಿಕ ಇಂಧನ ಉತ್ಪಾದನೆಗೆ ಮುಂದಾಗುವ ಉದ್ಯಮಿಗಳಿಗೆ ಎಲ್ಲ ರೀತಿಯ ನೆರವು ನೀಡಲಿದೆ. ಇದರೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುದಾನದ ನೆರವು ನೀಡಲಿದೆ. ಈ ನೆರವನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಪೂರಕವಾಗಿ ಉದ್ಯಮಿಗಳಿಗೆ ನೆರವು ಒದಗಿಸಲಿದೆ ಎಂದು ಹೇಳಿದರು.

             ಈಗಾಗಲೇ ಅಲ್ಪಪ್ರಮಾಣದಲ್ಲಿ ಕೃಷಿ ಯಂತ್ರೋಪಕರಣಗಳಿಗೆ, ವಾಹನಗಳಿಗೆ ಜೈವಿಕ ಇಂಧನವನ್ನು ಬಳಸಲಾಗುತ್ತಿದೆ. ಇದರಿಂದ ವಾಹನಗಳ ಯಂತ್ರಗಳ ಕ್ಷಮತೆಯ ಜೊತೆಗೆ ವಾಯುಮಾಲಿನ್ಯ ತಡೆಯಬಹುದಾಗಿದೆ. ಸ್ಥಳೀಯವಾಗಿ ರೈತರಿಗೆ ಹಾಗೂ ಉದ್ಯಮಿಗಳಿಗೆ ಲಾಭದಾಯಕವಾಗಿದೆ. ಉದ್ಯೋಗ ಸೃಷ್ಟಿ ಹಾಗೂ ಸ್ಥಳೀಯವಾಗಿ ಇಂಧನ ಸ್ವಾವಲಂಬನೆ ಸಾಧಿಸಲು ಜಿಲ್ಲಾಡಳಿತ ಈ ಪ್ರಯತ್ನಕ್ಕೆ ಪ್ರೋತ್ಸಾಹ ಒದಗಿಸಲು ನಿರ್ಧರಿಸಿದೆ ಎಂದು ತಿಳಿಸಿದರು.

            ಜೈವಿಕ ಇಂಧನ ಬಳಕೆಯಿಂದ ವಾಯುಮಾಲಿನ್ಯ ಸಹ ತಡೆಯಬಹುದು. ಸ್ಥಳೀಯವಾಗಿ ಬೆಳೆಯುವ ಹೊಂಗೆ, ಬೇವು ಹಾಗೂ ಇತರೆ ಬೀಜಗಳನ್ನು ಉಪಯೋಗಿಸಿ ತಯಾರಿಸಿದ ಜೈವಿಕ ಇಂಧನವನ್ನು ಶೇ.10 ರಷ್ಟನ್ನು ಡಿಸೈಲ್‍ನೊಂದಿಗೆ ಸಮರ್ಪಕವಾಗಿ ಹಾಗೂ ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ನಾಲ್ಕು ಚಕ್ರಗಳ ವಾಹನಗಳಿಗೆ ಹಾಕಿದಲ್ಲಿ ಮೈಲೇಜ್ ಸಹ ಹೆಚ್ಚು ಕೊಡುತ್ತದೆ. ಹನುಮನಮಟ್ಟಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಜೈವಿಕ ಇಂಧನ ತಯಾರಿಕೆ ಘಟಕ ಕಾರ್ಯನಿರ್ವಹಿಸುತ್ತಿದೆ. ಈ ಘಟಕದಲ್ಲಿ ಪ್ರತಿ ತಿಂಗಳು 50 ರಿಂದ 100 ಲೀಟರ್ ಜೈವಿಕ ಇಂಧನ ಉತ್ಪಾದಿಸಲಾಗುತ್ತಿದೆ. ಜೈವಿಕ ಇಂಧನ ಬಳಕೆಗೆ ಹೆಚ್ಚು ಒತ್ತು ನೀಡಬೇಕು ಹಾಗೂ ಸಾರ್ವಜನಿಕರಿಗೆ, ರೈತರಿಗೆ ಹಾಗೂ ಉದ್ಯಮಿಗಳಿಗೆ ಜೈವಿಕ ಇಂಧನದ ಕುರಿತು ಜಾಗೃತಿ ಮೂಡಿಸಬೇಕು.

           ಹೆಚ್ಚಿನ ಪ್ರಮಾಣದಲ್ಲಿ ಜೈವಿಕ ಇಂಧನ ಸಸಿಗಳನ್ನು ಬೆಳೆಸುವುದು ಮತ್ತು ಜೈವಿಕ ಇಂಧನದ ಉತ್ಪಾದನೆಯ ಪ್ರಮಾಣ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ರೈತರಿಗೆ, ಉದ್ಯಮಿಗಳಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುವಂತೆ ಕೃಷಿ ಇಲಾಖಾ ಅಧಿಕಾರಿಗಳಿಗೆ ಹಾಗೂ ಕೃಷಿ ವಿವಿ ಮುಖ್ಯಸ್ಥರಿಗೆ ಸೂಚನೆ ನೀಡಿದರು.

             ಜೈವಿಕ ಇಂಧನ ಉತ್ಪಾದನೆಗೆ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿ ಪ್ರೋತ್ಸಾಹಧನ ಯೋಜನೆಯಡಿ ರೂ.10 ಲಕ್ಷ ರಿಂದ ರೂ.25 ಲಕ್ಷದವರೆಗೆ ಸಾಲ ಸೌಲಭ್ಯ ಒದಗಿಸಲಾಗುವುದು. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳು ಶೇ.35 ರಷ್ಟು ಸಬ್ಸಿಡಿ ಹಾಗೂ ಇತರೆ ವರ್ಗದವರಿಗೆ ಶೇ.25ರ ಸಬ್ಸಿಡಿ ಸೌಲಭ್ಯವಿದೆ. ಜಿಲ್ಲೆಯಲ್ಲಿ ಹೊಂಗೆ ಮತ್ತು ಬೇವು ಉತ್ಪಾದನೆ ಅಧಿಕವಾಗಿದೆ. ಸ್ಥಳೀಯ ರೈತರಿಗೆ ಹಾಗೂ ಉದ್ಯಮಿಗಳಿಗೆ ಇದರಿಂದ ಅನುಕೂಲವಾಗಿದೆ.

          ಈ ಸೌಲಭ್ಯಗಳನ್ನು ಬಳಕೆಮಾಡಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.ಜಿಲ್ಲೆಯಲ್ಲಿರುವ ಎಲ್ಲ ಸರ್ಕಾರಿ ವಾಹನಗಳಿಗೆ ಬಯೋ ಡಿಜೇಲ್ ಬಳಕೆ ಮಾಡುವ ಕುರಿತಂತೆ ಸುತ್ತೋಲೆ ಹೊರಡಿಸಲಾಗುವುದು. ಇಂದಿನಿಂದಲೇ ಜಿಲ್ಲಾಧಿಕಾರಿಗಳ ಸರ್ಕಾರಿ ವಾಹನಕ್ಕೆ ಜೈವಿಕ ಇಂಧನ ಬಳಸಲಾಗುವುದು ಎಂದು ತಿಳಿಸಿದರು.

          ಈ ಸಂದರ್ಭದಲ್ಲಿ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಪ್ರಭಾರ ಡೀನ್ ಡಾ.ಎಂ.ವಿ.ನಾಗರಾಜ, ಸಹಾಯಕ ಪ್ರಾಧ್ಯಾಪಕ ಡಾ.ವೀರಣ್ಣ, ಡಾ.ಶಾಂತಕುಮಾರ, ಡಾ.ನೀಲಕಂಠ, ಡಾ.ಬೆಟ್ಟಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್ ಇತರರು ಉಪಸ್ಥಿತರಿದ್ದರು.ಕೃಷಿ ವಿಜ್ಞಾನ ಕೇಂದ್ರದಲ್ಲಿರುವ ಜೈವಿಕ ಇಂಧನ ಸಂಸ್ಕರಣಾ ಘಟಕ್ಕೆ ಭೇಟಿ ನೀಡಿ ಜೈವಿಕ ಇಂಧನ ತಯಾರಿಕೆ, ಬಳಕೆ, ಸೋಪು ತಯಾರಿಕೆ, ಪಿನಾಯಿಲ್ ತಯಾರಿಕೆ ಸೇರಿದಂತೆ ಉಪ ಉತ್ಪನ್ನಗಳ ಉತ್ಪಾದನೆ ಕುರಿತಂತೆ ಮಾಹಿತಿ ಪಡೆದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link