ಕಮಲ ಕಾರ್ಯಾಚರಣೆ ವಿಫಲವಾಗಲು ಬಿಜೆಪಿಯ ಪಂಚಪಾಂಡವರೆ ಕಾರಣ

ಬೆಂಗಳೂರು

      ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಯಡಿಯೂರಪ್ಪ ನಡೆಸಿರುವ ಆಪರೇಷನ್ ಕಮಲ ಕಾರ್ಯಾಚರಣೆ ಪದೆ ಪದೆ ವಿಫಲವಾಗುತ್ತಿರುವುದಕ್ಕೆ ಬಿಜೆಪಿ ಪಾಳೆಯದ ಪಂಚಪಾಂಡವರೆ ಪ್ರಮುಖ ಕಾರಣ ಎಂದು ಉನ್ನತ ಮೂಲಗಳು ಹೇಳಿವೆ.

       ಸಂಕ್ರಾಂತಿಯ ನಂತರ ನಿಮ್ಮ ಜಾತಕದಲ್ಲಿ ಹಲ ಗ್ರಹಗಳು ಸುಭದ್ರ ಸ್ಥಾನದಲ್ಲಿ ಕೂರುವುದರಿಂದ ಮುಖ್ಯಮಂತ್ರಿಯಾಗಲು ನಿಮಗೆ ಸಾಧ್ಯವಿದೆ. ಹೀಗಾಗಿ ಸಂಕ್ರಾಂತಿಯ ನಂತರ ಆಪರೇಷನ್ ಕಮಲ ಕಾರ್ಯಾಚರಣೆ ಮಾಡಿ ಎಂದು ಜ್ಯೋತಿಷಿಗಳು ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ್ದರು.

         ಪಾರ್ಲಿಮೆಂಟ್ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಾದ ಅನಿವಾರ್ಯತೆ ಇದೆ. ಹಾಗಾಗದೆ ಇದ್ದರೆ ಚುನಾವಣೆಯಲ್ಲಿ ಇಪ್ಪತ್ತರಷ್ಟು ಎಂ.ಪಿ ಸೀಟುಗಳನ್ನು ಗೆಲ್ಲುವುದು ಕಷ್ಟ ಎಂದು ಪಕ್ಷದ ಹೈಕಮಾಂಡ್‍ಗೆ ಎಚ್ಚರಿಕೆ ನೀಡಿದ ಯಡಿಯೂರಪ್ಪ ಸಂಕ್ರಾಂತಿಯ ನಂತರ ಆಪರೇಷನ್ ಕಮಲ ಕಾರ್ಯಾಚರಣೆಗೆ ವೇಗ ನೀಡಿದ್ದರು.

         ಆದರೆ ಹೀಗೆ ಯಡಿಯೂರಪ್ಪ ಅವರು ವೇಗ ನೀಡಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಹಲ ಶಾಸಕರನ್ನು ಸೆಳೆಯುವ ಯತ್ನ ನಡೆಸುತ್ತಿದ್ದಾರಾದರೂ ಪಕ್ಷದಲ್ಲಿರುವ ಪಂಚಪಾಂಡವರೆ ಯಡಿಯೂರಪ್ಪ ಪಾಲಿಗೆ ಶತ್ರುಗಳಾಗಿ ಪರಿಣಮಿಸಿದ್ದಾರೆ.ಅವರಿಗೆ ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರುವುದು ಬೇಕಿಲ್ಲ. ಹಾಗೊಂದು ವೇಳೆ ಯಡಿಯೂರಪ್ಪ ಅವರು ಸಿಎಂ ಆದರೆ ತಮ್ಮ ಜಾಗ ಯಾವುದು ಎಂಬುದು ಅವರಿಗೆ ನಿಕ್ಕಿಯಾಗುತ್ತಿಲ್ಲ. ಹೀಗಾಗಿ ಅವರು ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಸರ್ಕಾರ ರಚನೆಯಾಗಲಿ. ಇಲ್ಲದಿದ್ದರೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವೇ ಮುಂದುವರಿಯಲಿ ಎಂಬ ಬಾವನೆ ಹೊಂದಿದ್ದಾರೆ.

         ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಬಂದು ಬಿಜೆಪಿ ಜತೆ ಕೈ ಜೋಡಿಸಿದರೆ ಅದನ್ನು ಒಪ್ಪಲು ನಾವು ಸಿದ್ಧ. ಆದರೆ ಯಾವ ಕಾರಣಕ್ಕೂ ಯಡಿಯೂರಪ್ಪ ಸಿಎಂ ಆಗುವುದು ಬೇಡ ಎಂಬುದು ಈ ಪಂಚ ಪಾಂಡವರ ಲೆಕ್ಕಾಚಾರ.ಅಂದ ಹಾಗೆ ಯಡಿಯೂರಪ್ಪ ಅವರ ನಂತರ ಪಕ್ಷದ ಮೇಲೆ ತಮಗೇ ಹಿಡಿತ ದಕ್ಕುವುದರಿಂದ ಈಗ ತಕ್ಷಣವೇ ಯಡಿಯೂರಪ್ಪ ಸಿಎಂ ಆಗುವುದನ್ನು ವಿರೋಧಿಸುತ್ತಿದ್ದಾರೆ. ಇದೇ ಕಾರಣಕ್ಕಾಗಿ ಬೇರೆ ಬೇರೆ ಲೆಕ್ಕಾಚಾರಗಳನ್ನು ಹೈಕಮಾಂಡ್ ವರಿಷ್ಟರ ಮುಂದೆ ಮಂಡಿಸುತ್ತಿದ್ದಾರೆ.

         ಮೊದಲನೆಯದಾಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಂದ ಫಲಿತಾಂಶವೇ ವಿಚಿತ್ರವಾಗಿದೆ. ಹೀಗಾಗಿ ನಾವು ಸರ್ಕಾರ ಮಾಡುವುದಕ್ಕಿಂತ ಪ್ರತಿಪಕ್ಷದ ಸಾಲಿನಲ್ಲಿ ಕೂರುವುದೇ ಸೂಕ್ತ.ಮಧ್ಯಪ್ರದೇಶದಲ್ಲಾದರೆ ಆರು ಮಂದಿ ಶಾಸಕರನ್ನು ಸೆಳೆದರೆ ಸಾಕು. ಆದರೆ ಇಲ್ಲಿ ಹದಿನೆಂಟು ಶಾಸಕರನ್ನು ಸೆಳೆಯಬೇಕು. ಇದು ಸಧ್ಯದ ಸ್ಥಿತಿಯಲ್ಲಿ ಬಹಳ ಕಷ್ಟದ ಕೆಲಸ. ಅಷ್ಟೇ ಅಲ್ಲ, ನಾವು ನಡೆಸುವ ಆಪರೇಷನ್‍ಗೆ ಪ್ರತಿಯಾಗಿ ಜೆಡಿಎಸ್-ಕಾಂಗ್ರೆಸ್ ಕೂಡಾ ಆಪರೇಷನ್‍ಗೆ ಇಳಿದರೆ ನಮ್ಮ ಪಕ್ಷದ ಹಲ ಶಾಸಕರು ಆ ಕಡೆ ಹೋಗಬಹುದು.

         ಹಾಗೇನಾದರೂ ಆದರೆ ರಾಜ್ಯ ರಾಜಕೀಯದಲ್ಲಿ ಅರಾಜಕತೆಯ ವಾತಾವರಣ ನಿರ್ಮಾಣವಾಗುತ್ತದೆ. ಮತ್ತು ಇಂತಹ ಅರಾಜಕತೆ ಸೃಷ್ಟಿಯಾಗಲು ಬಿಜೆಪಿಯೇ ಕಾರಣ ಎಂಬ ಅಪವಾದವನ್ನು ಹೊರಬೇಕಾಗುತ್ತದೆ.ಇದರ ಬದಲು ಜೆಡಿಎಸ್ ಪಕ್ಷದ ನಾಯಕರ ಮನ ಒಲಿಸಿ, ಬಿಜೆಪಿ ಜತೆ ಕೈ ಜೋಡಿಸುವಂತೆ ಮಾಡಿದರೆ ನಾವು ನಿರಾಯಾಸವಾಗಿ ಅಧಿಕಾರಕ್ಕೆ ಬರಬಹುದು. ಮತ್ತು ಯಾವುದೇ ಅಪವಾದಗಳಿಗೆ ಸಿಲುಕದಂತೆ ಪಾರ್ಲಿಮೆಂಟ್ ಚುನಾವಣೆಯನ್ನು ಎದುರಿಸಿ, ನಿರೀಕ್ಷಿತ ಪ್ರಮಾಣದ ಸೀಟುಗಳನ್ನು ಗೆಲ್ಲಬಹುದು.

         ಹೀಗಾಗಿ ಕುಮಾರಸ್ವಾಮಿ ಅವರೇ ಸಿಎಂ ಆಗಲಿ. ಯಾಕೆಂದರೆ ಈಗಾಗಲೇ ಹಾಲಿ ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ತಮ್ಮ ಜತೆ ನಡೆದುಕೊಳ್ಳುತ್ತಿರುವ ರೀತಿಯಿಂದ ಕುಮಾರಸ್ವಾಮಿ ಅಪ್‍ಸೆಟ್ ಆಗಿದ್ದಾರೆ. ಹೀಗಾಗಿ ಪರಿಸ್ಥಿತಿಯ ಲಾಭವನ್ನು ನಾವು ಪಡೆಯಬೇಕು. ಹಾಗೆಯೇ ಯಾವ ಅಪವಾದಕ್ಕೂ ಪಕ್ಷ ಗುರಿಯಾಗದಂತೆ ನೋಡಿಕೊಳ್ಳಬೇಕು ಎಂಬುದು ಈ ಪಂಚ ಪಾಂಡವರ ವಾದ.

        ಈ ಹಿಂದೆ ಪಕ್ಷದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದ ಈ ನಾಯಕರು ಇಂತಹ ಅಭಿಪ್ರಾಯ ಹೊಂದಿರುವುದರಿಂದ ಮತ್ತು ಯಡಿಯೂರಪ್ಪ ಸಿಎಂ ಆಗುವುದನ್ನು ಬಯಸದೇ ಇರುವುದರಿಂದ ಆಪರೇಷನ್ ಕಮಲ ಕಾರ್ಯಾಚರಣೆಗೆ ನಿರೀಕ್ಷಿತ ಶಕ್ತಿ ಸಿಗುತ್ತಿಲ್ಲ ಎಂಬುದು ಮೂಲಗಳ ಹೇಳಿಕೆ.

        ಆದರೆ ಮುಂದಿನ ಸಂಸತ್ ಚುನಾವಣೆಯ ಒಳಗೆ ಸಿಎಂ ಆಗಲೇಬೇಕು ಎಂಬ ಹಠಕ್ಕೆ ಬಿದ್ದಿರುವ ಯಡಿಯೂರಪ್ಪ ಒಂದೆಡೆ ತಮ್ಮ ಪ್ರಯತ್ನವನ್ನು ಮುಂದುವರಿಸಿದ್ದರೆ, ಈ ಪಂಚ ಪಾಂಡವರು ಅದಕ್ಕೆ ಗುನ್ನ ಹಾಕುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂಬುದು ಈ ಮೂಲಗಳ ಹೇಳಿಕೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap