ಬ್ಯಾಡಗಿ:
ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಯಾವುದೇ ಚರ್ಚೆಯಾಗದೇ ಬೆಳಗಾವಿಯಲ್ಲಿ ಜರುಗಿದ ವಿಧಾನಸಭೆಯ ಚಳಿಗಾಲ ಅಧಿವೇಶನ ಉಂಡುಹೋದ ಕೊಂಡುಹೋದ ಎನ್ನುವಂತಾಗಿದೆ, ಬ್ಯಾಡಗಿ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸುವ ಒಂದು ಸಣ್ಣ ಬೇಡಿಕೆಯನ್ನು ಮುಖ್ಯಮಂತ್ರಿಗಳು ಪರಿಗಣಿಸದಿರುವುದು ಸರ್ಕಾರದ ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಆರೋಪಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಪುಟ್ಟಣಯ್ಯ ಬಣ) ಕಾರ್ಯಕರ್ತರು ತಾಲೂಕನ್ನು ಬರಗಾಲ ಪೀಡಿತ ಎಂದು ಘೋಷಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಬಳಿಕ ಮಾತನಾಡಿದರು.
ಚಿಹ್ನೆ ಬದಲಿಸಿಕೊಳ್ಳಲಿ: ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ತಿಳಿಸಿದ್ದ ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿಯಾಗಿ ಎಂಟು ತಿಂಗಳು ಗತಿಸಿದರೂ ಸಾಲಮನ್ನಾ ಮಾಡಿಲ್ಲ, ಅಲ್ಲದೇ ಇದೀಗ ಇಲ್ಲಸಲ್ಲದ ಸಬೂಬುಗಳನ್ನು ಹೇಳಿಕೊಂಡು ತಿರುಗಾಡುತ್ತಿದ್ದಾರೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಮಾಡದ ಎಚ್‍ಡಿಕೆ ಇನ್ನಾದರೂ ತಮ್ಮ ಪಕ್ಷದ ಚಿಹ್ನೆಯಲ್ಲಿರುವ ತೆನೆ ಹೊತ್ತ ಮಹಿಳೆ ಚಿತ್ರವನ್ನು ಬದಲಿಸುವಂತೆ ಆಗ್ರಹಿಸಿದರು.
‘ಅಭೀ ಆಯಾ ನಹೀ’: ತಾಲೂಕನ್ನು ಬರಗಾಲ ಪೀಡಿತವೆಂದು ಘೋಷಿಸುವಂತೆ ರೈತಪರ ಸಂಘಟನೆಗಳು ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ, ಜಿಲ್ಲೆಯ ಉಸ್ತುವಾರಿ ಸಚಿವರು ಮಾತ್ರ ಕೈಗೆ ಸಿಗದೇ ಯಾವಾಗ ಕೇಳಿದರೂ “ಅಭಿ ಆಯಾ ನಹೀ” ಎಂಬ ಉತ್ತರ ಸಿಗುತ್ತಿದೆ, ಸೌಜನ್ಯಕ್ಕೂ ಒಂದು ಸಮೀಕ್ಷೆಯನ್ನು ನಡೆಸಲು ಜಿಲ್ಲೆಯ ಉಸ್ತುವಾರಿ ಸಚಿವರು ಸಿದ್ಧರಿಲ್ಲ, ಇನ್ನೂ ಜಿಲ್ಲಾಧಿಕಾರಿಗಳಂತೂ ಇದು ನಮಗೆ ಸಂಬಂಧಿಸಿದಿರುವ ವಿಷಯ ಎನ್ನುವಂತೆ ವರ್ತಿಸುತ್ತಿದ್ದಾರೆ ಎಂದು ಅರೋಪಿಸಿದರು.
‘ಉಂಡು ಹೋದ ಕೊಂಡು ಹೋದ’: ಗಂಗಣ್ಣ ಎಲಿ ಮಾತನಾಡಿ, ಅಧಿವೇಶನದ ಮೊದಲ 7 ದಿವಸ ಸಂಪೂರ್ಣವಾಗಿ ಕೇವಲ ರೈತರ ಸಮಸ್ಯೆ ಬಗ್ಗೆ ಚರ್ಚಿಸುವಂತೆ ಮನವಿ ಸಲ್ಲಿಸಲಾಗಿತ್ತು ಆದರೆ ಕೇವಲ ಕಾಟಾಚಾರದ ಚರ್ಚೆ ನಡೆಸಿದ್ದು ಬಿಟ್ಟರೇ ರೈತರ ಬಗ್ಗೆ ಅರ್ಥಪೂರ್ಣ ಚರ್ಚೆಯಾಗಲಿಲ್ಲ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ‘ಉಂಡು ಹೋದ ಕೊಂಡು ಹೋದ’ ಎನ್ನುವುದಕ್ಕೆ ಅರ್ಥ ಬರುವಂತೆ ವರ್ತಿಸಿದ್ದು ಬೆಳಗಾವಿ ಅಧಿವೇಶನವನ್ನಾದರೂ ಯಾವ ಪುರುಷಾರ್ಥಕ್ಕೆ ನಡೆಸಲಾಗುತ್ತಿದೆ, ತಾಲೂಕನ್ನು ಬರಪೀಡಿತ ಎಂಬ ಘೋಷಣೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ ಕೂಡಲೇ ಮನವಿಯನ್ನು ಮತ್ತೊಮ್ಮೆ ಪರಿಶೀಲನೆ ನಡೆಸುವಂತೆ ಆಗ್ರಹಿಸಿದರು.
ಕೆರೆಗಳನ್ನು ತುಂಬಿಸಿ: ಕಿರಣ ಗಡಿಗೋಳ ಮಾತನಾಡಿ, ತಾಲೂಕಿನಲ್ಲಿ ಬಹುತೇಕ ಕೆರೆಗಳು ಖಾಲಿ ಉಳಿದಿವೆ, ಇದರಿಂದ ಜನ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೇ ಕೃಷಿ ಕ್ಷೇತ್ರ ಹಿನ್ನೆಡೆಯಾಗುತ್ತಾ ಸಾಗಿದೆ, ತಾಲೂಕಿನಲ್ಲಿ ಫಲವತ್ತಾದ ಕೃಷಿ ಭೂಮಿಗಳಿದ್ದರೂ ಸಹ ಸಮರ್ಪಕ ಮಳೆಯಿಲ್ಲದೇ ಬಿತ್ತಿದ ವೆಚ್ಚವೂ ಮರಳದಂತಾಗಿದೆ ಕೂಡಲೇ ತಾಲೂಕಿನ ಎಲ್ಲ ಕೆರೆಗಳನ್ನು ನದಿ ಮೂಲದಿಂದ ತುಂಬಿಸುವ ಕಾರ್ಯವಾಗಬೇಕಾಗಿದೆ ಎಂದು ಆಗ್ರಹಿಸಿದರು.
ಚಿಕಿತ್ಸಾಲಯಗಳಿಗೆ ಬೇಕಾಗಿದೆ ಚಿಕಿತ್ಸೆ: ಚಿಕ್ಕಪ್ಪ ಛತ್ರದ ಮಾತನಾಡಿ, ತಾಲೂಕಿನಲ್ಲಿ 16 ಪಶು ಚಿಕಿತ್ಸಾಲಯಗಳಿವೆಯಾದರೂ ಅವುಗಳಿಗೆ ಸೂಕ್ತ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿಲ್ಲ, ಇದರಿಂದ ಆಸ್ಪತ್ರೆಗಳಿದ್ದರೂ ಇಲ್ಲದಂತಾಗಿವೆ ಎಲ್ಲ ಕೇಂದ್ರಗಳಿಂದ 66 ಸಿಬ್ಬಂದಿಗಳಿರಬೇಕಾದ ಜಾಗದಲ್ಲಿ ಕೇವಲ 30 ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ, ರೈತರಿಗೆ ಇದರಿಂದ ಸಾಕಷ್ಟು ತೊಂದರೆಗಳಾಗುತ್ತಿದ್ದು ಕೂಡಲೇ ಎಲ್ಲ ಪಶು ಚಿಕಿತ್ಸಾಲಯಗಳಿಗೆ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಬಿ.ಎಸ್.ಪಾಟೀಲ, ನಿಂಗಪ್ಪ ಹೆಗ್ಗಣ್ಣನವರ, ಕರಬಸಪ್ಪ ಶಿರಗಂಬಿ, ಶಿವನಗೌಡ ಪಾಟೀಲ ಹಾಗೂ ಇನ್ನಿತರರು ಉಪಸ್ಥಿತರಿದ್ದರು..
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ