ತುರುವೇಕೆರೆ
ಪ್ರಜಾಪ್ರಭುತ್ವ ವ್ಯವಸ್ಥೆಗಳಲ್ಲಿ ಸಂವಿಧಾನಾತ್ಮಕ ಹಕ್ಕುಗಳ ರಕ್ಷಣೆ, ಪ್ರಧಾನಪಾತ್ರ ವಹಿಸಲಿದೆ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶರಾದ ವಿಜೇತ್ ತಿಳಿಸಿದರು.
ಪಟ್ಟಣದ ಸರ್ಕಾರಿ ಕಿರಿಯ ಕಾಲೇಜು, ವಿಶ್ವಮಾನವ ಹಕ್ಕುಗಳ ಸೇವಾಕೇಂದ್ರ, ಹಾಗೂ ತಾಲ್ಲೂಕು ಕಾನೂನು ಸೇವಾ ಕೇಂದ್ರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ” ಮಾನವ ಹಕ್ಕುಗಳ ಅರಿವು, ರಕ್ಷಣೆ, ನೆರವು” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಷ್ಟೋ ಸಂವಿಧಾನಾತ್ಮಕ ಹಕ್ಕುಗಳನ್ನು ಬಡ ಹಾಗೂ ಸಾಮಾನ್ಯ ವರ್ಗದ ಜನತೆ ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆಗೆಲ್ಲಾ ನ್ಯಾಯಾಂಗ ವ್ಯವಸ್ಥೆ, ಮಾನವ ಹಕ್ಕುಗಳ ಆಯೋಗ ಅವರ ನೈತಿಕ ಸ್ಥೈರ್ಯಕ್ಕೆ ನಿಂತು ಅವರ ಹಕ್ಕುಗಳನ್ನು ಸಂರಕ್ಷಿಸಿ ಸ್ವಾಸ್ಥ್ಯ ಸಮಾಜಕ್ಕೆ ಕೊಡುಗೆಯನ್ನಾಗಿಸಿದೆ. ಇಂತಹ ಕಾನೂನಾತ್ಮಕ ಸೂಕ್ಷ್ಮ ಸಂಗತಿಗಳನ್ನು ಇಂದಿನ ವಿದ್ಯಾರ್ಥಿಗಳು ಅರಿತು ಅಂತಹ ಕಾನೂನು ಉಲ್ಲಂಘನಾ ಪ್ರಸಂಗಗಳಲ್ಲಿ ಅವುಗಳನ್ನು ಕಾನೂನಾತ್ಮಕವಾಗಿ ಸಂರಕ್ಷಿಸುವ ಬದ್ದತೆಯನ್ನು ಪ್ರದರ್ಶಿಸಬೇಕಾಗುತ್ತದೆ ಎಂದರು.
ವಿಶ್ವಮಾನವ ಹಕ್ಕುಗಳ ಸೇವಾ ಕೇಂದ್ರದ ಸ್ಥಾಪಕ ಅಧ್ಯಕ್ಷರಾದ ಸಿದ್ದಲಿಂಗೇಗೌಡ ಮಾತನಾಡಿ, ಆಡಳಿತ ವ್ಯವಸ್ಥೆಗಳಲ್ಲಿ ಅತಿಯಾದ ಭ್ರಷ್ಟಾಚಾರ, ಲಂಚಗುಳಿತನ, ಸ್ವಾರ್ಥಪರತೆ ಹೆಚ್ಚಾಗಿ ನಾಗರಿಕ ಸಮಾಜ ತಲ್ಲಣಗೊಂಡಿದೆ. ಬ್ಯಾನರ್, ಬಂಟಿಂಗ್ಸ್, ಪ್ಲಾಸ್ಟಿಕ್, ನಿಷೇಧದಂತಹ ಕ್ರಮಗಳನ್ನು ಅಧಿಕಾರಿಗಳೆ ಕೈಗೊಳ್ಳಬಹುದು. ಇಂತಹ ಸಂಗತಿಗಳಲ್ಲಿ ಅಧಿಕಾರಿಗಳು ನಿರ್ಲಿಪ್ತರಾಗಿ ತಮ್ಮ ಅಧಿಕಾರವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದಿದ್ದಾಗ ನ್ಯಾಯಾಲಯಗಳು ಮಧ್ಯಪ್ರವೇಶಿಸಿ ಕಟ್ಟುನಿಟ್ಟಿನ ಆದೇಶಗಳನ್ನು ನೀಡುತ್ತಾ ಬಂದಿದೆ ಎಂದರು.
ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಅನಂತರಾಮು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲರಾದ ಕೆ.ಎಸ್.ನಾಗರಾಜಪ್ಪ, ಎಸ್‍ಡಿಎಂಸಿಯ ಕುಮಾರ್, ವಕೀಲರಸಂಘದ ಸಿದ್ದರಾಜು, ನಾಗೇಶ್, ನಟರಾಜು ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.