ಸಂಸ್ಕೃತ ವಿಶ್ವಭಾಷೆ : ಎಂ.ಜಿ. ಸಿದ್ದರಾಮಯ್ಯ

ತುಮಕೂರು:

        ಸಂಸ್ಕೃತ ಎಲ್ಲಾ ಭಾಷೆಗಳಿಗೂ ತಾಯಿ ಭಾಷೆ ಇದ್ದಂತೆ. ಅದು ಕೊರೆ ಬೀಳದ ಗಣಿ. ಈ ಭಾಷೆಯನ್ನು ಅರಿತವನು ಕಲಿತವನು ಆತ್ಮವಿಶ್ವಾಸದಿಂದ ಬೀಗಬಲ್ಲ. ಈ ಭಾಷೆ ನಮ್ಮ ದೇಶಕ್ಕಷ್ಟೇ ಸೀಮಿತವಲ್ಲ. ಇಂದು ಇದು ವಿಶ್ವಭಾಷೆಯಾಗಿ ಬೆಳೆದಿದೆ ಎಂದು ಸಂಸ್ಕೃತ ವಿದ್ವಾಂಸರಾದ ವಿದ್ವಾನ್ ಎಂ.ಜಿ. ಸಿದ್ದರಾಮಯ್ಯನವರು ತುಮಕೂರಿನ ಹನುಮಂತಪುರದಲ್ಲಿ ಸಿರಿಗನ್ನಡ ವೇದಿಕೆ ಮಹಿಳಾಘಟಕದ ವತಿಯಿಂದ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ “ಸಂಸ್ಕೃತ-ಸಂಸ್ಕೃತಿ” ವಿಷಯ ಕುರಿತಾಗಿ ಮಾತನಾಡುತ್ತಾ ತಿಳಿಸಿದರು.

         ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಅವರು ಸಂಸ್ಕೃತ ಭಾಷೆ ಅಮೃತ ಭಾಷೆ ಎಂದು ಬಣ್ಣಿಸಿದರು. ಮಹಿಳಾಘಟಕದ ಜಿಲ್ಲಾಧ್ಯಕ್ಷರಾದ ಪದ್ಮಾಕೃಷ್ಣಮೂರ್ತಿಯವರು ಮಾತನಾಡುತ್ತಾ ಸಂಸ್ಕೃತ ಶ್ರೇಷ್ಠ ಭಾಷೆಯಾಗಿದ್ದು ಸ್ಪಷ್ಠವಾಗಿ ಮಾತನಾಡುವ ಕಲೆಯನ್ನು ಕಲಿಸುತ್ತದೆ. ಯಾವುದೇ ಭಾಷೆಯ ಕ್ಲಿಷ್ಠ ಪದವನ್ನು ಸಂಸ್ಕೃತ ಕಲಿತವನು ಸರಾಗವಾಗಿ ಹೇಳಿಬಿಡುತ್ತಾನೆ.

        ಸಂಸ್ಕೃತ ಭಾಷೆ ಜ್ಞಾನ ಸಾಗರವಾಗಿದ್ದು ಅದನ್ನು ನಾವು ಅಧ್ಯಯನ ಮಾಡುವುದರ ಮೂಲಕ ದಕ್ಕಿಸಿಕೊಳ್ಳಬೇಕೆಂದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಸಮಾಜ ಸೇವಕಿ ಸುನೀತಮೂರ್ತಿಯವರು ಕನ್ನಡ ಭಾಷೆ ಸಂಸ್ಕೃತ ಭಾಷೆಯ ಸಾರವನ್ನು ಸಂಪೂರ್ಣವಾಗಿ ಹೀರಿಕೊಂಡಿದೆ.

        ಮನೆಯ ಎಲ್ಲ ಸದಸ್ಯರೂ ಸಹ ಕನ್ನಡದಲ್ಲೇ ಮಾತನಾಡಬೇಕು, ಅದರಲ್ಲೂ ತಾಯಂದಿರು ಮಕ್ಕಳ ಹತ್ತಿರ ಕನ್ನಡದಲ್ಲೆ ಮಾತನಾಡಬೇಕು ಎಂಬ ಕಿವಿಮಾತನ್ನು ಹೇಳಿದರು. ಈ ಸಂದರ್ಭದಲ್ಲಿ ಬೆಂಗಳೂರಿನ ಶಿಕ್ಷಕಿ ಜಯಾಗಿರೀಶ್ ಅವರನ್ನು ಅವರು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಮಹಿಳಾಪರ ಹೋರಾಟಗಾರ್ತಿ ಕಲ್ಯಾಣಿ ಅವರನ್ನೂ ಸಹ ಗೌರವಿಸಲಾಯಿತು. ಮಿಮಿಕ್ರಿ ಈಶ್ವರಯ್ಯನವರು ಹಾಸ್ಯ ಮುಖೇನ ಸಭೆಯಲ್ಲಿ ನಗೆಗಡಲನ್ನೇ ತೇಲಿ ಬಿಟ್ಟರು.

        ಹಿರಿಯ ಸಾಹಿತಿಗಳಾದ ಶೇಷಾದ್ರಿಹೊಳವನಹಳ್ಳಿ, ಅಬ್ಬಿನೊಳೆ ಸುರೇಶ, ದಯಾನಂದ ಕುಲಕರ್ಣಿ, ಉಷಾ, ವಿ.ಪಿ.ಕೃಷ್ಣಮೂರ್ತಿ, ದೊಗ್ಗನಹಳ್ಳಿ ಮಹಾಲಕ್ಷ್ಮಿ, ಮಂಜುಳಾದೇವಿ, ನಾಗಲಾಂಬಿಕೆ, ಅಂಬಿಕ, ಕಮಲ, ಪ್ರತಿಭ, ಸುಧಾರಾಜು ಪ್ರಮೀಳ, ಎ.ಎಂ. ಕೃಷ್ನಮೂರ್ತಿ, ಗಿರೀಶ್, ಬಸವರಾಜು, ಪದ್ಮ, ಸಂಗೀತ ಮುಂತಾದವರು ಹಾಜರಿದ್ದರು. ಲಕ್ಷ್ಮೀಪುತ್ರರವರು ಪ್ರಾರ್ಥನೆ ಮಾಡಿದರೆ ಮಂಜುಳಾದೇವಿಯವರು ವಂದನಾರ್ಪಣೆ ಮಾಡಿದರು. ಯುವಕವಿ ಅಖಿಲೇಶ್ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link