ಚಿತ್ರದುರ್ಗ:
ಪಾರ್ಲಿಮೆಂಟ್ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯದ ಎಂಟು ಲೋಕಸಭಾ ಕ್ಷೇತ್ರಗಳಲ್ಲಿ ಸುತ್ತಾಡಿ ಹಿಂದುಳಿದ ವರ್ಗದವರ ಸಭೆ ನಡೆಸಿ ಸಂಘಟನೆಗೆ ಒತ್ತು ಕೊಡುತ್ತಿದ್ದೇನೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ.ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷ ಪುಟ್ಟಸ್ವಾಮಿ ಹೇಳಿದರು.
ಬಿಜೆಪಿ.ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಎಲ್ಲಾ ಪಕ್ಷಗಳು ನಾಯಕರುಗಳು ಹಿಂದುಳಿದವರನ್ನು ಓಲೈಸಲು ಹೊರಟಿದ್ದಾರೆ. ರಾಜ್ಯದ ಮೂವತ್ತು ಜಿಲ್ಲೆಗಳಲ್ಲಿ ಸಮಿತಿಯಾಗಿದೆ. 298 ಮಂಡಲ ಸಮಿತಿ, ಬೂತ್ ಸಮಿತಿ, ವಾರ್ಡ್ ಸಮಿತಿ ಹಾಗೂ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸಮಿತಿಯಾಗಿದೆ. ಜಿಲ್ಲೆಯಲ್ಲಿ ಶೇ.32.35 ರಷ್ಟು ಹಿಂದುಳಿದ ಜನಾಂಗದವರ ಮತಗಳಿದ್ದು, ಪ್ರಧಾನಿ ನರೇಂದ್ರಮೋದಿರವರ ನಾಲ್ಕುವರೆ ವರ್ಷಗಳ ಸಾಧನೆಯ ಶ್ವೇತಪತ್ರ ಹೊರಡಿಸಿ ಪಾರ್ಲಿಮೆಂಟ್ ಚುನಾವಣೆಯಲ್ಲಿ ಜನತೆಯಿಂದ ಮತ ಕೇಳುತ್ತಿದ್ದಾರೆ. ಆದರೆ ಘಟಬಂಧನ್ ಹೆಸರಿನಲ್ಲಿ ದೇಶದ ಪ್ರಧಾನಿಯಾಗಲು ಹೊರಟವರು ಮುಂದಿನ ಪ್ರಧಾನಿ ಯಾರು ಎಂಬುದನ್ನು ಹೇಳುತ್ತಿಲ್ಲ. ಹೇಳಿದರೆ ಘಠಬಂಧನ್ ಛಿದ್ರವಾಗಲಿದೆ ಎಂದು ಹಾಸ್ಯವಾಗಿ ನುಡಿದರು.
ಕೇಂದ್ರ ಸರ್ಕಾರದ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾಲತಾಣಗಳಲ್ಲಿ ಪಸರಿಸಲಾಗಿದೆ. ಮುಂದಿನ ನಡೆ ನುಡಿಯನ್ನು ಪ್ರಧಾನಿ ಬಜೆಟ್‍ನಲ್ಲಿ ತಿಳಿಸಿದ್ದಾರೆ. ದೇಶಕ್ಕೆ ಕಂಟಕವಾಗಿದ್ದ ಭಯೋತ್ಪಾದನೆಯನ್ನು ನಿಗ್ರಹಿಸಲು ಇಡಿ ಪ್ರಪಂಚವನ್ನು ಸುತ್ತಿರುವ ಮೋದಿರವರು ಬಲಿಷ್ಟ ರಾಷ್ಟ್ರಗಳ ಬೆಂಬಲ ಪಡೆದು ನಮ್ಮ ಸೈನಿಕರಿಗೆ ಬುಲೆಟ್ ಪ್ರೂಫ್ ನೀಡಿದ್ದಾರೆ. ಹಬ್ಬಗಳನ್ನು ಸೈನಿಕರ ಜೊತೆ ಆಚರಿಸಿದ್ದಾರೆ.
ಆಧುನಿಕ ಯಂತ್ರಗಳು ಸೈನ್ಯಕ್ಕೆ ಸೇರಿದೆ. ಇಂಡಿಯಾ ಶಕ್ತಿಶಾಲಿ ಎನ್ನುವುದನ್ನು ಪ್ರಪಂಚಕ್ಕೆ ತೋರಿಸಿದ್ದಾರೆ. ದೇಶದ ಅಭದ್ರತೆಯನ್ನು ತೊಲಗಿಸಲು ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕೆಂಬುದು ನಮ್ಮ ಉದ್ದೇಶವಾಗಿರುವುದರಿಂದ ಮತದಾರರ ಬಳಿ ಹೊರಟಿದ್ದೇವೆ. ಬಿಜೆಪಿ.ಹಿಂದುಳಿದ ವರ್ಗದವರು ಪಕ್ಷವನ್ನು ಸಂಘಟಿಸಿ ರಾಜ್ಯದ 28 ಕ್ಷೇತ್ರಗಳಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ಸ್ಥಾನಗಳನ್ನು ಪಾರ್ಲಿಮೆಂಟ್ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ಕರೆ ನೀಡಿದರು.
ಈ ಹಿಂದೆ ದೇಶದಲ್ಲಿ 1500 ಕ್ಕೂ ಹೆಚ್ಚು ಗಣಿಗಾರಿಕೆಗಳು ನಡೆಯುತ್ತಿತ್ತು. ಮೋದಿರವರು ದೇಶದ ಪ್ರಧಾನಿಯಾದ ಮೇಲೆ ಕೇವಲ 82 ಗಣಿಗಾರಿಕೆಗಳಿಗೆ ಅನುಮತಿ ನೀಡಿ ನೈಸರ್ಗಿಕ ಸಂಪತ್ತು ಲೂಟಿಯಾಗುವುದನ್ನು ತಡೆದಿದ್ದಾರೆ. ಇದರಿಂದ 3.94 ಲಕ್ಷ ಕೋಟಿ ರೂ.ಹೆಚ್ಚಿನ ಆದಾಯ ಖಜಾನೆಗೆ ಬಂದಿದೆ ಎಂದು ಮೋದಿರವರ ಸಾಧನೆಗಳನ್ನು ಗುಣಗಾನ ಮಾಡಿದರು.
ದೇಶದಲ್ಲಿ ಎಂಟು ಕೋಟಿ ಬಡವರಿಗೆ ಉಚಿತ ಗ್ಯಾಸ್ ಸಿಲಿಂಡರ್‍ಗಳನ್ನು ವಿತರಿಸಲಾಗಿದೆ. ಆಹಾರ ಭದ್ರತಾ ಕಾಯ್ದೆಯನ್ನು 36 ರಾಷ್ಟ್ರಗಳಿಗೆ ವಿಸ್ತರಿಸಲಾಗಿದೆ. ಅಸಂಘಟಿತ ಕಾರ್ಮಿಕರಿಗೆ ಹಣ ಇನ್ಸುರೆನ್ಸ್ ಸೌಲಭ್ಯವನ್ನು ಬಜೆಟ್‍ನಲ್ಲಿ ಘೋಷಿಸಲಾಗಿದೆ. ಶೇ.18 ರಷ್ಟಿದ್ದ ಬಡತನ ರೇಖೆ ಶೇ.5 ಕ್ಕೆ ಇಳಿದಿದೆ. ಇದೆಲ್ಲಾ ಸಾಧನೆಯಲ್ಲವೇನು ಎಂದು ವಿರೋಧಿಗಳಿಗೆ ಪ್ರಶ್ನಿಸಿದರು.
ಜನಧನ್ ಯೋಜನೆಯಡಿ ದೇಶದಲ್ಲಿ 32.52 ಹೊಸ ಬ್ಯಾಂಕ್ ಖಾತೆ ಆರಂಭವಾಗಿದೆ. ಮುಂದಿನ ಭವಿಷ್ಯದ ಬಗ್ಗೆ ಚಿಂತಿಸಿ ಜನಧನ್, ಅಂತ್ಯೋದಯ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಕರ್ನಾಟಕ ರಾಜ್ಯದಲ್ಲಿ 22 ಲಕ್ಷದ ಆರು ಸಾವಿರ ಕುಟುಂಬಗಳಿಗೆ ಉಚಿತ ಗ್ಯಾಸ್ ಕನೆಕ್ಷನ್ ಒದಗಿಸಲಾಗಿದೆ. ಸಂಪನ್ಮೂಲಗಳನ್ನು ಕ್ರೂಢೀಕರಿಸಿ ಚುನಾವಣಾ ಪೂರ್ವದಲ್ಲಿ ನೀಡಿದ್ದ ಒಂದೊಂದೆ ಭರವಸೆಗಳನ್ನು ಮೋದಿರವರು ಈಡೇರಿಸುತ್ತಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬ ರಾಜಕಾರಣ ವಿಸ್ತರಣೆಯಾಗುತ್ತಿದೆ.
ರೈತರಿಗೆ ಬೇವು ಲೇಪಿತ ಗೊಬ್ಬರ, ಬಡವರ ಆರೋಗ್ಯದ ದೃಷ್ಟಿಯಿಂದ ಜನೌಷಧಿ, ಸ್ಟಂಟ್ ಅಳವಡಿಕೆ, ಆಯುಷ್ಮಾನ್‍ಭವ, ಇವೆಲ್ಲಾ ಹಚ್ಚೆದಿನ್ ಅಲ್ಲವೇನು. ರಾಜ್ಯ ಸಮ್ಮಿಶ್ರ ಸರ್ಕಾರ ಇಕ್ಕಟ್ಟಿನಲ್ಲಿ ಸಿಲುಕಿ ಒದ್ದಾಡುತ್ತಿದೆ. ಜೆ.ಡಿ.ಎಸ್.ನವರ ಮೇಲೆ ಕಾಂಗ್ರೆಸ್‍ನವರು. ಕಾಂಗ್ರೆಸ್ ಮೇಲೆ ಜೆಡಿಎಸ್.ನವರು ಅಪವಾದ ಹಾಕಿಕೊಂಡು ವಿನಾ ಕಾಲಹರಣ ಮಾಡುತ್ತಿರುವುದನ್ನು ಬಿಟ್ಟರೆ ಸಾಧನೆ ಮಾತ್ರ ಶೂನ್ಯ ಎಂದು ಟೀಕಿಸಿದರು.
ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಬಿಜೆಪಿ.ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್, ಬಿಜೆಪಿ.ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ಸಂಪತ್, ಮಾಜಿ ಸಂಸದ ಜನಾರ್ಧನಸ್ವಾಮಿ, ನಗರ ಮಂಡಲ ಅಧ್ಯಕ್ಷ ತಿಪ್ಪೇಸ್ವಾಮಿ ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್‍ಬೇದ್ರೆ ಇನ್ನು ಮುಂತಾದವರು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








