ಚಳ್ಳಕೆರೆ
ತಾಲ್ಲೂಕಿನಾದ್ಯಂತ ಕಳೆದ ಸುಮಾರು 15 ದಿನಗಳಿಂದ ಮೇಲಿಂದ ಮೇಲೆ ಮಳೆರಾಯನ ಕೃಪೆಯಾಗುತ್ತಿದ್ದು, ತಾಲ್ಲೂಕಿನ ಬಹುತೇಕ ಕಡೆ ಶೇಂಗಾ ಬಿತ್ತನೆ ಕಾರ್ಯ ಅಂತಿಮ ಹಂತದಲ್ಲಿದ್ದು, ಇನ್ನೂ ಕೆಲವೆಡೆ ಭೂಮಿಯಲ್ಲಿ ಹಸಿ ಹೆಚ್ಚಾದ ಹಿನ್ನೆಲೆಯಲ್ಲಿ ಬಿತ್ತನೆಗೆ ತಾತ್ಕಾಲಿಕ ಬ್ರೇಕ್ ನೀಡಲಾಗಿದೆ.
ಇತ್ತೀಚಿನ ದಿನಗಳಲ್ಲಿ ತಾಲ್ಲೂಕಿನ ಎಲ್ಲಾ ಭಾಗಗಳಲ್ಲೂ ನಿರೀಕ್ಷೆಗೂ ಮೀರಿ ಉತ್ತಮ ಹದ ಮಳೆಯಾಗುತ್ತಿದ್ದು, ಕೆಲವೆಡೆ ರೈತರು ಸಂತೃಪ್ತಿಯಿಂದ ವರುಣ ಆಗಮನಕ್ಕೆ ಸಂತಸ ವ್ಯಕ್ತಪಡಿಸಿದರೆ, ಇನ್ನೊಂದೆಡೆ ಕೆಲವು ರೈತರ ಮುಖದಲ್ಲಿ ಆತಂಕ ಮನೆ ಮಾಡಿದೆ. ಕಾರಣ ಇತ್ತೀಚಿನ ಮಳೆ ಅವರ ಜಮೀನಿನಲ್ಲಿದ್ದ ಬೆಳೆಯನ್ನು ನೀರಿನಲ್ಲಿ ಮುಳಿಗಿಸಿದರೆ, ಇನ್ನೂ ಕೆಲವೆಡೆ ಬಿತ್ತದ ಶೇಂಗಾ ಬೀಜ ಮಳೆಯ ನೀರಿನಲ್ಲಿ ಹರಿದುಹೋಗಿದೆ. ಇನ್ನೂ ಕೆಲವೆಡೆ ಟಮೋಟ ಹಾಗೂ ಇನ್ನಿತರೆ ತರಕಾರಿ ಬೆಳೆದ ರೈತರ ಹೊಲದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ನಿಂತಿದ್ದು, ಟಮೋಟ ಹಾಗೂ ಇನ್ನಿತರೆ ತರಕಾರಿ ಕೊಳೆಹೋಗುವ ಸಂಭವವಿದ್ದು, ರೈತರು ಕಳವಳಕ್ಕೆ ಈಡಾಗಿದ್ಧಾರೆ.
ತಾಲ್ಲೂಕಿನಾದ್ಯಂತ ಶುಕ್ರವಾರ ರಾತ್ರಿ ಸುಮಾರು 200 ಎಂ.ಎಂ. ಮಳೆಯಾಗಿದ್ದು, ಚಳ್ಳಕೆರೆ-13.04, ಪರಶುರಾಮಪುರ 30.02, ದೇವರಮರಿಕುಂಟೆ 55.02, ತಳಕು-70.04, ನಾಯಕನಹಟ್ಟಿ 20.08 ಮಳೆಯಾಗಿರುತ್ತದೆ. ವಿಶೇಷವಾಗಿ ತಳುಕಿನಲ್ಲಿ ಕಳೆದ ಮೂರು ದಿನಗಳ ಅವಧಿಯಲ್ಲಿ ಸುಮಾರು 200 ಎಂ.ಎಂ.ಮಳೆಯಾಗಿದೆ. ಉಳಿದಂತೆ ನಾಯಕನಹಟ್ಟಿ ಮತ್ತು ದೇವರಮರಿಕುಂಟೆ ವ್ಯಾಪ್ತಿಯಲ್ಲು ಸಹ ಉತ್ತಮ ಹದ ಮಳೆಯಾಗಿದೆ.
ಶುಕ್ರವಾರ ರಾತ್ರಿ ಸುರಿದ ಅಧಿಕ ಮಳೆಯಿಂದ ತಳಕು ಹೋಬಳಿ ವ್ಯಾಪ್ತಿಯ ಕೋಡಿಹಳ್ಳಿ ಗ್ರಾಮದಲ್ಲಿ ಸುಮಾರು 10ಕ್ಕೂ ಹೆಚ್ಚು ರೈತರ ಟಮೋಟ ಬೆಳೆ ಮಳೆಗೆ ಸಿಕ್ಕಿ ಟಮೋಟ ಕೊಳೆಯುವ ಸ್ಥಿತಿ ಎದುರಾಗಿದೆ. ಇತ್ತೀಚೆಗೆ ತಾನೇ ಗ್ರಾಮದ ಕೆಲವು ರೈತರು ಶೇಂಗಾ ಬಿತ್ತನೆ ಮಾಡಿದ್ದು, ಮಳೆ ನೀರು ಹರಿದು ಶೇಂಗಾ ಬೀಜವೂ ಸಹ ನೀರಿನಲ್ಲಿ ಹರಿದುಹೋಗಿದೆ. ಕೋಡಿಹಳ್ಳಿ ಗ್ರಾಮದ ಭೀಮಾರೆಡ್ಡಿ, ವಿಜಯಕುಮಾರ್, ಲಿಂಗಾರೆಡ್ಡಿ, ರೇವಣ್ಣ, ನಾಗರಾಜ ಮುಂತಾದವರ ಜಮೀನಲ್ಲಿದ್ದ ಟಮೋಟ ಬೆಳೆ ನೀರಿನಿಂದ ಆವೃತ್ತವಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಟಮೋಟ ಬೆಳೆ ಕೈಸೇರುವುದೇ ಎಂಬ ಆತಂಕ ಉಂಟಾಗಿದೆ.
ಅದೇ ರೀತಿ ಗ್ರಾಮದ ಬಸವರಾಜ, ವೆಂಕಟೇಶ್‍ರೆಡ್ಡಿ, ಶ್ರೀನಿವಾಸ್, ದಾನಪ್ಪ ದೊಡ್ಡ ಓಬಯ್ಯ, ಮಂಜಣ್ಣ, ರಾಜ ಮುಂತಾದವರು ಜಮೀನಲ್ಲಿ ಶೇಂಗಾ ಬಿತ್ತನೆ ಮಾಡಿದ್ದು, ಬಿತ್ತನೆ ಮಾಡಿದ ಎರಡು ದಿನದಲ್ಲಿ ಮಳೆ ಬಂದು ಶೇಂಗಾ ಬೀಜ ಮಳೆಯಲ್ಲಿ ಕೊಚ್ಚಿಹೋಗಿರುತ್ತದೆ. ಇತ್ತೀಚೆಗೆ ಬಂದ ಮಳೆ, ರೈತರ ಪಾಲಿಗೆ ವರವಾಗುವ ಬದಲು ಶಾಪವಾಗಲಿದೆ ಎಂಬ ಆತಂಕ ಉಂಟಾಗಿದೆ.
ತಾಲ್ಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಾದಲಗಟ್ಟೆ ಕೆರೆ ಈ ಹಿಂದೆ 2017ರಲ್ಲಿ ತುಂಬಿದ್ದು, ಶುಕ್ರವಾರ ಬಿದ್ದ ಮಳೆಗೆ ಸದರಿ ಕೆರೆಯೂ ಸಹ ತುಂಬಿದ್ದು, ಗ್ರಾಮದ ಬಹುತೇಕ ಜನರು ಕೆರೆಯಲ್ಲಿ ದಾಸ್ತಾನಿರುವ ನೀರನ್ನು ಕಂಡು ಸಂತಸ ಪಡುತ್ತಿದ್ಧಾರೆ. ಕೆರೆ ಖಾಲಿ ಇದ್ದಾಗ ಕೆರೆಯ ಮಧ್ಯಭಾಗದಲ್ಲಿ ರೊಪ್ಪ ನಿರ್ಮಿಸಿಕೊಂಡಿದ್ದು, ಅದು ಸಹ ಈಗ ಮುಳುಗಡೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
