ನಗರದ ಜನತೆಗೆ ವಸತಿ ನೀಡುವ ಯೋಜನೆಯ ಅರ್ಜಿ ವಿತರಣಾ ಕಾರ್ಯಕ್ಕೆ ಚಾಲನೆ

ಚಳ್ಳಕೆರೆ

          ನಗರದ ಬಡ ಹಾಗೂ ಮಧ್ಯಮ ವರ್ಗದ ಜನತೆಗೆ ಸರ್ಕಾರದಿಂದ ವಿಶೇಷವಾಗಿ ಮಂಜೂರಾತಿ ಪಡೆದು ಇಲ್ಲಿನ ಪಾವಗಡ ರಸ್ತೆಯಲ್ಲಿರುವ ನೂತನ ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ಮೂಲಕ ಪರಿವರ್ತನೆಗೊಂಡ ನಿವೇಶನಗಳಲ್ಲಿ ಮನೆ ನಿರ್ಮಿಸಿಕೊಡುವ ಕುರಿತು ನಗರಸಭೆ ವತಿಯಿಂದ ಸಾರ್ವಜನಿಕರಿಂದ ಅರ್ಜಿಗಳನ್ನು ಪಡೆದು ಪರಿಶೀಲನೆ ಮಾಡುವ ಕುರಿತು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಡಿ.5ರಂದು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಯೋಜನಾಧಿಕಾರಿ ಹಾಗೂ ಪೌರಾಯುಕ್ತರು ಡಿ.15ರಿಂದ ಅರ್ಜಿಗಳನ್ನು ವಿತರಣೆ ಮಾಡಲಾಗುವುದು ಎಂದು ಪತ್ರಿಕಾ ಹೇಳಿಕೆ ನೀಡಿದ್ದರು.

           ಈ ಹಿನ್ನೆಲೆಯಲ್ಲಿ ಶಾಸಕ ಮಾರ್ಗದರ್ಶನದಂತೆ ಇಲ್ಲಿನ ನಗರಸಭೆ ಡಿ.15ರಿಂದ ನಗರಸಭೆಯ ಹಳೇ ಕಟ್ಟಡದಲ್ಲಿ ನಿವೇಶನ ಹಾಗೂ ಮನೆ ರಹಿತರಿಗೆ ನಗರಸಭೆಯೇ ಸಿದ್ದಪಡಿಸಿದ ಅರ್ಜಿ ನಮೂನೆಯನ್ನು ವಿತರಿಸಲು ಪ್ರಾರಂಭಿಸಿದ್ದು, ಪ್ರಾರಂಭದ ದಿನದಂದೇ ಅರ್ಜಿಗಳನ್ನು ಪಡೆಯಲು ಸಾರ್ವಜನಿಕರು ಸರಥಿ ಸಾಲಿನಲ್ಲಿ ನಿಂತು ಅರ್ಜಿಗಳನ್ನು ಪಡೆದರು. ಮೊದಲ ದಿನವೇ ಸುಮಾರು 500ಕ್ಕೂ ಹೆಚ್ಚು ಅರ್ಜಿಗಳು ವಿಲೇವಾರಿಯಾಗಿವೆ ಎಂದು ತಿಳಿದುಬಂದಿದೆ.

         ಅರ್ಜಿ ವಿತರಣೆಗೆ ಚಾಲನೆ ನೀಡಿದ ಪೌರಾಯುಕ್ತ ಜೆ.ಟಿ.ಹನುಮಂತರಾಜು ಮಾಹಿತಿ ನೀಡಿ, ಈಗಾಗಲೇ ನಿರ್ಧರಿಸಿರುವಂತೆ ಡಿ.15 ರಿಂದ 31 ರ ತನಕ ಅರ್ಜಿಗಳನ್ನು ನೀಡಲಾಗುವುದು. ಪ್ರತಿ ಅರ್ಜಿಗೂ 50 ರೂ ಶುಲ್ಕವನ್ನು ನಿಗದಿ ಪಡಿಸಿದ್ದು, ಶುಲ್ಕ ಪಾವತಿಸಿ ಅರ್ಜಿ ಪಡೆಯಬಹುದಾಗಿದೆ. ಅರ್ಜಿಯಲ್ಲಿ ನೀಡಬೇಕಾದ ಎಲ್ಲಾ ದಾಖಲಾತಿಯ ಬಗ್ಗೆ ಮಾಹಿತಿಯನ್ನು ಸಹ ಒದಗಿಸಲಾಗಿದೆ. ಅರ್ಜಿಗಳ ಸ್ವೀಕಾರ ಅವಧಿ ಮುಗಿದ ನಂತರ ಪರಿಶೀಲನೆ ನಡೆಸಲಾಗುವುದು. ಪ್ರಸ್ತುತ 3950 ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವ ಗುರಿ ಇದಾಗಿದೆ.

           ಈ ಯೋಜನೆ ಬಗ್ಗೆ ವಿವರ ನೀಡಿದ ಅವರು, ಒಟ್ಟು 262.50 ಕೋಟಿ ಯೋಜನೆ ಇದಾಗಿದ್ದು, ನಿವೇಶನ ಮತ್ತು ಮನೆ ಇಲ್ಲದವರು ಮಾತ್ರ ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಆರ್ಹರಾಗಿರುತ್ತಾರೆ. ಇದರಲ್ಲಿ ಪರಿಶಿಷ್ಟ ಜಾತಿಗೆ ಶೇ. 30, ಪರಿಶಿಷ್ಟ ವರ್ಗಕ್ಕೆ ಶೇ.20, ವಿಕಲಚೇತನರಿಗೆ ಶೇ.5 ಹಾಗೂ ಸಾಮಾನ್ಯ ವರ್ಗಕ್ಕೆ ಶೇ.45ರಷ್ಟು ಮೀಸಲಾತಿ ಇರುತ್ತದೆ. ರಾಜ್ಯ ಸರ್ಕಾರದ ಅನುದಾನ 86.34 ಕೋಟಿ, ಕೇಂದ್ರ ಸರ್ಕಾರದ ಅನುದಾನ 78.75 ಕೋಟಿ ಇದ್ದು, ಉಳಿದ 97 ಕೋಟಿ ಫಲಾನುಭವಿಗಳಿಂದ ಬರಿಸಬೇಕಾಗುತ್ತದೆ ಎಂದರು. ಈ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಫಲಾನುಭವಿಗೆ 1.70 ಲಕ್ಷ, ಸಾಮಾನ್ಯ ಫಲಾನುಭವಿಗೆ 2.30 ಲಕ್ಷ ವೆಚ್ಚದಲ್ಲಿ ಮನೆ ಪಡೆಯಬಹುದಾಗಿದೆ ಎಂದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link