ಹುಳಿಯಾರು
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಬೆಂಗಳೂರಿನ ಪೀಪಲ್ ಟ್ರೀ ಆಸ್ಪತ್ರೆ ಹಾಗೂ ಎನ್ಎಸ್ಎಸ್ ಘಟಕ ಮತ್ತು ಯುವ ರೆಡ್ ಕ್ರಾಸ್ ಘಟಕದ ಸಂಯುಕ್ತ ಆಶ್ರಯದಲ್ಲಿ ಜನವರಿ 20 ರ ಭಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ.
ಕಾಲೇಜಿನ ಬೆಳ್ಳಿಹಬ್ಬದ ಅಂಗವಾಗಿ ಶಿಬಿರ ಆಯೋಜಿಸಿದ್ದು, ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಾಂಶುಪಾಲ ಕೃಷ್ಣಮೂರ್ತಿ ಬಿಳಿಗೆರೆ ತಿಳಿಸಿದರು.ಶಿಬಿರದಲ್ಲಿ ಮೂಳೆ ಮತ್ತ ಕೀಲು ತಜ್ಞರು, ದಂತ ವೈದ್ಯರು, ಮಧುಮೇಹ ಮತ್ತು ರಕ್ತದೊತ್ತಡ ತಜ್ಞರು, ಕಣ್ಣಿನ ತಜ್ಞರು, ಫಿಜಿಯೋ ತೆರಪಿ ತಜ್ಞರು, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು ಭಾಗವಹಿಸಲಿದ್ದಾರೆ.
ಶಿಬಿರದಲ್ಲಿ ತಪಾಸಣೆಗೆ ಒಳಪಡುವ ರೋಗಿಗಳಿಗೆ ತಾಲೂಕು ವೈದ್ಯರ ಸಂಘದಿಂದ ಉಚಿತವಾಗಿ ಔಷಧಿ ಸಹ ವಿತರಿಸಲಾಗುವುದು. ಶಿಬಿರದಲ್ಲಿ ಆರೋಗ್ಯ ತಪಾಸಣೆ ಮಾತ್ರವಲ್ಲದೆ ಆರೋಗ್ಯಕ್ಕೆ ಸಂಬಂಧಸಿದ ಯಾವುದೇ ವಿಷಯಗಳ ಬಗ್ಗೆಯೂ ಸಮಾಲೋಚನೆಗೆ ವೈದ್ಯರು ಲಭ್ಯವಾಗಲಿದ್ದಾರೆ ಎಂದು ತಿಳಿಸಿದರು.
ಪೀಪಲ್ ಟ್ರೀ ಆಸ್ಪತ್ರೆಯ ವ್ಯವಸ್ಥಾಪಕ ಕೆ.ಗುರುದತ್ ಶಣೈ ಮಾತನಾಡಿ, ಆರ್ಥಿಕ ದುರ್ಬಲರಿಗೆ ಸುಮಾರು 1.5 ಲಕ್ಷ ರೂಗಳಿಂದ 3 ಲಕ್ಷ ರೂವರೆಗೆ ವೆಚ್ಚವಾಗುವ ಸಂಕೀರ್ಣ ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ನೀಡುವುದಿದ್ದು ಶಿಬಿರದಲ್ಲಿ ಈ ಯೋಜನೆಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದರು.
ಶಿಬಿರದಲ್ಲಿ ಸಕ್ಕರೆ ರೋಗಕ್ಕೆ ಉಚಿತ ರಕ್ತ ಪರೀಕ್ಷೆ ಲಭ್ಯವಿದ್ದು ಶಿಬಿರಕ್ಕೆ ಬರುವ ರೋಗಿಗಳು ತಾವು ಈ ಹಿಂದೆ ವೈದ್ಯರಿಗೆ ತೋರಿಸಿದ ಎಕ್ಸ್ ರೇ, ಲ್ಯಾಬ್ ರಿಪೋರ್ಟ್ಗಳನ್ನು ತಪ್ಪದೆ ತರುವಂತೆ ಮನವಿ ಮಾಡಿದ್ದಾರೆ. ಗೋಷ್ಟಿಯಲ್ಲಿ ಪೀಪಲ್ ಟ್ರೀ ಆಸ್ಪತ್ರೆಯ ಎಸ್.ಮಂಜುಳಾದೇವಿ, ಎನ್ಎಸ್ಎಸ್ ಅಧಿಕಾರಿ ಮೋಹನ್ ಕುಮಾರ್, ಯುವ ರೆಡ್ ಕ್ರಾಸ್ ಘಟಕದ ಆರ್.ಶಿವಯ್ಯ, ಡಾ.ವಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ