ಚಳ್ಳಕೆರೆ
ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿರುವ ಕಣುವೆ ಮಾರಮ್ಮ ದೇವಸ್ಥಾನದ ಬಳಿ ತನ್ನ ನಾಲ್ಕು ದಿನದ ಮಗುವಿನೊಂದಿಗೆ ಅನಾಥವಾಗಿ ಮಲಗಿದ್ದ ಬಾಣಂತಿಯ ಬಗ್ಗೆ ಸಾರ್ವಜನಿಕ ವಲಯದ ಚರ್ಚೆಯನ್ನು ಗ್ರಹಿಸಿದ ಆರೋಗ್ಯ ಇಲಾಖೆ ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡಿದೆ.
ದೇವಸ್ಥಾನದ ಆವರಣದಲ್ಲಿ ತನ್ನ ನಾಲ್ಕು ದಿನದ ಮಗುವಿನೊಂದಿಗೆ ಮಲಗಿದ್ದ ಬಾಣಂತಿಯ ಹೆಸರು ಶಾರದಮ್ಮ ಆಗಿದ್ದು, ಈಕೆ ತನ್ನನ್ನು ಪ್ರೀತಿಸಿದ ಗಂಡನಿಂದಲೇ ತಿರಸ್ಕರಿಲ್ಪಟ್ಟು ಅತ್ತೆ, ಮಾವನಿಂದಲೂ ಅವಮಾನಿತಳಾಗಿ ದಿಕ್ಕು ತೋಚದೆ ಇಲ್ಲಿನ ಆಸ್ಪತ್ರೆ ಆವರಣದಲ್ಲಿ ತನ್ನ ಮಗುವಿನೊಂದಿಗೆ ಮಲಗಿದ್ದಳು. ಇದನ್ನು ಕಂಡ ಸಾರ್ವಜನಿಕರು ಈ ಬಾಣಂತಿಗೆ ಆದ ಅನ್ಯಾಯ ಈಕೆಯನ್ನು ಬೀದಿಗೆ ತಂದ ಅಕೆಯ ಗಂಡನ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದರು.
ಸುದ್ದಿ ತಿಳಿದ ಕೂಡಲೇ ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಜಿ.ತಿಪ್ಪೇಸ್ವಾಮಿ, ತಾಲ್ಲೂಕು ಆರೋಗ್ಯಾಧಿಕಾರಿ ಎನ್.ಪ್ರೇಮಸುಧಾ ಸಿಬ್ಬಂದಿಯ ಸಹಾಯದಿಂದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಇಲ್ಲಿನ ಬಾಣಂತಿ ವಾರ್ಡ್‍ನಲ್ಲಿ ಮಗುವಿನೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದು, ಸಾಂತ್ವನ ಕೇಂದ್ರದ ಆರೈಕೆಯಲ್ಲಿದ್ಧಾಳೆ.
ಘಟನೆ ಹಿನ್ನೆಲೆ :-
ಶಾರದಮ್ಮ ತಾಲ್ಲೂಕಿನ ಎನ್.ದೇವರಳ್ಳಿ ಗ್ರಾಮದವಳಾಗಿದ್ದು, ತಾಯಿ ಸುನಂದಮ್ಮ, ತಂದೆ ಚನ್ನಪ್ಪನೊಂದಿಗೆ ವಾಸಿಸುತ್ತಿದ್ದು, ಜೀವನ ನಿರ್ವಹಣೆಗಾಗಿ ನಾಯಕನಹಟ್ಟಿಯ ಶ್ರೀಗುರುತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ತಂದೆಯೊಂದಿಗೆ ಇದ್ದು, ಪ್ರತಿನಿತ್ಯ ದೇವಸ್ಥಾನದ ದಾಸೋಹ ತಂದೆ ಮಗಳ ಬದುಕಿಗೆ ಆಸರೆಯಾಗಿತ್ತು.
ಈ ಸಂದರ್ಭದಲ್ಲಿ ಹಿರೇಹಳ್ಳಿ ಗ್ರಾಮದ ದುರುಗಪ್ಪ ಎಂಬುವವರ ಪುತ್ರ ಮಲ್ಲಿಕಾರ್ಜುನ ಪರಿಚಯವಾಗಿ ಪ್ರೀತಿಸುವ ನಾಟಕವಾಡಿ ಈಕೆಯನ್ನು ಬೆಂಗಳೂರಿಕೆ ಕರೆದ್ಯೊಯ್ದು ಅಲ್ಲಿನ ದೇವಸ್ಥಾನದವೊಂದರಲ್ಲಿ ಮದುವೆಯಾಗಿದ್ಧಾನೆ. ಮದುವೆಯಾದ ಒಂದೇ ವóರ್ಷದಲ್ಲಿ ಒಂದು ಹೆಣ್ಣು ಮಗುವಿಗೂ ಸಹ ಜನ್ಮ ನೀಡಿರುತ್ತಾಳೆ. ಕಳೆದ ಜೂನ್ 2018ರಿಂದ ಈತ ನಾಪತ್ತೆಯಾಗಿದ್ದು, ಆಗ ಶಾರದಮ್ಮ ಮೂರು ತಿಂಗಳ ಗರ್ಭಿಣಿಯಾಗಿದ್ದಳು. ವರ್ಷದ ಮಗುವಿನೊಂದಿಗೆ ನಾಯಕನಹಟ್ಟಿಯಲ್ಲೇ ಜೀವನ ನಿರ್ವಹಿಸುತ್ತಿದ್ದ ಶಾರದಮ್ಮ ಮಹಿಳಾ ಸಾಂತ್ವನ ಕೇಂದ್ರಕ್ಕೆ ದೂರು ನೀಡಿ ಗಂಡನ ನಾಪತ್ತೆ ಬಗ್ಗೆ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮೊರೆ ಹೋಗಿದ್ದಳು. ಜೂನ್ 2018ರಂದು ರಕ್ಷಣಾಧಿಕಾರಿಗಳು ತಳಕು ಪೊಲೀಸರಿಗೆ ನಾಪತ್ತೆಯಾದ ಮಲ್ಲಿಕಾರ್ಜುನನ್ನು ಹುಡುಕಿಕೊಡುವಂತೆ ಸೂಚನೆ ನೀಡಿದ್ದರು. ಆದರೆ, ಮಲ್ಲಿಕಾರ್ಜುನ ಪತ್ತೆಯಾಗಿರಲಿಲ್ಲ.
ಡಿ-5ರಂದು ನಾಯಕನಹಟ್ಟಿಯಲ್ಲಿದ್ದ ಈಕೆಗೆ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಅಲ್ಲಿನ ಆಸ್ಪತ್ರೆಯಿಂದ ನೇರವಾಗಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು, ಅಂದೇ ಗಂಡು ಮಗುವಿಗೆ ಜನ್ಮ ನೀಡಿರುತ್ತಾಳೆ. ಸ್ವಾಭಾವಿಕ ಹೆರಿಗೆ ಹಿನ್ನೆಲೆಯಲ್ಲಿ ಡಿ.8ರಂದು ಜಿಲ್ಲಾ ಆಸ್ಪತ್ರೆಯಿಂದ ಈಕೆಯನ್ನು ಬಿಡುಗಡೆಗೊಳಿಸಿದ್ದು, ನೇರವಾಗಿ ಹಿರೇಹಳ್ಳಿಯ ಗಂಡನ ಮನೆಗೆ ತೆರಳಿದ್ಧಾಳೆ. ಆದರೆ, ಅಲ್ಲಿ ಅತ್ತೆ, ಮಾವ ನಿನ್ನ ಗಂಡ ಬಂದರೆ ಮಾತ್ರ ನಿನಗೆ ಮನೆಯಲ್ಲಿ ಸ್ಥಾನವೆಂದು ಈಕೆಯನ್ನು ಹೊರ ಹಾಕಿದ್ದಾರೆ. ದಿಕ್ಕು ತೋಚದ ಈಕೆ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಆಗಮಿಸಿ ಯಾರನ್ನೂ ಸಂಪರ್ಕಿಸದೇ ಅಲ್ಲಿಂದ ದೇವಸ್ಥಾನದ ಕಟ್ಟೆಯ ಮೇಲೆ ಮಲಗಿರುತ್ತಾಳೆ. ಸುದ್ದಿ ತಿಳಿದ ಈಕೆಯ ತಂದೆ ಚನ್ನಪ್ಪ ಸಹ ಆಸ್ಪತ್ರೆಗೆ ದಾವಿಸಿದ್ದು, ಮಗಳ ಯೋಗ ಕ್ಷೇಮ ನೋಡಿಕೊಳ್ಳುತ್ತಿದ್ಧಾನೆ.
ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ, ಪೌರಾಯುಕ್ತ ಜೆ.ಟಿ.ಹನುಮಂತರಾಜು ಅಸ್ಪತ್ರೆಗೆ ಭೇಟಿ ನೀಡಿ ಯೋಗ ಕ್ಷೇಮ ವಿಚಾರಿಸಿದರು. ಆಡಳಿತಾಧಿಕಾರಿ ಡಾ.ಜಿ.ತಿಪ್ಪೇಸ್ವಾಮಿ ಬಾಣಂತಿ ಮತ್ತು ಮಗು ಆರೋಗ್ಯವಾಗಿದ್ದು ಇನ್ನೂ ನಾಲ್ಕೈದು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ