ಬೆಳ್ಳಿ ಕಿರೀಟ ಸಮರ್ಪಣೆ

ತುರುವೇಕೆರೆ:

          ಕಲಾ ಕೇತ್ರದಲ್ಲಿ ಕಳೆದ ನಲವತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅಮಾನಿಕೆರೆ ಮಂಜುನಾಥ್ ರವರಿಗೆ ಶ್ರೀ ಸತ್ಯಗಣಪತಿ ವಿಸರ್ಜನಾ ಮಹೋತ್ಸವದ ಅಂಗವಾಗಿ ಡಿ.24 ರಂದು ಸಂಜೆ ಪಟ್ಟಣದ ಬೆಸ್ಕಾಂ ಕಛೇರಿ ಆವರಣದಲ್ಲಿ ನಡೆಯುವ ಕುರುಕ್ಷೇತ್ರ ನಾಟಕ ಕಾರ್ಯಕ್ರಮದಲ್ಲಿ ಅಮಾನಿಕೆರೆ ಮಂಜುನಾಥ್ ಅಭಿಮಾನಿ ಬಳಗದ ವತಿಯಿಂದ “ಬೆಳ್ಳಿ ಕಿರೀಟ ಧಾರಣೆ” ಸಮರ್ಪಣೆ ಮಾಡಲಾಗುವುದು ಎಂದು ಅಭಿನಂದನಾ ಸಮಿತಿಯ ಅಧ್ಯಕ್ಷ ಹಾಗೂ ತಾಲೂಕು ಕಲಾವಿದರ ಒಕ್ಕೂಟದ ಅಧ್ಯಕ್ಷ ಟಿ.ಎಸ್.ಬೋರೇಗೌಡ ತಿಳಿಸಿದ್ದಾರೆ.

            ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಅಮಾನಿಕೆರೆ ಮಂಜುನಾಥ್‍ರವರು ತಾಲೂಕಿನಲ್ಲಿ ಮೂಲೆಗುಂಪಾಗಿದ್ದ ರಂಗಕಲೆಯನ್ನು ಜೀವಂತಗೊಳಿಸಲು ಶ್ರಮಿಸಿದ್ದಾರೆ. ಕಲಾಸೇವೆಗಾಗಿ ಹಲವಾರು ಸಂಘ ಸಂಸ್ಥೆಗಳು ರಂಗಕಲಾ ಚತುರ ಮತ್ತು ಗಂಗಕೌಸ್ತುಭ ಎಂಬ ಬಿರುದುಗಳನ್ನೂ ಸಹ ದಯಪಾಲಿಸಿದೆ. ಮಂಜುನಾಥ್ ರವರು ಕೇವಲ ಕಲೆಗೆ ಮಾತ್ರ ಪ್ರೋತ್ಸಾಹ ನೀಡಿರುವುದಲ್ಲದೇ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲೂ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಅಮಾನಿಕೆರೆ ಮಂಜುನಾಥ್ ಅಭಿಮಾನಿ ಸಂಘ ಹಾಗು ಇವರ ಧಾರ್ಮಿಕ ಸೇವೆಯನ್ನು ಗುರ್ತಿಸಿ ಹತ್ತಿಕುಳ್ಳೆಪಾಳ್ಯದ ಗ್ರಾಮಸ್ಥರು ಸೇರಿದಂತೆ ಹಲವು ಸಂಘ ಸಂಸ್ಥೆಗಳು ಮಂಜುನಾಥ್ ಅವರನ್ನು ಗೌರವಿಸಲಿವೆ ಎಂದು ಬೋರೇಗೌಡ ತಿಳಿಸಿದರು.

            ಡಿ.24 ರಂದು ರಾತ್ರಿ 8 ಗಂಟೆಗೆ ನಡೆಯುವ ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ಪೌರಾಣಿಕ ನಾಟಕದ ಸಂಧರ್ಭದಲ್ಲೇ ತಾಲೂಕಿನ ಕಲಾವಿದರ ಒಕ್ಕೂಟ ಮತ್ತು ಇತರೆ ಸಂಘ ಸಂಸ್ಥೆಗಳ ವತಿಯಿಂದ ಅಮಾನಿಕೆರೆ ಮಂಜುನಾಥ್ ರವರಿಗೆ ಬೆಳ್ಳಿ ಕಿರೀಟ ಧಾರಣೆ ನಡೆಸಲಾಗುವುದು. ಶಾಸಕ ಮಸಾಲಾ ಜಯರಾಮ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು ಹಲವಾರು ರಾಜಕೀಯ ಧುರೀಣರು ಹಾಗು ಅತ್ಯುತ್ತಮ ಕಲಾವಿದರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು ಹಲವಾರು ರಂಗಕಲಾವಿದರನ್ನು ಇದೇ ಸಂಧರ್ಭದಲ್ಲಿ ಸನ್ಮಾನಿಸಲಾಗುವುದು.

           ಕುರುಕೇತ್ರ ನಾಟಕದ ಶ್ರೀಕೃಷ್ಣ ಪಾತ್ರವನ್ನು ಮಂಡ್ಯದ ಉಪನ್ಯಾಸಕಿ ನಿರ್ಮಲಾರವರು ತಾಲ್ಲೂಕಿನಲ್ಲಿ ಇದೇ ಪ್ರಥಮ ಬಾರಿಗೆ ಅಭಿನಯಿಸಲಿದ್ದು ಕಲಾಪ್ರೇಮಿಗಳು ಹಾಗು ಕಲಾಶಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಳ್ಳಬೇಕೆಂದು ವಿನಂತಿಸಿದರು.

         ಪತ್ರಿಕಾಗೋಷ್ಠಿಯಲ್ಲಿ ಕಲಾವಿದರುಗಳಾದ ಅಮಾನಿಕೆರೆ ಮಂಜುನಾಥ್, ಹುಲಿಕಲ್ ನಾಗರಾಜು, ಪಿಎಲ್‍ಡಿ ಬ್ಯಾಂಕ್ ಮಾಜಿ ನಿರ್ದೇಶಕ ಕೆಂಪರಾಜು, ಜಯದೇವಪ್ಪ, ಬೆಸ್ಕಾಂ ಗುತ್ತಿಗೆದಾರ ಶಂಕರೇಗೌಡ, ಬ್ಯಾಂಕ್ ಮೂಡಲಗಿರಿಯಪ್ಪ ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link