ಬೆಳೆಸಾಲ ಮನ್ನಾ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದ ಹೆಚ್ ಡಿ ಕೆ

ಬೆಂಗಳೂರು

          ರಾಜ್ಯಾದ್ಯಂತ ಸುಮಾರು 44 ಲಕ್ಷ ರೈತರ 40 ಸಾವಿರ ಕೋಟಿ ರೂಪಾಯಿ ಬೆಳೆಸಾಲ ಮನ್ನಾ ಕಾರ್ಯಕ್ರಮಕ್ಕೆ ಇಂದು ಅಧಿಕೃತ ಚಾಲನೆ ನೀಡಲಾಯಿತು.

           ದೊಡ್ಡಬಳ್ಳಾಪುರದಲ್ಲಿ ಇಂದು ನಡೆದ ಸಮಾರಂಭವು ಈ ಕ್ಷಣಕ್ಕೆ ಸಾಕ್ಷಿಯಾಯಿತು. ಸರ್ಕಾರವು ಆಯವ್ಯಯದಲ್ಲಿ ಘೋಷಿಸಿದಂತೆ ರೈತರ ಸಾಲ ಮನ್ನಾ ಪ್ರಕ್ರಿಯೆಗೆ ಚಾಲನೆ ದೊರೆಯಿತು. ಮುಖ್ಯಮಂತ್ರಿಗಳು ರೈತರಿಗೆ ಋಣಮುಕ್ತ ಪ್ರಮಾಣ ಪತ್ರ ವಿತರಿಸಿದರೆ, ಅಲ್ಲಿ ನೆರೆದಿದ್ದ ಸಾವಿರಾರು ರೈತರು ಹರ್ಷೋದ್ಘಾರದಿಂದ ಸ್ವಾಗತಿಸಿದರು.

          ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಕೃಷಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ, ಸಂಸದ ಎಂ. ವೀರಪ್ಪ ಮೊಯ್ಲಿ ಮೊದಲಾದವರು ಭಾಗವಹಿಸಿದ್ದರು.

          ಕಳೆದ 3-4 ವರ್ಷಗಲಿಂದ ಬರದ ದವಡೆಗೆ ಸಿಲುಕಿದ್ದ ರೈತರ ಸಾಲ ಮನ್ನಾ ಮಾಡಲು ಒತ್ತಾಯ ಬಂದ ಹಿನ್ನೆಲೆಯಲ್ಲಿ ಹಾಗೂ ರೈತರ ಸಂಕಷ್ಟಗಳನ್ನು ಅರಿತ ಮೈತ್ರಿ ಸರ್ಕಾರ ಸಾಲ ಮನ್ನಾದಂಥ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತರುವ ಮೂಲಕ ಅಪನಂಬಿಕೆ ಹುಟ್ಟಿಸಿದವರಿಗೆ ದಿಟ್ಟ ಉತ್ತರ ನೀಡಿದೆ ಎಂದು ಮುಖ್ಯಮಂತ್ರಿ ಹೆಚ್ .ಡಿ.ಕುಮಾರಸ್ವಾಮಿ ತಿಳಿಸಿದರು. ಈ ಕುರಿತು ಯಾವ ಸಂಶಯಗಳಿಗೂ ರೈತರು ಕಿವಿಗೊಡಬಾರದು ಎಂದ ಅವರು, ರಾಜ್ಯ ಸರ್ಕಾರ ಸಾಲ ಮನ್ನಾ ಪ್ರಕ್ರಿಯೆಯನ್ನು ನೋಡಿಕೊಳ್ಳಲೆಂದೇ ಪ್ರತ್ಯೇಕ ಸೆಲ್ ಸ್ಥಾಪಿಸಿ, ಒಬ್ಬ ಐ. ಎ.ಎಸ್ ಅಧಿಕಾರ ಯನ್ನು ನೇಮಕ ಮಾಡಿದೆ. ರಾಷ್ಟೀಕೃತ ಬ್ಯಾಂಕ್ ಗಳ ಜೊತೆ 10 ಹತ್ತು ಸಭೆಗಳನ್ನು ನಡೆಸಿದ್ದರೂ, ಅವರ ಕಡೆಯಿಂದ ಸಹಕಾರ ದೊರೆತಿಲ್ಲ. ಕೇಂದ್ರ ಸರ್ಕಾರಕ್ಕೆ ಈ ಕುರಿತು ಮಾಡಿರುವ ಮನವಿಯನ್ನು ಪರಿಗಣಿಸಲಾಗಿಲ್ಲ ಎಂದರು.

          ರೈತರಿಗೆ ಉತ್ತಮ ಮತ್ತು ನೆಮ್ಮದಿಯ ಬದುಕು ನಡೆಸಲು ರಾಜ್ಯ ಸರ್ಕಾರ ಎಲ್ಲ ಸಹಕಾರ ನೀಡಲಿದೆ ಎಂದ ಮುಖ್ಯ ಮಂತ್ರಿಗಳು, ರಾಷ್ಟ್ರೀಕೃತ ಮತ್ತು ವಾಣಿಜ್ಯ ಬ್ಯಾಂಕುಗಳ ರೈತರ ಸಾಲ ಮನ್ನಾ ಮಾಡಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದರೆ. ರಾಷ್ಟ್ರದಲ್ಲಿಯೇ ಇದೊಂದು ಐತಿಹಾಸಿಕ ನಿರ್ಧಾರ ಎಂದರು.

            ಕಾರ್ಯಕ್ರಮದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಇದೊಂದು ಐತಿಹಾಸಿಕ ಕಾರ್ಯಕ್ರಮ. ಮೈತ್ರಿ ಸರ್ಕಾರ ರೈತಪರ ಸರ್ಕಾರ ಎನ್ನುವುದುಕ್ಕೆ ಸಾಲಮನ್ನಾ ಯೋಜನೆಯೇ ಉದಾಹರಣೆ. ಇನ್ನಾದರೂ ವಿರೋಧಪಕ್ಷದವರು ಕುಹಕವಾಡುವುದನ್ನು ನಿಲ್ಲಿಸಲಿ ಎಂದು ನುಡಿದರು.

          ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಮಾತನಾಡಿ, ಆಯವ್ಯಯದಲ್ಲಿ ಘೋಷಿಸಿದಂತೆ ಸಾಲಮನ್ನಾ ಯೋಜನೆಗೆ ಚಾಲನೆ ನೀಡುವ ಮೂಲಕ ಸರ್ಕಾರ ತನ್ನ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದೆ. ಇದನ್ನು ಅರಿತು ರೈತರು ತಾಳ್ಮೆಯಿಂದ ಸಹಕರಿಸಬೇಕು ಎಂದು ತಿಳಿಸಿದರು.

          ಸಂಸದ ವೀರಪ್ಪ ಮೊಯಿಲಿ ಅವರು ಮಾತನಾಡಿ, ಸಾಲಮನ್ನಾ ಇಡೀ ದೇಶದಲ್ಲಿಯೇ ಒಂದು ಮಾದರಿ ಕಾರ್ಯಕ್ರಮವಾಗಿದೆ. ಸರ್ಕಾರ ತನ್ನ ಭರವಸೆಯನ್ನು ಈಡೇರಿಸಿ ರೈತರನ್ನು ಋಣಮುಕ್ತಗೊಳಿಸಿ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ರೈತರ ವಿಚಾರದಲ್ಲಿ ವಿರೋಧ ಪಕ್ಷಗಳು ರಾಜಕೀಯ ಮಾಡುವುದು ಸಲ್ಲದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

          ಕೃಷಿ ಸಚಿವ ಎನ್. ಎಚ್. ಶಿವಶಂಕರರೆಡ್ಡಿ ಅವರು ಮಾತನಾಡಿ, ಸರ್ಕಾರ ರೈತರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸುತ್ತಿರುವುದಲ್ಲದೆ ಹಲವಾರು ಸಕಾರಾತ್ಮಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಮೊದಲ ಬಾರಿಗೆ ರೈತಪರ ಕಾರ್ಯಕ್ರಮ ರೂಪಿಸಲು ರೈತರ ಸಲಹೆಗಳನ್ನು ಪಡೆಯಲು ರೈತ ಸಲಹಾ ಸಮಿತಿ ರಚಿಸಲಾಗಿದೆ. ಅದರಂತೆಯೇ ರೈತರಿಗೆ ಪೂರಕವಾದ ಕಾರ್ಯಕ್ರಮ ರೂಪಿಸುತ್ತೇವೆ ಎಂದು ನುಡಿದರು.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap