ಹಾವೇರಿ
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಸಾಲ ಮನ್ನಾ ಯೋಜನೆಯಡಿ ಸ್ವಯಂ ಘೋಷಣೆ ಪತ್ರ ನೀಡಲು ರೈತರು ಯಾವುದೇ ಆತಂಕ, ಗಡಿಬಿಡಿ ಮಾಡದೆ ಬ್ಯಾಂಕುಗಳಿಗೆ ಸಹಕರಿಸಿ ಸಾವಧಾನದಿಂದ ಮಾಹಿತಿ ನೀಡಲು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಮಾನವಿ ಮಾಡಿಕೊಂಡಿದ್ದಾರೆ.
ಸೋಮವಾರ ಅಗಡಿ ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ರೈತರ ನೋಂದಣಿ ಪರಿಶೀಲಿಸಿ ಮಾತನಾಡಿದ ಅವರು, ರೈತರು ಸ್ವಯಂ ಘೋಷಣೆ ಪ್ರಮಾಣ ಪತ್ರ ಸಲ್ಲಿಕೆ ಕುರಿತಂತೆ ತಂತ್ರಾಂಶದಲ್ಲಿ ನೋಂದಣಿ ಪ್ರಕ್ರಿಯೆನ್ನು ವಿವರವಾಗಿ ಪರಿಶೀಲಿಸಿದರು.
ರೈತರ ಬೆಳೆ ಸಾಲ ಮನ್ನಾ ಯೋಜನೆಯಡಿ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಎರಡು ಲಕ್ಷ ರೂ.ಗಳ ಬೆಳೆ ಸಾಲ ಪಡೆದ ಜಿಲ್ಲೆಯ 1.10 ಲಕ್ಷ ರೈತರು ಈ ಯೋಜನೆಗೆ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಈಗಾಗಲೇ ಫಾರಂ 95ನ್ನು ಭರ್ತಿಮಾಡಿ ಬ್ಯಾಂಕುಗಳಿಗೆ ಸಲ್ಲಿಸಲಾಗಿದೆ. ರೈತರು ಸ್ವಯಂ ಘೋಷಣೆ ಸಲ್ಲಿಸಬೇಕಾಗಿದೆ ಎಂದು ಡಾ.ವೆಂಕಟೇಶ್ ಅವರು ಹೇಳಿದರು.
ಸಾಲ ಮನ್ನಾ ಯೋಜನೆಯ ಲಾಭಪಡೆಯಲು ಸರ್ಕಾರ ನಿಗಧಿಪಡಿಸಿರುವ ಮಾನದಂಡಂತೆ ಸಾಲ ಮನ್ನಾ ವ್ಯಾಪ್ತಿಗೆ ಒಳಪಡಲು ರೈತರು ನಾನು ಆದಾಯ ತೆರಿಗೆ ಪಾವತಿಸುವುದಿಲ್ಲ, ನಾನು ಸರ್ಕಾರಿ ನೌಕರನಲ್ಲ, ಪ್ರತಿ ಮಾಹೆ ರೂ.15ಸಾವಿರಕ್ಕಿಂತ ಹೆಚ್ಚಿನ ಪಿಂಚಣಿ ಪಡೆಯುತ್ತಿಲ್ಲ, ಸಹಕಾರಿ ಬ್ಯಾಂಕ್ ಸಾಲ ಮನ್ನಾ ಯೋಜನೆ ಪಡೆದುಕೊಂಡಿಲ್ಲ ಎಂದು ಸ್ವಯಂ ಘೋಷಣೆಯ ಪ್ರಮಾಣಪತ್ರವನ್ನು ಸಹಿಯೊಂದಿಗೆ ಬ್ಯಾಂಕಿಗೆ ಸಲ್ಲಿಸಬೇಕಾಗಿದೆ ಹಾಗೂ ಆಧಾರ್ ಕಾರ್ಡ್,ರೇಷನ್ ಕಾರ್ಡ್, ಜಮೀನಿನ ಸರ್ವೇ ನಂಬರ್ ಹಾಗೂ ಉತಾರದೊಂದಿಗೆ ರೈತರ ಮೊಬೈಲ್ ನಂಬರನೊಂದಿಗೆ ಬ್ಯಾಂಕಿನಲ್ಲಿ ನೋಂದಣಿ ಮಾಡಿಸಬೇಕು. ಕಂಪ್ಯೂಟರ್ ನೋಂದಣಿ ನಂತರ ಮ್ಯಾನೇಜರ್ ಲಾಗಿನ್‍ಗೆ ಹೋಗುತ್ತದೆ ಅಲ್ಲಿಂದ ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ಈ ಕುರಿತಂತೆ ಪ್ರತಿ ರೈತರ ಮೊಬೈಲ್ ನಂಬರ್‍ಗೆ ನೊಂದಾವಣೆ ಕುರಿತಂತೆ ಮಾಹಿತಿ ರವಾನೆಯಾಗುತ್ತದೆ ಎಂದು ತಿಳಿಸಿದರು.
ಪ್ರತಿ ದಿನ ಬ್ಯಾಂಕಿನಲ್ಲಿ 1 ರಿಂದ 40 ಸಂಖ್ಯೆಯ ರೈತರ ನೋಂದಣಿ ಅವಕಾಶ ಮಾಡಿಕೊಡಲಾಗಿದೆ. ಸರದಿಯಲ್ಲಿ ನಿಲ್ಲುವ ರೈತರಿಗೆ ಟೋಕನ್‍ಗಳನ್ನು ಸಹ ವಿತರಿಸಲಾಗುತ್ತದೆ. ಯಾರೂ ಆತಂಕ, ಗಡಿಬಿಡಿಗೊಳ್ಳುವ ಅಗತ್ಯವಿಲ್ಲ. ಎಲ್ಲ ರೈತರನ್ನು ನೋಂದಣಿ ಮಾಡಲಾಡಗುತ್ತದೆ. ಟೋಕನ್ ಪಡೆದ ನೋಂದಣಿ ಆಗದಿದ್ದರೆ ಮರುದಿನ ನೋಂದಣಿಮಾಡಿಕೊಳ್ಳಬಹುದು. ಸಾಕಷ್ಟು ಕಾಲಾವಕಾಶ ನೀಡಲಾಗಿದೆ. ಸಮಾಧಾನದಿಂದ ಬ್ಯಾಂಕುಗಳೊಂದಿಗೆ ಸಹಕರಿಸಿ ನೊಂದಾಯಿಸಿಕೊಳ್ಳಲು ಮನವಿ ಮಾಡಿಕೊಂಡರು.
ಅಗಡಿ ಬ್ಯಾಂಕಿನ ವ್ಯವಸ್ಥಾಪಕ ಪ್ರಶಾಂತ ಅವರು ವಿವರ ನೀಡಿ, ಅಗಡಿ ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ವ್ಯಾಪ್ತಿಗೆ 1135 ರೈತರು ಬೆಳೆ ಸಾಲ ಮಾಡಿದ್ದಾರೆ. ರೂ.12 ಕೋಟಿ ಬೆಳೆಸಾಲವನ್ನು ವಿತರಿಸಲಾಗಿದೆ. ಈ ದಿನ 600 ಜನ ಸರದಿಯಲ್ಲಿ ನಿಂತಿದ್ದು, 40 ಜನರ ನೋಂದಣಿಯಾಗಿದೆ. 600 ಜನರಿಗೆ ಟೋಕನ್ ವಿತರಿಸಲಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕದರಪ್ಪ, ನಬಾರ್ಡ್ ಬ್ಯಾಂಕಿನ ಡಿಡಿಎಂ ಹಾಗೂ ಉಸ್ತುವಾರಿ ಅಧಿಕಾರಿ ಮಹದೇವ ಕೀರ್ತಿ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ