ತಿಪಟೂರು
ವಾರಾಂತ್ಯದ ಲಾಕ್‍ಡೌನ್‍ಗೆ ನಗರದಲ್ಲಿ ಉತ್ತಮ ಸ್ಪಂದನೆ ದೊರೆತಿದ್ದು, ಅಂಗಡಿ ಮುಂಗಟ್ಟುಗಳು ಮುಚ್ಚಿದ್ದರಿಂದ ಮತ್ತು ಕೊರೊನಾ ಬಗ್ಗೆ ಸ್ವಲ್ಪ ಜಾಗೃತಗೊಂಡಿರುವ ಜನರು ಇಂದು ಮನೆಯಿಂದ ಅನಾವಶ್ಯಕವಾಗಿ ಹೊರಬರದೆ ಲಾಕ್‍ಡೌನ್‍ಅನ್ನು ಯಶಸ್ವಿಗೊಳಿಸಿದ್ದಾರೆ.
ನಗರದಲ್ಲಿ ಶನಿವಾರ ರಾತ್ರಿ 8 ರಿಂದಲೇ ಲಾಕ್‍ಡೌನ್ ಪ್ರಕ್ರಿಯೆ ಆರಂಭವಾಗಿದ್ದು, ಭಾನುವಾರ ಬೆಳಗ್ಗೆ ಅತ್ಯವಶ್ಯಕ ವಸ್ತುಗಳಾದ ಹಾಲು, ಔಷಧಿ, ತರಕಾರಿ, ಮಾಂಸದ ಅಂಗಡಿ ಮತ್ತು ತರಕಾರಿ ಮಾರುಕಟ್ಟೆಯನ್ನು ಹೊರತು ಪಡಿಸಿದರೆ ಬೇರೆ ಯಾವ ಅಂಗಡಿಯೂ ಬಾಗಿಲು ತೆರೆಯಲಿಲ್ಲ.
ಸಾರಿಗೆ ಬಸ್, ಆಟೊರಿಕ್ಷಾಗಳು ರಸ್ತೆಗಿಳಿಯಲಿಲ್ಲ, ರಸ್ತೆಗಳು ಬಿಕೋ ಎನ್ನುತ್ತಿದ್ದವು. ಈ ಮಧ್ಯೆ ಜನ ಹಾಗೂ ವಾಹನ ಸಂಚಾರ ವಿರಳವಾಗಿದ್ದವು. ಕೋವಿಡ್-19 ಹರಡದಂತೆ ನೋಡಿಕೊಳ್ಳಲು ಜಾರಿ ಗೊಳಿಸಿರುವ ಲಾಕ್‍ಡೌನ್‍ಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿರುವುದರಿಂದ ವಾರಾಂತ್ಯದ ಚಟುವಟಿಕೆಗಳು ಮಂಕಾಗಿತ್ತು.
ಸಾರ್ವಜನಿಕರು ಹೇಳುವಂತೆ ಲಾಕ್‍ಡೌನ್ ಮಾಡುವುದಾದರೆ ಹಾಲನ್ನು ಬಿಟ್ಟು ಎಲ್ಲವನ್ನು ಲಾಕ್ ಮಾಡಲಿ. ದಿನಿತ್ಯದ ಅವಶ್ಯಕ ವಸ್ತುಗಳೆಂದು ತರಕಾರಿ, ದಿನಸಿ, ಮೊಟ್ಟೆ, ಮಾಂಸವನ್ನು ಒಂದು ದಿನ ಬಿಟ್ಟರೆ ಏನೂ ಆಗುವುದಿಲ್ಲ. ಅಷ್ಟೊಂದು ಅವಶ್ಯಕತೆ ಇದ್ದವರು ಒಂದು ದಿನ ಮುಂಚಿತವಾಗಿ ಖರೀದಿಸುತ್ತಾರೆ ಎಂದು ಮಾತನಾಡಿಕೊಳ್ಳುತ್ತಿದ್ದರು.
ಮುದ್ರಕರ ಸಂಘ, ಕಬ್ಬಿಣ ಮತ್ತು ಹಾರ್ಡ್‍ವೇರ್ ಅಂಗಡಿಗಳು ಅರ್ಧ ದಿನ ಬಂದ್ ತಿಪಟೂರು ತಾಲ್ಲೂಕಿನ ಮುದ್ರಕರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಮತ್ತು ನಿರ್ದೇಶಕರುಗಳು ಸೇರಿ ಎಲ್ಲಾ ಮುದ್ರಣದವರು ಜುಲೈ 6 ರಿಂದ ಜುಲೈ 21ರ ವರೆಗೆ ಭಾನುವಾರ ಹೊರತು ಪಡಿಸಿ ದಿ£ ನಿತ್ಯ ಬೆಳಗ್ಗೆ 8 ರಿಂದ ಮದ್ಯಾಹ್ನ 2 ಗಂಟೆಯವರೆಗೆ ಮಾತ್ರ ಕಾರ್ಯ ನಿರ್ವಹಿಸುತ್ತವೆಂದು ತಿಳಿಸಿದ್ದಾರೆ. ಇದರ ಜೊತೆಗೆ ಕಬ್ಬಿಣ ಮತ್ತು ಹಾರ್ಡ್‍ವೇರ್ ವರ್ತಕರು ಸಹ ಬೆಳಗ್ಗೆಯಿಂದ ಮಧ್ಯಾಹ್ನ 3 ಗಂಟೆವರೆಗೂ ಕಾರ್ಯನಿರ್ವಹಿಸುವುದಾಗಿ ತಿಳಿಸಿದ್ದಾರೆ.
ಜುಲೈ 14 ರವರೆಗೆ ಕ್ಷೌರದ ಅಂಗಡಿಗಳು ಬಂದ್
ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜು. 5ರಿಂದ ಜು. 14ರ ವರೆಗೆ ತಿಪಟೂರು ತಾಲ್ಲೂಕಿನಲ್ಲಿ ಕ್ಷೌರದ ಅಂಗಡಿಗಳನ್ನು ಬಂದ್ ಮಾಡಲು ತೀರ್ಮಾನಿಸಲಾಯಿತು ಎಂದು ಸಂಘದ ಅಧ್ಯಕ್ಷ ಎ.ಲೋಕೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲ್ಲೂಕು ಸವಿತಾ ಸಮಾಜ ಸಂಘದಿಂದ ತುರ್ತು ಸಭೆ ನಡೆಸಿ ಈ ಕ್ರಮ ಕೈಗೊಳ್ಳಲಾಗಿದೆ. ಅಂತರ ಕಾಪಾಡಿಕೊಂಡು ಕ್ಷೌರ ಮಾಡುವುದು ಅಸಾಧ್ಯವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಬಂದ್ ಮಾಡುವುದು ಸೂಕ್ತ ಎಂದು ಸಂಘ ಪದಾಧಿಕಾರಿಗಳು ತೀರ್ಮಾನಿಸಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ