ಶಿರಾ:
ಶಿರಾ ಭಾಗದ ರೈತರ ಸಮಸ್ಯೆಗಳು ನೂರೆಂಟಿದ್ದು ಕನಿಷ್ಟ ಪಕ್ಷ ಈ ಭಾಗದ ರೈತರು ಬೆಳೆದ ಶೇಂಗಾ ಬೆಳೆಗೂ ಬೆಂಬಲ ಬೆಲೆ ಲಭ್ಯವಾಗದಂತಾಗಿದೆ. ಈ ಬಗ್ಗೆ ಸರ್ಕಾರಗಳಿಗೆ ಮನವಿ ಮಾಡಿದರೂ ಪ್ರಯೋಜನವಿಲ್ಲದಂತಾಗಿದೆ. ರೈತರ ಸಮಸ್ಯೆಗಳಿಗೆ ಸರ್ಕಾರಗಳು ಸ್ಪಂಧಿಸದಿದ್ದ ಮೇಲೆ ನಾವು ಸುಮ್ಮನೇ ಕೂರಲಾಗದು. ಈ ನಿಟ್ಟಿನಲ್ಲಿ ಉಪ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ ಎಂದು ರಾಜ್ಯ ಶೇಂಗಾನಾಡು ಹಿತರಕ್ಷಣಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ತಿಮ್ಮರಾಜಗೌಡ ತಿಳಿಸಿದರು.
ನಗರದ ಶ್ರೀ ಗವಿ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾನು ಮೂಲತಃ ಜೆ.ಡಿ.ಎಸ್. ಪಕ್ಷದಲ್ಲಿದ್ದೆನು. ಈ ಕಾರಣಕ್ಕಾಗಿಯೇ ಶಿರಾಕ್ಕೆ ಕಾರ್ಯಕರ್ತರ ಸಭೆಗೆ ಬಂದಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರಲ್ಲಿ ವಿರೋಧ ಪಕ್ಷದ ತಾವುಗಳು ಈ ಭಾಗದ ಶೇಂಗಾ ಬೆಳೆಯು ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ಒತ್ತಡ ತರುವಂತೆ ಮನವಿ ಮಾಡಿದ್ದೆನು ಯಾವುದೇ ಪ್ರಯೋಜನವಾಗಲಿಲ್ಲ. ಈ ಸರ್ಕಾರಗಳೂ ನಮ್ಮ ಮನವಿಗೆ ಸ್ಪಂಧಿಸುತ್ತಿಲ್ಲ ಎಂದರು.
ಶಿರಾ ಭಾಗವು ಶೇಂಗಾ ಬೆಳೆಗೆ ಹೆಸರಾಗಿದ್ದು ಇಲ್ಲಿನ ಜನರಿಗೆ ಶೇಂಗಾ ಬೆಳೆ ಬಡವರ ಬಾದಾಮಿಯಾಗಿದೆ. ಶೇಂಗಾ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂಧಿಸುವಲ್ಲಿ ಈ ಭಾಗದ ಎಲ್ಲಾ ರಾಜಕೀಯ ಪಕ್ಷಗಳೂ ನಿರ್ಲಕ್ಷ್ಯ ತೋರಿವೆ. ಹೋರಾಟಗಳನ್ನು ಮಾಡಿ ನಮಗೂ ಸಾಕಾಗಿ ಹೋಗಿದೆ. ನಾವು ನೀಡಿದ ಮನವಿಗಳು ಕಸದ ಬುಟ್ಟಿ ಸೇರಿವೆ. ಇನ್ನು ಮುಂದೆ ನಮ್ಮ ಸಮಸ್ಯೆಗಳನ್ನು ನಾವೇ ನೀಗಿಸಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆಯಾದ್ದರಿಂದ ಉಪ ಚುನಾವಣೆಯಲ್ಲಿ ನಾನೂ ಕೂಡಾ ಸ್ವತಂತ್ರ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಲಿದ್ದೇನೆ ಎಂದರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಪರಮಶಿವಯ್ಯ ಮಾತನಾಡಿ ಪ್ರಸ್ತುತ ಹಾಲಿ ಬಿ.ಜೆ.ಪಿ. ಸರ್ಕಾರ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು ರೈತ ಸಂಘ ಸದರಿ ಚುನಾವಣೆಯಲ್ಲಿ ಈ ಪಕ್ಷದ ಪರ ನಿಲ್ಲುವುದಿಲ್ಲ. ರೈತರ ಸಂಕಷ್ಟಗಳಿಗೆ ಸ್ಪಂಧಿಸುವಂತಹ ಅಭ್ಯರ್ಥಿಯನ್ನು ರೈತ ಸಂಘ ಬೆಂಬಲಿಸಲಿದೆ ಎಂದರು.ರೈತ ಮುಖಂಡರಾದ ಗೋವಿಂದಪ್ಪ, ಬಿಳಿ ಕೆಂಚಪ್ಪ, ಚಿತ್ತಯ್ಯ, ಪ್ರಜ್ವಲ್, ಎಂ.ಆರ್.ನಂದನ್, ಅಯ್ಯಣ್ಣ, ಶಿವಲಿಂಗಯ್ಯ, ಕಿಟ್ಟಣ್ಣ, ರಮೇಶ್ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
