ಬಳ್ಳಾರಿ
ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ನಂದಿ ಪ್ರೌಢಶಾಲೆ ಸಹಯೋಗದಲ್ಲಿ ನಗರದ ನಂದಿ ಪ್ರೌಢಶಾಲೆಯ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಕಲಬುರಗಿ ವಿಭಾಗೀಯ ಮಟ್ಟದ ಖೋಖೋ ಪಂದ್ಯಾವಳಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಅವರು ಚಾಲನೆ ನೀಡಿದರು.
14 ಮತ್ತು 16 ವರ್ಷ ವಯೋಮಾನದ ಕೊಪ್ಪಳ, ಯಾದಗಿರಿ ಜಿಲ್ಲೆಗಳ ತಂಡಗಳಿಗೆ ವಾರ್ತಾಧಿಕಾರಿ ಅವರು ಹಸ್ತಲಾಘವ ನೀಡುವ ಮುಖೇನ ಶುಭಹಾರೈಸಿ ಕ್ರೀಡಾರ್ಥಿಗಳನ್ನು ಹುರಿ ದುಂಬಿಸಿದರು. ರಾಯಚೂರು, ಕೊಪ್ಪಳ, ಕಲಬುರಗಿ, ಬಳ್ಳಾರಿ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳ 24 ತಂಡಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದವು.
ವಿಭಾಗೀಯ ಮಟ್ಟದ ಖೋಖೋ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ತಂಡಗಳು, ದಾವಣಗೆರೆಯಲ್ಲಿ ನಡೆಯುವ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿ, ಗೆಲುವು ಸಾಧಿಸುವ ಮೂಲಕ ಈ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸ ಬೇಕು. ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಸೇರಿ ಬೆಳವಣಿಗೆಗೆ ಖೋಖೋ ಪಂದ್ಯಾವಳಿ ಸಹಕಾರಿ ಯಾಗಲಿವೆ ಎಂದು ಅವರು ಸಂದರ್ಭದಲ್ಲಿ ಹೇಳಿದರು.
ನಂದಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಇಕ್ಬಾಲ್ ಅಹಮ್ಮದ್ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದರು.
ಜಿಲ್ಲಾ ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ರಾಮಾಂಜನೇಯ ಅವರು ಮಾತನಾಡಿ, ಖೋ-ಖೋ ಮತ್ತು ಕಬ್ಬಡ್ಡಿ ಕ್ರೀಡೆಗಳು ಅತ್ಯಂತ ಸಂತೋಷದಿಂದ ಆಡುವ ಮತ್ತು ಶಕ್ತಿವೃದ್ಧಿಸುವ ಆಟಗಳು ಎಂದರು.
ವಿವಿಧ ಕ್ರೀಡೆಗಳಲ್ಲಿನ ಎಲ್ಲ ಕೌಶಲ್ಯಗಳು ಖೋ-ಖೋ ಕ್ರೀಡೆಯಲ್ಲಿವೆ. ಕ್ರೀಡೆಯಲ್ಲಿ ಸರ್ವಾಂಗೀಣ ಬೆಳವಣಿಗೆಗೆ ಖೋ-ಖೋ ಸಹಕಾರಿಯಾಗಿದೆ ಎಂದು ಹೇಳಿದ ಅವರು ಒಳ್ಳೆಯ ಅಥ್ಲೀಟ್ ಆಗಿ ರೂಪುಗೊಳ್ಳಬೇಕಾದರೇ ಖೋ-ಖೋ ಆಟವಾಡಬೇಕು ಎಂದು ಹೇಳಿದರು.
ಇನ್ನೋರ್ವ ಜಿಲ್ಲಾ ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಯು.ಜಂಬಣ್ಣ ಅವರು ಮಾತನಾಡಿ, ಈ ನಮ್ಮ ಕಲಬುರಗಿ ವಿಭಾಗಮಟ್ಟದಿಂದ ಒಳ್ಳೆಯ ತಂಡ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಅಲ್ಲಿಯೂ ವಿಜಯದ ಪತಾಕೆ ಹಾರಿಸಬೇಕು ಎಂದರು. ಈ ಸಂದರ್ಭದಲ್ಲಿ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೆಹಮತ್ ಉಲ್ಲಾ, ಮುಖಂಡರಾದ ರುದ್ರಮುನಿ ರಾಜಗುರು , ವಿ.ಎಸ್.ಜಯಾನಂದ, ಕೆ.ಜಿ.ಕುಮಾರ ಗೌಡ, ಗನ್ ಸಾಲೆವೆನ್ಸ್, ಜಕ್ರಿಯಾ ಇದ್ದರು. ದೈಹಿಕ ಶಿಕ್ಷಕ ಕೆ.ಎಂ.ಸಿದ್ದಲಿಂಗಯ್ಯ ಅವರು ನಿರೂಪಿಸಿದರು. ವೀರಣ್ಣಗೌಡ ಅವರು ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
