ಚಿತ್ರದುರ್ಗ:
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಸಾಕಷ್ಟು ಸವಲತ್ತುಗಳಿವೆ ಅವುಗಳನ್ನು ಬಳಸಿಕೊಂಡು ಸ್ವಾವಲಂಭಿಯಾಗಿ ಬದುಕುವುದನ್ನು ಕಲಿಯಬೇಕು ಎಂದು ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷರು ಹಾಗೂ ಉದ್ಯಮಿ ಆರ್.ಸತ್ಯಣ್ಣ ವಿದ್ಯಾರ್ಥಿಗಳಿಗೆ ಹೇಳಿದರು.
ನೆಹರು ಯುವ ಕೇಂದ್ರ, ಮದಕರಿನಾಯಕ ಸಾಂಸ್ಕøತಿಕ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಹೊಳಲ್ಕೆರೆ ರಸ್ತೆಯಲ್ಲಿರುವ ಸಿಲಿಕಾನ್ ಕಂಪ್ಯೂಟರ್ಸ್ನಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ನೆರೆಹೊರೆ ಯುವ ಸಂಸತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಂಬಾರು ಪದಾರ್ಥ ಸೇರಿದಂತೆ ಊದುಬತ್ತಿ, ಕ್ಯಾಂಡಲ್, ಕರ್ಪೂರ್, ಫಿನಾಯಿಲ್ ಇವುಗಳನ್ನು ಮನೆಯಲ್ಲಿಯೇ ಕುಳಿತು ತಯಾರು ಮಾಡಿ ಹಣ ಗಳಿಸಬಹುದು. ರುಡ್ಸೆಟ್ನಲ್ಲಿ ನೂರಾರು ಬಗೆಯ ತರಬೇತಿಗಳನ್ನು ನೀಡಲಾಗುವುದು. ವಿದ್ಯಾರ್ಥಿಗಳು ಸ್ವ-ಉದ್ಯೋಗ ಕೈಗೊಳ್ಳುವ ಮೊದಲು ತರಬೇತಿ ಮುಖ್ಯ. ಕೇಂದ್ರ ಸರ್ಕಾರ ಮುದ್ರಾ ಬ್ಯಾಂಕ್ನಲ್ಲಿ ಹತ್ತು ಸಾವಿರದಿಂದ ಐವತ್ತು ಲಕ್ಷ ರೂ.ಗಳವರೆಗೆ ಸಾಲ ನೀಡುತ್ತದೆ. ಪದವಿ ಪಡೆದು ಸರ್ಕಾರಿ ನೌಕರಿಯನ್ನು ಕಾಯುತ್ತ ಕೂರುವ ಬದಲು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ನೆಮ್ಮದಿಯ ಜೀವನ ಕಂಡುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಡಿಮೆ ಬಂಡವಾಳ ಹೂಡಿ ಹಚ್ಚು ಲಾಭ ಪಡೆಯುವಂತ ಉದ್ದಿಮೆಯನ್ನು ಕಂಡುಕೊಳ್ಳಬೇಕು. ನೀವು ಹೂಡುವ ಬಂಡವಾಳ ಖರ್ಚು ಮತ್ತು ಲಾಭದ ಲೆಕ್ಕವನ್ನು ಸರಿಯಾಗಿ ನಿರ್ವಹಣೆ ಮಾಡಿದಾಗ ಮಾತ್ರ ಸ್ವ -ಉದ್ಯೋಗದಲ್ಲಿ ಯಶಸ್ಸು ಕಾಣಬಹುದು ಎಂದರು.
ಮದಕರಿನಾಯಕ ಸಾಂಸ್ಕತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ ಮಾತನಾಡುತ್ತ ಕೈಗಾರಿಕಾ ಇಲಾಖೆಯಲ್ಲಿ ಅನೇಕ ಬಗೆಯ ಸಾಲಗಳನ್ನು ನೀಡಲಾಗುವುದು. ಪ್ರವಾಸೋದ್ಯಮ ಇಲಾಖೆಯಲ್ಲಿ ಫಲಾನುಭವಿಗಳಿಗೆ ವಾಹನಗಳು ಸಿಗುತ್ತವೆ. ಇದರಲ್ಲಿ ಸಬ್ಸಡಿ ರೂಪದಲ್ಲಿ ನಿಮಗೆ ಹೆಚ್ಚಿನ ಉಳಿತಾಯವಾಗುತ್ತದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯಲ್ಲಿಯೂ ಅನೇಕ ಸೌಕರ್ಯಗಳಿವೆ ಅವುಗಳನ್ನೆಲ್ಲಾ ಬಳಸಿಕೊಂಡು ನಿಮ್ಮ ಕಾಲ ಮೇಲೆ ನೀವು ನಿಂತು ಸ್ವಾವಲಂಭಿಗಳಾಗಿ ಬದುಕಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ನೀವುಗಳು ಯಾವುದೇ ಉದ್ಯೋಗ ಕೈಗೊಳ್ಳುವ ಬದಲು ಅದಕ್ಕೆ ಸಂಬಂಧಿಸಿದಂತೆ ವಿಚಾರ ತಿಳಿದುಕೊಂಡಿರಬೇಕು. ಅನುಭವವಿಲ್ಲದೆ ಸ್ವ-ಉದ್ಯೋಗ ಕೈಗೊಂಡರೆ ಕೆಲವೊಮ್ಮೆ ನೀವುಗಳು ಹೂಡಿದ ಬಂಡವಾಳ ನಷ್ಟವಾಗಬಹುದು. ಸರ್ಕಾರಿ ಉದ್ಯೋಗಕ್ಕಾಗಿ ಶಿಕ್ಷಣ ಪಡೆಯುವುದಕ್ಕಿಂತ ಮುಖ್ಯವಾಗಿ ಜ್ಞಾನ ಹೆಚ್ಚಿಸಿಕೊಳ್ಳುವುದಕ್ಕಾಗಿ ಎಲ್ಲರಿಗೂ ಶಿಕ್ಷಣ ಬೇಕು. ಸುಧಾಮೂರ್ತಿ, ಅಬ್ದುಲ್ ಕಲಾಂ ಇವರುಗಳೆಲ್ಲಾ ಬಡ ಕುಟುಂಬದಲ್ಲಿ ಜನಿಸಿ ಸಾಧನೆ ಮಾಡಿ ವಿಶ್ವವೇ ತನ್ನತ್ತ ನೋಡುವಷ್ಟರ ಮಟ್ಟಿಗೆ ಬೆಳೆದರು. ಎಲ್ಲದಕ್ಕೂ ಮೊದಲು ಆತ್ಮವಿಶ್ವಾಸವಿರಬೇಕು ಎಂದು ಹೇಳಿದರು.ಸಿಲಿಕಾನ್ ಕಂಪ್ಯೂಟರ್ಸ್ನ ಸೋಮಶೇಖರ್, ವಿದ್ಯಾರ್ಥಿ ತಿಪ್ಪೇಶ್ ಮಾತನಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ