ಮಧುಗಿರಿ
ದಲಿತ ಕಾಲೋನಿಗಳಲ್ಲಿ ಮೂಲಭೂತ ಸೌಲಭ್ಯಕ್ಕೆ ಹೆಚ್ಚು ಆದ್ಯತೆ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನ್ನಿಸ್ ಕಣ್ಮಣಿ ಜಾಯ್ ತಿಳಿಸಿದರು.
ಜಿಲ್ಲಾ ಪಂಚಾಯತ್ ವತಿಯಿಂದ ಮಧುಗಿರಿ ತಾಲ್ಲೂಕಿನ ಕಸಬ ಹೋಬಳಿಯ ದಬ್ಬೇಘಟ್ಟ ಗ್ರಾಮದ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ದಲಿತ ಕಾಲೋನಿಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬು ದೂರುಗಳು ಬಂದ ಹಿನ್ನಲೆಯಲ್ಲಿ, ಬುಧವಾರ ಗ್ರಾ.ಪಂ ವ್ಯಾಪ್ತಿಯ ದಲಿತ ಕಾಲೋನಿಗಳಿಗೆ ಭೇಟಿ ನೀಡಿ ನಂತರ ಮಾತನಾಡಿದ ಅವರು, ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಹಾಗೂ ಶುಚಿತ್ವ ಕಾಪಾಡಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಜಿಲ್ಲೆಯ 10 ತಾಲ್ಲೂಕುಗಳು ಈಗಾಗಲೇ ಬರಪೀಡಿತ ಪ್ರದೇಶಗಳೆಂದು ಸರಕಾರದ ವತಿಯಿಂದ ಘೋಷಿಸಲಾಗಿದ್ದು, ಬರ ಪರಿಸ್ಥಿತಿ ಎದುರಿಸಲು ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕುಡಿಯುವ ನೀರನ ಸಮಸ್ಯೆ ಎದುರಿಸಲು ಅಧಿಕಾರಿಗಳು ಈಗಾಗಲೇ ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದು, ನರೇಗಾ ಯೋಜನೆಯಡಿ ಸುಮಾರು 4 ಕೋಟಿಯಷ್ಟು ಆಯವ್ಯಯದ ಬಗ್ಗೆ ರೂಪುರೇಷೆಗಳನ್ನು ತಯಾರು ಮಾಡುತ್ತಿದ್ದು, ವರದಿಯನ್ನು ಶೀಘ್ರವಾಗಿ ಸರಕಾರಕ್ಕೆ ಕಳುಹಿಸಿ ಕೊಡಲಾಗುವುದು ಎಂದರು.
ಗ್ರಾ.ಪಂ. ಅಧ್ಯಕ್ಷ ಹೆಚ್.ಟಿ ರಂಗನಾಥ್ ಗೌಡ ಮಾತನಾಡಿ ಗ್ರಾಮ ವಾಸ್ತವ್ಯವು ಗಾಂಧಿಜೀಯವರ ಕನಸಾಗಿದ್ದು ಇದನ್ನು ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿಗಳಾದ ಕುಮಾರ ಸ್ವಾಮಿಯವರು ಜಾರಿಗೆ ತಂದಿದ್ದಾರೆ. ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚಾಗಿ ರೂಪಿಸುವುದರಿಂದ ಜನರ ಕಷ್ಟ ಸುಖಗಳನ್ನು ತುಂಬ ಹತ್ತಿರದಿಂದ ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ವಿವಿಧ ಇಲಾಖೆಗಳ ವತಿಯಿಂದ ಫಲಾನುಭವಿಗಳಿಗೆ ಸವಲತ್ತು ವಿತರಣೆ ಹಾಗೂ ನರೇಗಾ ಯೋಜನೆಯಡಿಯಲ್ಲಿ ಕೂಲಿ ಕಾರ್ಡ್‍ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ತಾ.ಪಂ ಇ.ಒ ಮೋಹನ್, ದಬ್ಬೇಘಟ್ಟ ಉಪಾಧ್ಯಕ್ಷೆ ಲಕ್ಷ್ಮೀದೇವಮ್ಮ, ಗ್ರಾಪಂ ಸದಸ್ಯರಾದ ಗೀತಾ ಮಹಾದೇವಯ್ಯ, ಜಯಮ್ಮ, ಗಂಗಾಧರ್, ಶಿವಣ್ಣ, ಮುಖಂಡರಾದ ವೆಂಕಟೇಶ್, ನಾಗರಾಜು ಚಂದ್ರಣ್ಣ, ಪಿಡಿಓ ಶಿವರಾಜ್ ಅರಸ್ ಹಾಗೂ ಗ್ರಾಮಸ್ಥರುಗಳು ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತಿತರರು ಇದ್ದರು