ಬ್ಯಾಡಗಿ:
ರೈತನೊಬ್ಬನ ಟ್ರ್ಯಾಕ್ಟರ್ ಮೇಲಿನ ಸಾಲ ವಸೂಲಾತಿಗೆ ಮುಂದಾದ ಪ್ರಾಥಮಿಕ ಕೃಷಿ ಪತ್ತಿನ (ಪಿಎಲ್‍ಡಿ) ಬ್ಯಾಂಕ್ ಅಧಿಕಾರಿಗಳ ವರ್ತನೆಯನ್ನು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕ ಘಟಕದ ಕಾರ್ಯಕರ್ತರು ಬ್ಯಾಂಕ್‍ಗೆ ಬೀಗ ಜಡಿದು ಹಠಾತ್ ಪ್ರತಿಭಟಿಸಿದ ಘಟನೆ ಗುರುವಾರ ಸಂಜೆ ನಡೆದಿದೆ.
ತಾಲೂಕಿನ ಗುಂಡೇನಹಳ್ಳಿ ಗ್ರಾಮದ ಸೋಮಶೇಖರ ರುದ್ರಪ್ಪ ಯತ್ನಳ್ಳಿ ಟ್ರ್ಯಾಕ್ಟರ್ ಪಡೆಯುವ ಸಲುವಾಗಿ ಕಳೆದ ಏಳೆಂಟು ವರ್ಷಗಳ ಹಿಂದೆಯೇ ರೂ.4.60 ಲಕ್ಷ ಪಡೆದುಕೊಂಡಿದ್ದು ಅದರ ಬಾಬತ್ತು ರೂ.2.37 ಲಕ್ಷ (ಕಟಬಾಕಿ) ರೂ.2 ಲಕ್ಷ ಬೆಳೆಸಾಲ ಹಾಗೂ ಭೂ ಅಭಿವೃದ್ಧಿಗೆ ರೂ.60 ಸಾವಿರ ಪಡೆದುಕೊಂಡಿದ್ದಾನೆ, ಅನ್ಯ ಕೆಲಸದ ನಿಮಿತ್ಯ ಪಟ್ಟಣಕ್ಕೆ ಬಂದಿದ್ದ ರೈತ ಸೋಮಶೇಖರ ಯತ್ನಳ್ಳಿಯನ್ನು ತಡೆದು ನಿಲ್ಲಿಸಿದ ಬ್ಯಾಂಕ್ ಅಧಿಕಾರಿಗಳು ಹಣ ಮರುಪಾವತಿ ಮಾಡುವಂತೆ ಒತ್ತಾಯಿಸಿದ್ದಲ್ಲದೇ ಟ್ರ್ಯಾಕ್ಟರ್ ಸಮೇತ ಬ್ಯಾಂಕ್‍ಗೆ ಕರೆ ತಂದು ವಸೂಲಾತಿಗೆ ಮುಂದಾಗಿದ್ದಾರೆ.
ಸಾಲ ವಸೂಲಾತಿಗೆ ಮುಂದಾಗಿರುವ ಸುದ್ದಿ ರೈತ ಸಂಘದ ಗಮನಕ್ಕೆ ಬಂದಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ಸಂಘದ ನೂರಾರು ಕಾರ್ಯಕರ್ತರು ಬ್ಯಾಂಕಿನೆದುರು ಕ್ಷಣಾರ್ಧದಲ್ಲಿ ಜಮಾಯಿಸಿದರು, ಈ ಸಂದರ್ಭದಲ್ಲಿ ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಹಾಕಿದ ಅವರು ಬ್ಯಾಂಕಿಗೆ ಬೀಗ ಜಡಿದು ಹಠಾತ್ ಪ್ರತಿಭಟನೆ ನಡೆಸಿದರು.
ಸರ್ಕಾರದಿಂದಲೇ ಮೀಟರ್ ಬಡ್ಡಿ ದಂಧೆ:ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡ ಗಂಗಣ್ಣ ಎಲಿ ಮಾತನಾಡಿ, ಕೃಷಿ ಚಟುವಟಿಕೆಗಳ ಮೇಲಿನ ಎಲ್ಲ ರೀತಿ ಸಾಲಗಳನ್ನು ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಿಸಿದ್ದಾರೆ, ಅದಾಗ್ಯೂ ಸಹ ಸ್ಥಳೀಯ ಪಿಎಲ್‍ಡಿ ಬ್ಯಾಂಕ ಅಧಿಕಾರಿಗಳು ಉದ್ಧಟತನ ತೋರುವ ಮೂಲಕ ಸಾಲ ವಾಸೂಲಾತಿಗೆ ಮುಂದಾಗಿರುವುದು ಖಂಡನೀಯ, ಶೇ.18ರ ಬಡ್ಡಿದರ ಆಕರಣೆ ಮಾಡುತ್ತಿರುವ ಬ್ಯಾಂಕ್ ಏನೂ ಅರಿಯದ ಮುಗ್ಧ ರೈತನಿಂದ ಮನಬಂದಂತೆ ಬಡ್ಡಿ ತುಂಬಿಸಿಕೊಂಡಿದ್ದು ಇದೀಗ ಸಾಲ ತುಂಬುವಂತೆ ಬೆನ್ನು ಹತ್ತಿದ್ದಾರೆ, ಮೀಟರ್ ಬಡ್ಡಿದಾರರನ್ನು ಮಟ್ಟ ಹಾಕುವುದಾಗಿ ಘೋಷಿಸಿದ ಎಚ್‍ಡಿಕೆ ನೇತೃತ್ವದ ಸಮ್ಮಿಶ್ರ ಸರ್ಕಾರ ಪಿಎಲ್‍ಡಿ ಬ್ಯಾಂಕ್‍ಗಳ ಮೂಲಕ ಮೀಟರ್ ಬಡ್ಡಿ ದಂಧೆ ನಡೆಸುತ್ತಿದೆ ಎಂದು ಆರೋಪಿಸಿದರು.
ಬಡ್ಡಿ ತುಂಬಲಾಗದ 76 ಸಾವಿರ ರೈತರು ಇನ್ನೂ ಸುಸ್ತಿದಾರರು: ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಪಿಎಲ್‍ಡಿ, ಡಿಸಿಸಿ, ಕೆಸಿಸಿ ಸೇರಿದಂತೆ ಇನ್ನಿತರ ಪಿಕಾರ್ಡ ಬ್ಯಾಂಕ್‍ಗಳ ಮೂಲಕ ರಾಜ್ಯದಲ್ಲಿ ಸುಮಾರು 76 ಸಾವಿರ ರೈತರಿಂದ ಸುಮಾರು 530 ಕೋಟಿ ರೂ.ಬಾಕಿಯಿದೆ, ಇವರಿಗೆ ಶೇ.18 ಬಡ್ಡಿದರ ಹೊರೆಯಾಗಿದ್ದು ಬಹುಶಃ ತೆಗೆದುಕೊಂಡ ಎಲ್ಲ ರೈತರು ಬಡ್ಡಿ ಕಟ್ಟಲಾಗದೇ ಸುಸ್ತಿದಾರರಾಗಿದ್ದು ಕೂಡಲೇ ಸರ್ಕಾರ ಸಾಲಮನ್ನಾ ಪಟ್ಟಿಯಲ್ಲಿ ಪಿಕಾರ್ಡ ಬ್ಯಾಂಕ್‍ಗಳಲ್ಲಿನ ಸಾಲವನ್ನೂ ಸಹ ಮನ್ನಾ ಮಾಡುವಂತೆ ಆಗ್ರಹಿಸಿದರು.
ಋಣಮುಕ್ತ ಬೇಡ ಎನ್‍ಡಿಸಿ ಕೊಡಿ ಸಾಕು:ಶಶಿಧರ ಛತ್ರದಮಠ ಮಾತನಾಡಿ, ಸಾಲಮನ್ನಾ ಯೋಜನೆಯಡಿ ಫಲಾನುಭವಿಗ ಳಿಗೆ ಋಣಮುಕ್ತ ಪ್ರಮಾಣ ಪತ್ರ ಪಡೆದು ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ರಾಜ್ಯ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್‍ಡಿಕೆ ಮತ್ತವರ ಪಟಾಲಂಗಳು ಮೊದಲು ಅದನ್ನು ನಿಲ್ಲಿಸಲಿ, ಪಿಕಾರ್ಡ ಬ್ಯಾಂಕ್‍ಗಳ ಮೂಲಕ ರೈತರು ಮಾಡಿದ ಸಾಲಮನ್ನಾ ಮಾಡುವ ಮೂಲಕ ಸಾಲ ನಿರಪೇಕ್ಷಣಾ ಪತ್ರ (ಎನ್‍ಡಿಸಿ, ನೋಡ್ಯೂ ಸರ್ಟಿಫೀಕೆಟ್)ಕೊಟ್ಟು ಪುಣ್ಯ ಕಟ್ಟಿಕೊಳ್ಳಿ, ಇದಕ್ಕೆ ರಾಜ್ಯ ಮುಂದಾಗದಿದ್ದಲ್ಲಿ ರಾಜ್ಯ ರೈತ ಸಂಘವು ರಾಜ್ಯವ್ಯಾಪಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಶೇ.18ರ ಬಡ್ಡಿ ವಿಶ್ವದ ಯಾವುದೇ ಬ್ಯಾಂಕ್‍ಗಳಲ್ಲಿ ಇಲ್ಲ:ಮಲ್ಲೇಶಪ್ಪ ಡಂಬಳ ಮಾತನಾಡಿ, ಪಿಎಲ್‍ಡಿ ಬ್ಯಾಂಕ್ ದೀರ್ಘಾವಧಿ ಸಾಲಗಳನ್ನು ನೀಡಿದೆಯಾದರೂ ಶೇ.18 ರಷ್ಟು ಬಡ್ಡಿ ಆಕರಣೆ ಮಾಡುತ್ತಿದೆ, ವಿಶ್ವದ ಯಾವದೇ ಬ್ಯಾಂಕಗಳಲ್ಲಿ ಈ ದರವಿಲ್ಲ, ಕೃಷಿಯ ಸರಣಿ ವೈಫಲ್ಯದಿಂದ ಪಡೆದ ಸಾಲಕ್ಕೆ ಬಡ್ಡಿ ತೀರಿಸಲು ಸಾಧ್ಯವಾಗುತ್ತಿಲ್ಲ ಕೂಡಲೇ ಎಲ್ಲ ಸಾಲಗಾರ ರೈತರ ಬಡ್ಡಿಯನ್ನು ಮನ್ನಾ ಮಾಡುವ ಮೂಲಕ ಅಸಲು ತುಂಬಿಸಿಕೊಂಡು ನಮಗೆ ಎನ್‍ಡಿಸಿ ಸರ್ಟಿಫಿಕೇಟ್ ನೀಡುವಂತೆ ಆಗ್ರಹಿಸಿದರು.
ಪೊಲಿಸ್‍ರ ಮದ್ಯಸ್ಥಿಕೆಯಲ್ಲಿ ರೈತನ ಬಿಡುಗಡೆ: ಬ್ಯಾಂಕ್‍ಗೆ ಬೀಗ ಜಡಿದು ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸ್ ಸಿಬ್ಬಂದಿಯು ಆಕ್ರೋಶಗೊಂಡಿದ್ದ ಪ್ರತಿಭಟನಾಕಾರರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾದರು. ಸಾಲ ವಸೂಲಾತಿಗೆ ರೈತ ಅಥವಾ ಆತನ ಟ್ರ್ಯಾಕ್ಟರ್ ತರುವಂತಿಲ್ಲ ಕೂಡಲೇ ಎರಡನ್ನೂ ಕಳುಹಿಸಿಕೊಡಿ ಎಂದು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೇ, ಯಾವುದೇ ಕಾರಣಕ್ಕೆ ಪ್ರತಿಭಟನೆ ಮುಂದುವರೆಸದಂತೆ ಮನವಿ ಮಾಡಿದರು, ಬಳಿಕ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ಹಿಂಪಡೆದರು. ಈ ಸಂದರ್ಭದಲ್ಲಿ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಶಿವಯೋಗಿ ಶಿರೂರು, ನಿರ್ದೇಶಕರಾದ ಮಹದೇವಪ್ಪ ಶಿಡೇನೂರ, ಕೆಂಪೇಗೌಡ ರೈತ ಮುಖಂಡರಾದ ನಂಜುಂಡಸ್ವಾಮಿ ಹಾವೇರಿಮಠ, ಗುಡ್ಡಪ್ಪ ಹೊಂಬರಡಿ, ಜಾನ್ ಪುನೀತ್, ಜಗದೀಶ ಎಲಿ, ಬಿ.ಎಸ್.ಪಾಟೀಲ, ಕಿರಣ ಗಡಿಗೋಳ ಹಾಗೂ ಇನ್ನಿತರರು ಉಪಸ್ಥಿತರಿದ್ದರು.