ಕೊರೋನಾ ಸಂಕಷ್ಟಕ್ಕೆ ಮಿಡಿದ ನವ ಜೋಡಿ

ಕೊವಿಡ್ ಸಂಕಷ್ಟದಲ್ಲಿ ಆದರ್ಶವಿವಾಹ

ತುಮಕೂರು

       ತಮ್ಮ ಮಗನ ಮದುವೆಯನ್ನು ಸರಳವಾಗಿ ನೆರವೇರಿಸಿದ್ದಲ್ಲದೆ ಕೋವಿಡ್ ಸಂಕಷ್ಟದ ನೆರವಿಗಾಗಿ ಜಿಲ್ಲಾಡಳಿತಕ್ಕೆ 25000 ರೂ. ನೆರವು ನೀಡಿ ಇತರರಿಗೆ ಮಾದರಿಯಾಗಿದ್ದಾರೆ ನಗರದ ನಿವೃತ್ತ ಪ್ರೊ. ಹೆಚ್. ಆರ್. ಜಯದೇವರು ದಂಪತಿ.

      ನಗರದ ಶ್ರೀ ಸಿದ್ದಾರ್ಥ ಪದವಿ ಕಾಲೇಜಿನಲ್ಲಿ ಸಹ ಪ್ರಾಧ್ಯಪಕರಾಗಿ ನಿವೃತ್ತರಾಗಿರುವ ಜಯದೇವರು ಹಾಗು ಶಿಕ್ಷಕಿ ಎಚ್. ಪುಷ್ಪಲತಾ ಅವರು ತಮ್ಮ ಪುತ್ರ ಅಮಿತ್ ಯಾದವ್ ಅವರನ್ನು ಬೆಂಗಳೂರಿನ ಕಾವ್ಯ ಅವರಿಗೆ ಕೊಟ್ಟು ವಿವಾಹ ಮಾಡಿಕೊಡಲು ನಿಶ್ಚಯಿಸಿದ್ದರು. ವಿವಾಹವನ್ನು ಸರಳವಾಗಿ ಆಚರಿಸಬೇಕೆಂದು ನಿಶ್ಚಯಿಸಿ ಅದರಂತೆ ತುಮಕೂರಿನ ಗಂಗೋತ್ರಿ ನಗರದಲ್ಲಿರುವ ತಮ್ಮ ನಿವಾಸದಲ್ಲಿಯೆ ಸರಳ ಕಾರ್ಯಕ್ರಮ ಆಯೋಜಿಸಿದ್ದರು.

    ಆತ್ಮೀಯ 45 ಮಂದಿ ಬಂಧು ಮಿತ್ರರನ್ನು ಮಾತ್ರವೇ ತಮ್ಮ ಸ್ವಗೃಹಕ್ಕೆ ಬರಮಾಡಿಕೊಂಡು ಸರಳವಾಗಿ ವಿವಾಹ ಕಾರ್ಯ ನೆರವೇರಿಸಿದರು. ಅತಿಥಿಗಳಾಗಿ ಆಗಮಿಸಿದ್ದ ಎಲ್ಲರಿಗೂ ವಿನಾಯಕ ನರ್ಸಿಂಗ್ ಹೋಂ ವತಿಯಿಂದ ಉಚಿತವಾಗಿ ಮಾಸ್ಕ್, ಸ್ಯಾನಿಟೈಜೇಷನ್ ವಿತರಿಸಿ ಜ್ವರ ಪರೀಕ್ಷೆ ತಪಾಸಣೆ ಮಾಡಲಾಯಿತು ಹಾಗೂ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲಾಯಿತು.

     ಹಿರಿಯರಾದ ಡಾ.ವೈ.ಎಂ.ರೆಡ್ಡಿ, ಪ್ರಾಚಾರ್ಯರಾದ ವಿಜಯೇಂದ್ರ, ಪ್ರೊ.ಕುಮಾರಸ್ವಾಮಿ ಸೇರಿದಂತೆ ಹಲವರು ವಧುವರರನ್ನು ಆಶೀರ್ವದಿಸಿದರು. ಮಿತ ಆಹಾರದೊಂದಿಗೆ ಸರಳ ಆರತಕ್ಷತೆ ಮುಗಿದು ಹೋಯಿತು. ತಿಳಿದ ಎಲ್ಲರೂ ಇದೇ ರೀತಿ ವಿವಾಹಗಳನ್ನು ನೆರವೇರಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕೆಂದು ಆಗಮಿಸಿದ್ದ ಗಣ್ಯರು ಹೇಳಿದರು.

   ಬುಧವಾರದಂದು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ನೂತನ ವಧುವರರು ಹಾಗೂ ಜಯದೇವರು ದಂಪತಿಗಳು ಸರಳ ವಿವಾಹದ ನೆನಪಿನ ಕಾಣಿಕೆಯಾಗಿ ಜಿಲ್ಲಾಡಳಿತಕ್ಕೆ 25 ಸಾವಿರ ರೂಗಳ ನೆರವು ನೀಡಿದರು. ಕೊರೋನಾ ಸಂತ್ರಸ್ತರಿಗೆ ನೆರವಾಗಲೆಂದು ಈ ಕಿರು ಕಾಣಿಕೆ ನೀಡುತ್ತಿರುವುದಾಗಿ ಜಯದೇವರು ತಿಳಿಸಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ್ ಇತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link