ದಾವಣಗೆರೆ
ಜಗಜ್ಯೋತಿ ಬಸವಣ್ಣನವರ ಆಗಮನಕ್ಕೂ ಮುನ್ನ ಧರ್ಮ ಎಂಬುದು ಕೆಲವೇ ಜನಾಂಗಗಳ ಸ್ವತ್ತಾಗಿತ್ತು ಎಂದು ಪಾಂಡೋಮಟ್ಟಿ ವಿರಕ್ತಮಠದ ಡಾ.ಶ್ರೀಗುರುಬಸವ ಸ್ವಾಮೀಜಿ ತಿಳಿಸಿದರು.
ನಗರದ ರೋಟರಿ ಬಾಲಭವನದಲ್ಲಿ ಶನಿವಾರ ವಿಶ್ವವೀರಶೈವ ಲಿಂಗಾಯತ ಏಕೀಕರಣ ಪರಿಷತ್, ವಿಶ್ವ ಕಲ್ಯಾಣ ಪರಿಸರ ಗ್ರಾಹಕ, ಸಾಂಸ್ಕೃತಿಕ ಪರಿಷತ್ತು, ಸಮಗ್ರ ಸಾಹಿತ್ಯ ವೇದಿಕೆ ಭರಮಸಾಗರ, ಸಿರಿಗನ್ನಡ ವೇದಿಕೆ, ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಶ್ರೀಗುರು ರೇಣುಕರ ಯುಗಮಾನೋತ್ಸವ ಹಾಗೂ ಬಸವ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಬಸವಣ್ಣನವರು ಬರುವುದಕ್ಕೂ ಮುನ್ನ ಧರ್ಮ ಕೇವಲ ಕೆಲವೇ ಜನಾಂಗಗಳ ಸ್ವತ್ತಾಗಿತ್ತು. ಆದರೆ, ವೈಚಾರಿಕ ಕ್ರಾಂತಿ ನಡೆಸಿದ ಬಸವಣ್ಣನವರು ಅನುಭವ ಮಂಟಪಕ್ಕೆ ಎಲ್ಲಾ ಜನರನ್ನು ಕರೆತರುವ ಮೂಲಕ ತಳ ಸಮುದಾಯದವರಿಗೂ ಹಾಗೂ ಮಹಿಳೆಯರಿಗೂ ಧರ್ಮದ ಸ್ಪರ್ಷ ನೀಡಿದರು. ಆದ್ದರಿಂದ ದೀನ-ದಲಿತರು, ಅಸ್ಪೃಶ್ಯರು, ಮಹಿಳೆಯರು ಯಾವುದೇ ಕಾರಣಕ್ಕೂ ಬಸವಣ್ಣನವರನ್ನು ಮರೆಯಬಾರದು ಎಂದು ಸಲಹೆ ನೀಡಿದರು.
ಹಿಂದೆ ಮಹಿಳೆಯರು ನಾಲ್ಕು ಗೋಡೆಗಳ ಮಧ್ಯೆಯೇ ಜೀವನ ನಡೆಸಬೇಕಾದಂತಹ ಕೆಟ್ಟ ಕಟ್ಟುಪಾಡುಗಳಿದ್ದವು. ಆಗ ಬಸವಣ್ಣನವರು ಮಹಿಳೆಯರಿಗೆ ಧಾರ್ಮಿಕ ಸ್ವತಂತ್ರ ನೀಡಿ, ಸ್ತ್ರೀಯರಿಗೂ ಪುರುಷರಷ್ಟೇ ಸಮಾನ ಸ್ಥಾನಮಾನ ನೀಡಿದ್ದರು. ಅಲ್ಲದೇ, ಧಾರ್ಮಿಕ ಕಾರ್ಯಗಳಿಂದ ದೂರ ಉಳಿದಿದ್ದ ಸಮುದಾಯಗಳಿಗೂ ಧರ್ಮವನ್ನು ಪರಿಚಿಸಿದ ಕೀರ್ತಿಯೂ ವಿಶ್ವಗುರು ಬಸವಣ್ಣನವರಿಗೆ ಸಲ್ಲಲಿದೆ ಎಂದರು.
ನಮ್ಮ ಜಿಲ್ಲೆಯವರೇ ಆದ ಜೆ.ಹೆಚ್.ಪಟೇಲ್ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಕೂಡಲ ಸಂಗಮವನ್ನು ಅಭಿವೃದ್ಧಿ ಪಡಿಸುವುದರ ಮೂಲಕ ಪ್ರವಾಸಿತಾಣವನ್ನಾಗಿ ಮಾಡಿದ್ದರು. ಅದರಂತೆಯೇ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹ ಅವರ ಅವಧಿಯಲ್ಲಿ ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಹಾಕುವಂತೆ ಆದೇಶ ಮಾಡುವ ಮೂಲಕ ಬಸವಣ್ಣನವರ ವಿಚಾರಧಾರೆಯನ್ನು ಸಮಾಜಕ್ಕೆ ಪರಚಯಿಸುವ ಕೆಲಸ ಮಾಡಿದ್ದಾರೆಂದು ಹೇಳಿದರು.
ಪುರುಷ ಪ್ರಧಾನ ವ್ಯವಸ್ಥೆಯ ಆಡಳಿತದಿಂದಾಗಿ ವೈಜ್ಞಾನಿಕ, ವೈಚಾರಿಕ ಯುಗದಲ್ಲೂ ಸಹ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿಯನ್ನು ಜಾರಿಗೆ ತರಲಾಗುತ್ತಿಲ್ಲ. ಆದ್ದರಿಂದ ಮಹಿಳೆಯರು ಜಾಗೃತರಾಗುವ ಮೂಲಕ ತಮ್ಮ ಹಕ್ಕಿಗಾಗಿ ಹೋರಾಡಬೇಕೆಂದು ಕರೆ ನೀಡಿದರು.
ಈ ಭೂಮಿಯ ಮೇಲಿರುವ ಪ್ರತಿಯೊಬ್ಬರಿಗೂ ಸಹ ಗೌರವನ್ವಿತವಾಗಿ ಬದಕುವ ಹಕ್ಕು ಇದೆ. ಇದನ್ನು ಸದುಪಯೋಗ ಪಡಿಸಿಕೊಳ್ಳ ಬೇಕು. ಪಾರದರ್ಶಕವಾಗಿ ಯೋಚನೆ ಮಾಡುವ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಕಿವಿಮಾತು ಹೇಳಿದ ಶ್ರೀಗಳು, ನಂಬಿಕೆಗೆ ಮತ್ತೊಂದು ಹೆಸರೇ ಮಹಿಳೆಯಾಗಿದ್ದಾಳೆ. ಆದ್ದರಿಂದಲೇ ಮಹಿಳೆಯರಿಗೆ ಸ್ವಸಹಾಯ ಸಂಘಗಳು ಮತ್ತು ಬ್ಯಾಂಕ್‍ಗಳು ಹೆಚ್ಚಿನ ಸಾಲ ಸೌಲಭ್ಯವನ್ನು ನೀಡುತ್ತಿವೆ ಎಂದರು.
ಇತ್ತೀಚಿನ ದಿನಗಳಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಮಹಿಳೆಯರೇ ಮೇಲುಗೈ ಸಾದಿಸುತ್ತಿರುವುದನ್ನು ನೋಡುತ್ತಿದ್ದೇವೆ. ಮಹಿಳೆಯರು ಯಾವುದಕ್ಕೂ ಅಂಜದೇ ಎಲ್ಲಾ ಕ್ಷೇತ್ರಗಳಲ್ಲಿ ತನ್ನದೇ ಛಾಪು ಮೂಡಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಕಾಯಕಯೋಗಿ ಬಸವಶ್ರೀ ಪ್ರಶಸ್ತಿ, ಅಕ್ಕಮಹಾದೇವಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಾವರಕೆರೆ ಶಿಲಾಮಠದ ಶ್ರೀಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಹಿರಿಯ ವಕೀಲರಾದ ಡಾ.ರೇವಣ್ಣ ಬಳ್ಳಾರಿ, ಡಾ.ಎಸ್.ಹೆಚ್.ವಿನಯಕುಮಾರ್ ಸಾಹುಕಾರ್, ಬಿ.ಕೆ.ಚಲುವಾಂಬಿಕ, ಶರಣಪ್ಪ ಕೊಗಲೂರು, ಎನ್.ಜಿ.ಶಿವಕುಮಾರ್, ಮಹಾಂತೇಶ್ ನಿಟ್ಟೂರು, ಹೇಮಂತ್, ಶಿವಕುಮಾರ್ ಶೆಟ್ರು, ಗೀತಾ, ಜ್ಯೋತಿ ಲಕ್ಷ್ಮಿ ಸಿರಿಗೆರೆ, ರುದ್ರಮ್ಮ ಮತ್ತಿತರರು ಉಪಸ್ಥಿತರಿದ್ದರು.