ಬಳ್ಳಾರಿ
ಜಿಲ್ಲೆಯಲ್ಲಿ ನಡೆಯುತ್ತಿರುವ ಬಾಲ್ಯವಿವಾಹ ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಹಾಗೂ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಮಂಜುನಾಥ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರರಂದು ಮಕ್ಕಳ ಸಹಾಯವಾಣಿ 1098ರ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಬಾಲ್ಯವಿವಾಹ ತಡೆಗಟ್ಟಲು ಹೆಚ್ಚಿನ ರೀತಿಯಲ್ಲಿ ಸಾರ್ವಜನಿಕರಿಗೆ ಹಾಗೂ ಪೋಷಕರಿಗೆ ಅರಿವು ಮೂಡಿಸಬೇಕು. ಪ್ರತಿ ತಾಲೂಕುಗಳಲ್ಲಿ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಹಯೋಗದಲ್ಲಿ ಬಾಲ್ಯವಿವಾಹ ತಡೆಗಟ್ಟುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದಕ್ಕೆ ಕಾರ್ಯಾಗಾರಗಳನ್ನು ಆಯೋಜಿಸಿ ಹಾಗೂ ಗ್ರಾಮಗಳಲ್ಲಿ ಶಾಲೆಗಳಿಂದ ಹೊರಗುಳಿದ ಮಕ್ಕಳ ಮಾಹಿತಿಯನ್ನು ಮುಖ್ಯಗುರುಗಳ ಮುಖಾಂತರ ಪಡೆದು ಅಂತಹ ಮಕ್ಕಳನ್ನು ಮುಖ್ಯ ವಾಹಿನಿಗೆ ತರಲು ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದರು.
ಜಿಲ್ಲೆಯಲ್ಲಿ ಮತ್ತು ತಾಲೂಕುವಾರು ದೂರುಗಳ ಕರೆಗಳು ಬಂದಲ್ಲಿ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಬಾಲ್ಯವಿವಾಹ ಹಾಗೂ ಬಾಲಕಾರ್ಮಿಕ ಮಕ್ಕಳು ಕಂಡು ಬಂದಲ್ಲಿ ಮಾಲೀಕರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಮತ್ತು ವರದಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಬೇಕು, ನಂತರ ಮಕ್ಕಳ ಪೋಷಣೆ ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಎಂದರು.
ನಗರ ಸಾರಿಗೆ ಸಂಸ್ಥೆಯ ಬಸ್‍ಗಳ ಒಳಭಾಗದಲ್ಲಿ ಬಾಲ್ಯವಿವಾಹ ಹಾಗೂ ಬಾಲಕಾರ್ಮಿಕ ಪದ್ಧತಿ, ಲೈಂಗಿಕ ದೌರ್ಜನ್ಯ ತಡೆಗಟ್ಟುವ ಮಾಹಿತಿ, ಮಕ್ಕಳ ಸಹಾಯವಾಣಿ ಹೊಂದಿರುವ ಸ್ಟೀಕ್ಕರ್‍ಗಳನ್ನು ಅಳವಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ವಸತಿ ನಿಲಯಗಳಲ್ಲಿ ಮಕ್ಕಳ ಸಹಾಯವಾಣಿ 1098ರ ಲೋಗೊದೊಂದಿಗೆ ಗೋಡೆ ಬರಹ ಬರೆಸಬೇಕು ಹಾಗೂ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕುರಿತು ಕಾರ್ಯಾಗಾರವನ್ನು ಏರ್ಪಡಿಸಬೇಕು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.