ಉತ್ತಮ ಮಳೆ : ಬಿತ್ತನೆ ಕಾರ್ಯ ಚುರುಕು

ತುರುವೇಕೆರೆ     ಆರಿದ್ರಾ ಮಳೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಉತ್ತಮವಾಗಿ ಆಗುತ್ತಿರುವ ಹಿನ್ನೆಲೆಯಲ್ಲಿ ರೈತರ ಮುಖದಲ್ಲಿ ಸಂತಸ ಮೂಡಿದ್ದು, ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ.

     ಆರಂಭದಲ್ಲಿ ಮಳೆ ಬಾರದೆ ರೈತರು ಆತಂಕ ಎದುರಿಸುವ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಇದೀಗ ಆರಿದ್ರಾ ಮಳೆ ಮುಂಗಾರು ಬಿತ್ತನೆಗೆ ರೈತರನ್ನು ಕೈ ಹಿಡಿದು ಖುಷಿ ಪಡುವಂತೆ ಮಾಡಿದೆ.

     ಖುಷಿಯಿಂದ ತಮ್ಮ ಜಮೀನುಗಳಲ್ಲಿ ಉಳುಮೆ ಮಾಡುವ, ನಾಟಿ ಮಾಡುವತ್ತ ರೈತ ಕುಟುಂಬದವರೆಲ್ಲರೂ ತೊಡಗಿಸಿಕೊಂಡಿದ್ದಾರೆ. ಕೊರೋನಾ ಸೋಂಕು ಹರಡುವ ಭೀತಿಯಿಂದ ಬೆಂಗಳೂರು ಲಾಕ್ ಡೌನ್ ಆಗಿರುವ ಹಿನ್ನಲೆಯಲ್ಲಿ ಬೆಂಗಳೂರಲ್ಲಿ ನೆಲಸಿದ್ದ ಗ್ರಾಮೀಣ ರೈತರ ಮಕ್ಕಳು ಗ್ರಾಮಗಳತ್ತ ಮುಖ ಮಾಡಿ, ತಾವೂ ಸಹ ಕುಟುಂಬದವರೊಂದಿಗೆ ಕೃಷಿಯಲ್ಲಿ ತೊಡಗಿಸಿಕೊಂಡಿರುವುದರಿಂದ ರೈತರಲ್ಲಿ ಇನ್ನಷ್ಟು ಹರ್ಷ ಮೂಡುವಂತೆ ಮಾಡಿದೆ.

    ಪೂರ್ವ ಮುಂಗಾರು ಬೆಳೆಗಳಾದ ಹೆಸರು, ಉದ್ದು, ಹಲಸಂದಿ ಸೇರಿದಂತೆ ಹಲವು ಬೆಳೆಗಳು ಮಳೆ ಪ್ರಮಾಣ ಕೊರತೆಯಿಂದ ಪೂರ್ಣ ಪ್ರಮಾಣದಲ್ಲಲ್ಲದಿದ್ದರೂ ಅಷ್ಟೊ ಇಷ್ಟೊ ಮುಂಗಾರು ಬೆಳೆ ರೈತರ ಕೈ ಸೇರುತ್ತಿರುವುದು ಸ್ವಲ್ಪ ನಿರಾಳವೆನಿಸಿದೆ. ಹೆಸರು ಗಿಡಕ್ಕೆ ಹಳದಿ ರೋಗ ತಗುಲಿದ್ದರಿಂದ ಬೆಳೆ ಇಳುವರಿ ಸ್ವಲ್ಪ ಕಡಿಮೆಯಾಗಿದೆ.

     ತಾಲ್ಲೂಕಿನಲ್ಲಿ ಈಗಾಗಲೆ ರೈತ ಬೀಜ ಬಿತ್ತನೆಗೆ ಭೂಮಿಯನ್ನು ಹದ ಮಾಡಿಕೊಳ್ಳುತ್ತಿದ್ದರೆ, ಹದ ಮಾಡಿ ಮಳೆ ನಿರೀಕ್ಷೆಯಲ್ಲಿದ್ದ ಕೆಲ ರೈತರು ಮುಂಗಾರು ಹಂಗಾಮಿನ ಬೆಳೆಗಳಾದ ರಾಗಿ. ಅವರೆ, ಜೋಳ, ಹುಚ್ಚ್ಚೆಳ್ಳು ಸೇರಿದಂತೆ ತರಾವರಿ ಬೀಜ ಬಿತ್ತುವಲ್ಲಿ ರೈತ ಉತ್ಸುಕನಾಗಿದ್ದಾನೆ. ಈಗಾಗಲೆ ತಾಲ್ಲೂಕಿನ ರೈತರು ರೈತ ಸಂಪರ್ಕ ಕೇಂದ್ರಗಳಿಂದ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಖರೀದಿಸಿದ್ದರೆ, ಕೆಲ ರೈತರು ಖಾಸಗಿ ಅಂಗಡಿಗಳಲ್ಲಿ ಬೀಜ ಹಾಗೂ ಗೊಬ್ಬರ ಖರೀದಿಸಿ ಬಿತ್ತನೆಗೆ ಸಜ್ಜಾಗಿದ್ದಾರೆ.

    ತೋಟಗಳಿಗೆ ಸಮೃದ್ದಿ ಮಳೆ: ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದಿದ್ದರೂ ಸಹ ಹೇಮಾವತಿ ನೀರು ಇದೇ ಪ್ರಥಮ ಬಾರಿಗೆ ಎರಡು ಬಾರಿ ತಾಲ್ಲೂಕಿನಲ್ಲಿ ಹರಿದಿದ್ದರಿಂದ ತಾಲ್ಲೂಕಿನ ಕೆಲ ಭಾಗದಲ್ಲಿ ಕೆರೆ ಕಟ್ಟೆಗಳಿಗೆ ನೀರು ಹರಿದು ಅಡಕೆ ಹಾಗು ತೆಂಗಿನ ತೋಟಗಳಿಗೆ ಸ್ವಲ್ಪ ಮಟ್ಟಿಗೆ ಅನುಕೂಲವಾಗಿದೆ. ಕುಡಿಯುವ ನೀರಿನ ಅಭಾವ ತಗ್ಗಿದೆ. ಭೂಮಿಯಲ್ಲಿ ಅಂತರ್ಜಲ ಹೆಚ್ಚಿ, ವಾಣಿಜ್ಯ ಬೆಳೆಗಳಾದ ಅಡಕೆ, ತೆಂಗು, ಬಾಳೆಗಿಡಗಳಿಗೆ ಹೆಚ್ಚು ಅನುಕೂಲವಾಗಿದೆ. ಅದರಂತೆ ಮುಂದಿನ ದಿನಗಳಲ್ಲಿ ಮಳೆಯು ಸಮೃದ್ದವಾಗಿ ಸುರಿಯಲಿದ್ದು, ರಾಗಿ ಬೆಳೆಯೂ ಸಹ ಪೂರ್ಣ ಪ್ರಮಾಣದಲ್ಲಿ ಕೈ ಸೇರಬಹುದೆಂಬ ಆಸೆ ಹೊತ್ತ ರೈತ ರಾಗಿ ಬಿತ್ತನೆಗೆ ಮುಂದಾಗಿದ್ದಾನೆ. ಮಳೆ ಬಂದರೇನೊ ಸರಿ ಇಲ್ಲದಿದ್ದಲ್ಲಿ ಆ ದೇವರೆ ದಿಕ್ಕು ತೋರಿಸಬೇಕಾಗಿದೆ.

     ಕೃಷಿ ಇಲಾಖೆಯಿಂದ ಸಮಗ್ರ ಮಾಹಿತಿ: ಕೃಷಿ ಇಲಾಖೆಯಲ್ಲಿ ಸಿಗುವ ಸವಲತ್ತುಗಳನ್ನು ರೈತರು ಸದುಪಯೋಗ ಮಾಡಿಕೊಳ್ಳಬೇಕು. ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅವಶ್ಯವಿರುವ ತಂತ್ರಜ್ಞಾನ ಪದ್ದತಿಯನ್ನು ಸರ್ಕಾರ ಜಾರಿಗೊಳಿಸಿ, ಅನೇಕ ಸೌಲಭ್ಯಗಳನ್ನು ರೈತರಿಗೆ ನೀಡುತ್ತಿವೆ. ರೈತರು ಅವುಗಳನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳುವ ಜೊತೆಗೆ ಕೃಷಿ ಇಲಾಖೆಗಳು ನೀಡುವ ಮಾರ್ಗದರ್ಶನವನ್ನು ತಮ್ಮ ಕೃಷಿಯಲ್ಲಿ ಅಳವಡಿಸಿಕೊಂಡು ಪ್ರಗತಿಪರ ರೈತರಾಗಬೇಕು. ರೈತರು ತಮ್ಮ ನೀರಿನ ಲಭ್ಯತೆ ಅರಿತು ಮತ್ತು ಮಳೆಗನುಗುಣವಾಗಿ ಬೆಳೆಯನ್ನು ಬೆಳೆಯಬೇಕಿದೆ. ಯಾವುದೇ ಲೋಪ ದೋಷಗಳು ಕಂಡು ಬಂದರೆ ಹೋಬಳಿ ಅಥವಾ ತಾಲ್ಲೂಕು ಕೃಷಿ ಸಂಪರ್ಕಾಧಿಕಾರಿಗಳ ಸಲಹೆಯಂತೆ ಕ್ರಮ ಕೈಗೊಳ್ಳುವುದರಿಂದ ರೈತರು ಉತ್ತಮ ಬೆಳೆ ಪಡೆಯಬಹುದಾಗಿದೆ.

     ವಾಣಿಜ್ಯ ಬೆಳೆಗಳತ್ತ ರೈತರ ಗಮನ: ರೈತರು ಕೇವಲ ಮಳೆಯಾಧಾರಿತ ಬೆಳೆಗಳಿಗೆ ಅವಲಂಬಿತರಾಗಿರದೆ, ತೋಟಗಾರಿಕಾ ಬೆಳೆಗಳ ಜೊತೆಗೆ ವಾಣಿಜ್ಯ ಬೆಳೆಗಳನ್ನು ಬೆಳೆಯುವುದನ್ನು ರೂಢಿಸಿಕೊಳ್ಳಬೇಕು. ಹೈನುಗಾರಿಕೆ, ಕೋಳಿ ಸಾಕಣೆಯಂತಹ ಉಪ ಕಸುಬುಗಳು ಇದ್ದಾಗ ಮಾತ್ರ ಕೃಷಿಯಲ್ಲಿ ಸಂಪೂರ್ಣ ಪ್ರಗತಿ ಸಾಧಿಸಲು ಸಾಧ್ಯ. ಪಶುಭಾಗ್ಯ, ಬೆಳೆವಿಮೆ, ತೋಟಗಾರಿಕೆ, ಕೃಷಿ, ಅರಣ್ಯ ಇಲಾಖೆಗಳ ಯೋಜನೆಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಅರ್ಹ ರೈತರು ಪಾಲ್ಗೊಂಡು ತಮ್ಮ ಸವಲತ್ತನ್ನು ಪಡೆಯಬಹುದಾಗಿದೆ ಎಂದು ತಾಲ್ಲೂಕು ಕೃಷಿ ನಿರ್ದೇಶಕ ಪ್ರಮೋದ್ ಕುಮಾರ್ ತಿಳಿಸಿದ್ದಾರೆ.

      ಕೃಷಿ ಕೆಲಸಕ್ಕೆ ಜನರ ಕೊರತೆಯಿಲ್ಲ: ತಾಲ್ಲೂಕು ರೈತ ಸಂಘದ ಅಧ್ಯಕ್ಷ ಶ್ರೀನಿವಾಸ್ ಗೌಡ ಮಾತನಾಡಿ, ಇದೀಗ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ರಾಗಿ ಬಿತ್ತನೆಗೆ ಉತ್ತಮ ಕಾಲವಾಗಿದೆ. ಕೊರೋನಾ ಲಾಕ್ ಡೌನ್ ನಿಂದ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಗ್ರಾಮೀಣ ಪ್ರದೇಶದ ಯುವಕರು ಬೆಂಗಳೂರು ತೊರೆದು ತಮ್ಮ ಗ್ರಾಮಗಳಿಗೆ ವಾಪಸ್ ಬಂದು ಕುಟುಂಬಸ್ಥರೊಂದಿಗೆ ಬೆರೆತು, ಕೃಷಿಯಲ್ಲಿ ತೊಡಗಿಸಿಕೊಂಡಿರುವುದರಿಂದ ಕೃಷಿ ಕೆಲಸಕ್ಕೆ ಜನರ ಕೊರತೆ ಸ್ವಲ್ಪ ಕಡಿಮೆಯಾಗಿದೆ. ಸರ್ಕಾರ ರೈತರಿಗೆ ಈ ಸಂದರ್ಭದಲ್ಲಿ ಉತ್ತಮ ಸಾಲ ಸೌಲಭ್ಯಗಳನ್ನು ಕಲ್ಪಿಸಿದ್ದೆ ಆದಲ್ಲಿ, ಕೃಷಿರಂಗದಲ್ಲಿ ರಾಜ್ಯ ಹೆಚ್ಚು ಆರ್ಥಿಕವಾಗಿ ಮುನ್ನಡೆಯಲಿದೆ. ರೈತರೂ ಸಹ ಆರ್ಥಿಕ ಸಂಕಷ್ಟದಿಂದ ಪಾರಾಗಬಹುದಾಗಿದೆ ಎಂದರು.

     ಸದ್ಯದ ಪರಿಸ್ಥಿತಿಯಲ್ಲಿ ಉತ್ತಮ ಮಳೆಯೇನೋ ಆಗುತ್ತಿದ್ದು, ರೈತರಲ್ಲಿ ಹರುಷ ಮೂಡಿದೆ. ಆದರೆ ಮಳೆಯೊಂದಿಗಿನ ಜೂಜಾಟದ ವ್ಯವಸಾಯದಲ್ಲಿ ಮುಂದಿನ ದಿನಗಳಲ್ಲಿ ಮಳೆಯೇನಾದರೂ ಕೈ ಕೊಟ್ಟರೆ ರೈತ ಭೂಮಿಗೆ ಹಾಕಿದ ಬಂಡವಾಳ ಹಾಗೂ ಶ್ರಮ ಎರಡೂ ನೀರಿನಲ್ಲಿ ಹೋಮ ಮಾಡಿದಂತೆಯೇ ಸರಿ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link