ಬ್ಯಾಡಗಿ:
ಪ್ರತಿಯೊಬ್ಬರೂ ಕುಡಿಯುವ ನೀರನ್ನು ಸದ್ಬಳಕೆ ಮಾಡಿಕೊಂಡು ನೀರನ್ನು ಮಿತವ್ಯಯವಾಗಿ ಬಳಸಿಕೊಳ್ಳುವ ಮೂಲಕ ಮುಂದಿನ ಪೀಳಿಗೆಗೆ ನೀರನ್ನು ಉಳಿಸುವ ಕಾರ್ಯವನ್ನು ಇಂದಿನಿಂದಲೇ ಮಾಡುವಂತೆ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಪೂಜಾರ ಹೇಳಿದರು.
ಅವರು ಸ್ಥಳೀಯ ಶಿಕ್ಷಕರ ಸಭಾಭವನದಲ್ಲಿ ತಾಲೂಕಾ ಪಂಚಾಯತ ವತಿಯಿಂದ ಏರ್ಪಡಿಸಿದ್ದ ವಿಶ್ವ ನೀರು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನೀರಿನ ಪ್ರತಿ ಹನಿಯೂ ಅತ್ಯಂತ ಅಮೂಲ್ಯ, ಅತ್ಯಂತ ಜಾಗೃತೆಯಿಂದ ನೀರು ಬಳಸಿ ಉಳಿಸುವುದು ಅನಿವಾರ್ಯ. ಮುಂದಿನ ಪೀಳಿಗೆಗೆ ನೀರು ಅತ್ಯಂತ ದುಬಾರಿಯಾಗಲಿದೆ. ಪ್ರತಿದಿನವೂ ಕುಡಿಯುವ ನೀರಿನ ಪ್ರಮಾಣ ಪರಿಸರದಲ್ಲಿ ಕಡಿಮೆಯಾಗುತ್ತಿದೆ.
ಅಂತರ್ಜಲ, ಜಲಮೂಲಗಳು ಕಣ್ಮರೆಯಾಗುತ್ತಿವೆ. ವರ್ಷದಿಂದ ವರ್ಷಕ್ಕೆ ನೀರಿನ ಅಭಾವ ಹೆಚ್ಚಾಗುತ್ತಿದೆ ಎಂದರಲ್ಲದೇ ಯುದ್ದೋಪಾದಿಯಲ್ಲಿ ನೀರಿನ ಸಂರಕ್ಷಣೆ ಕಾರ್ಯ ಆಗಬೇಕಾಗಿದೆ. ಅವಶ್ಯಕತೆಗನುಗುಣವಾಗಿ ನೀರನ್ನು ಬಳಕೆಮಾಡುವ ಸಂಸ್ಕøತಿಯನ್ನು ನಾವು ರೂಢಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ತಾಲೂಕಾ ಅಕ್ಷರ ದಾಸೋಹಾಧಿಕಾರಿ ತಿಮ್ಮಾರೆಡ್ಡಿ ಮಾತನಾಡಿ ಜಲ ಮೂಲಗಳ ರಕ್ಷಣೆ, ನೀರಿನ ಮಿತ ಬಳಕೆ, ನೀರು ಸಂಗ್ರಹ ಹಾಗೂ ಹಸರೀಕರಣದ ಬಗ್ಗೆ ನಾವೆಲ್ಲ ಜಾಗೃತರಗಾಬೇಕಾಗಿದೆ. ನೀರಿನ ಮೂಲಗಳನ್ನು ಉಳಿಸುವ ಸಂರಕ್ಷಿಸುವ ಹೊಸ ಹೊಸ ಜಲಮೂಲಗಳನ್ನು ಪುಶ್ಚೇತನಗೊಳಿಸುವ ಚಟುವಟಿಕೆಗಳು ನಡೆಯಬೇಕಾಗಿದೆ. ಜನರು ಜಲಸಂರಕ್ಷಣೆಯ ಜಾಗೃತಿ ಹೊಂದಬೇಕಾಗಿದೆ. ಜಲವನ್ನು ಜೀವ ಜಲ ಎಂದು ಕರೆಯುತ್ತೇವೆ.
ಮನುಷ್ಯನ ಬದುಕಿಗೆ ಗಾಳಿ ಮತ್ತು ನೀರು ಅತ್ಯಂತ ಅವಶ್ಯಕ. ಪ್ರತಿ ಹೆಜ್ಜೆಯಲ್ಲೂ ನೀರು ಉಳಿಸುವುದು ಹಾಗೂ ನೀರಿನ ಬಳಕೆ ಪ್ರಮಾಣದ ಬಗ್ಗೆ ನಮಗೆ ಅರಿವು ಇರಬೇಕು. ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಪುನರ್ ಬಳಕೆ ಮಾಡುವ ಜಾಣತನ, ನೀರಿನ ಉತ್ಪಾದನೆ, ಮಿತ ಬಳಕೆ, ನೀರಿನ ಸಂಗ್ರಹ ಹಾಗೂ ಹಸರೀಕರಣ ಚಟುವಟಿಕೆಯ ಕುರಿತಂತೆ ನಾವೆಲ್ಲ ಜಾಗೃತರಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕಾ ಕ್ಷೇತ್ರಶಿಕ್ಷಣಾಧಿಕಾರಿ ಬಿ.ಕೆ.ರುದ್ರಮುನಿ, ಎಂ.ಎಫ್.ಬಾರ್ಕಿ, ಕೃಷಿ ನಿರ್ಧೇಶಕ ಅಮೃತೇಶ್ವರ, ತಾಲೂಕಾ ಪಂಚಾಯತ ವ್ಯವಸ್ಥಾಪಕ ಪ್ರಕಾಶ ಹಿರೇಮಠ, ಬಸವರಾಜ ಸೋಮಕ್ಕಳವರ ಉಪಸ್ಥಿತರಿದ್ದರು. ಐಇಸಿ ತಾಲೂಕಾ ಸಂಯೋಜಕ ಶ್ಯಾನವಾಜ್ ಚಿಣಗಿ ಸ್ವಾಗತಿಸಿ ವಂದಿಸಿದರು.