ಉಪಕರಣ ಖರೀದಿ ಪ್ರಕರಣ; ನ್ಯಾಯಾಧೀಶರಿಂದ ತನಿಖೆ ನಡೆಯಬೇಕು ; ಉಗ್ರಪ್ಪ

ಚಿತ್ರದುರ್ಗ:

     ಕೋವಿಡ್ ಹಿನ್ನೆಲೆ ವೈದ್ಯಕೀಯ ಉಪಕರಣಗಳ ಖರೀಧಿಯಲ್ಲಿ ಎರಡು ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಭ್ರಷ್ಟಾಚಾರ ನಡೆಸಿರುವ ರಾಜ್ಯ ಬಿಜೆಪಿ.ಸರ್ಕಾರದ ಹಗರಣವನ್ನು ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಿ ಸವಿಸ್ತಾರವಾದ ಚರ್ಚೆಗೆ ಶೀಘ್ರವೇ ವಿಧಾನಮಂಡಲ ಕರೆಯುವಂತೆ ಕೆ.ಪಿ.ಸಿ.ಸಿ.ಮಾಧ್ಯಮ ಹಾಗೂ ಸಂವಹನ ವಿಭಾಗದ ಅಧ್ಯಕ್ಷ ಹಾಗೂ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಒತ್ತಾಯಿಸಿದರು.

    ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ವರಿಷ್ಟರ ಸೂಚನೆಯಂತೆ ಕೇಂದ್ರ ಮತ್ತು ರಾಜ್ಯ ಬಿಜೆಪಿ.ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಲು ಆಂದೋಲನ ಆರಂಭಿಸಿದ್ದೇವೆ. ಚೀನಾದಲ್ಲಿ ಮೊದಲು ಕೊರೋನಾ ವೈರಸ್ ಕಾಣಿಸಿಕೊಂಡಾಗಲೆ ನಮ್ಮ ದೇಶದ ಪ್ರಧಾನಿ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚೆತ್ತುಕೊಂಡಿದ್ದರೆ ಇಷ್ಟೊಂದು ವ್ಯಾಪಕವಾಗಿ ಹರಡುತ್ತಿರಲಿಲ್ಲ.

   ರಾಹುಲ್‍ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಂದ್ ಮಾಡುವಂತೆ ಕೇಂದ್ರದ ಗಮನ ಸೆಳೆದಾಗ ತಮಾಷೆ ಮಾಡಿದರು. ಮಧ್ಯಪ್ರದೇಶ ಸರ್ಕಾರವನ್ನು ಪಥನ ಮಾಡಲು, ಅಮೇರಿಕಾದ ಟ್ರಂಪ್‍ರನ್ನು ಕರೆಸಿ ವೈಭವೀಕರಿಸಿ ದೇಶದ ಜನರಿಂದ ಚಪ್ಪಾಳೆ ತಟ್ಟಿಸಿ, ಜಾಗಟೆ ಬಾರಿಸಿ, ದೀಪ ಬೆಳಗಿಸುವುದರಲ್ಲಿಯೇ ಕಾಲಕಳೆದರು ಎಂದು ಕಿಡಿಕಾರಿದರು.

    ಪ್ರಧಾನಿ ಮೋದಿ ಮಾರ್ಚ್24 ರಂದು 21 ದಿನ ದೇಶವನ್ನು ಲಾಕ್‍ಡೌನ್ ಮಾಡಿಸಿದಾಗ 564 ಕೊರೋನಾ ಸೋಂಕಿತರು ದೇಶದಲ್ಲಿದ್ದರು. ಈಗ ಹದಿನೇಳು ಲಕ್ಷ ಐವತ್ತು ಸಾವಿರಕ್ಕೂ ಹೆಚ್ಚು ಸೋಂಕಿತರಿದ್ದಾರೆ. 37398 ಸಾವು ದೇಶದಲ್ಲಿ ಸಂಭವಿಸಿದೆ. ಒಂದು ಲಕ್ಷ 29 ಸಾವಿರದ 390 ಕ್ಕೂ ಹೆಚ್ಚು ಸೋಂಕಿತರು ರಾಜ್ಯದಲ್ಲಿದ್ದಾರೆ. 2412 ಮಂದಿ ಬಲಿಯಾಗಿದ್ದಾರೆ. ದೇಶದ ಜನರನ್ನು ರಕ್ಷಿಸುವಲ್ಲಿ ನೈತಿಕ ಹೊಣೆ ಯಾರು ಹೊರಬೇಕು ಎಂದು ಪ್ರಶ್ನಿಸಿದ ವಿ.ಎಸ್.ಉಗ್ರಪ್ಪ ಪ್ರಧಾನಿ ಮತ್ತು ರಾಜ್ಯದ ಮುಖ್ಯಮಂತ್ರಿ ಇವರುಗಳು ದಂತಗೋಪುರದಲ್ಲಿ ಸೇರಿಕೊಂಡಿದ್ದಾರೆ. ಕೊರೋನಾ ವಿರುದ್ದ ಜನತೆಯಲ್ಲಿ ಜಾಗೃತಿ ಮೂಡಿಸುವರ್ಯಾರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ವೆಂಟಿಲೇಟರ್, ಪಿ.ಪಿ.ಕಿಟ್, ಸ್ಯಾನಿಟೈಸರ್, ಮಾಸ್ಕ್, ಆಕ್ಸಿಜನ್ ಉಪಕರಣ, ಥರ್ಮಲ್ ಸ್ಕ್ಯಾನಿಂಗ್ ಖರೀಧಿಯಲ್ಲಿ ಒಂದಕ್ಕೆ ದುಪ್ಪಟ್ಟು ಹಣ ನೀಡಿ ಖರೀಧಿಸಿ ಲೂಟಿ ಹೊಡೆದಿರುವ ಬಿಜೆಪಿ.ಸರ್ಕಾರಕ್ಕೆ ನಿಜವಾಗಿಯೂ ಭ್ರಷ್ಠಾಚಾರದ ವಿರುದ್ದ ನೈತಿಕತೆಯಿದ್ದರೆ ನ್ಯಾಯಾಂಗ ತನಿಖೆ ನಡೆಸಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಇವರುಗಳೆಲ್ಲಾ ಸೇರಿಕೊಂಡು ಜನರ ರಕ್ಷಣೆ ಮಾಡುವುದನ್ನು ಬಿಟ್ಟು ಸಮಾಧಿಯಾಗಿಸುವ ಸ್ಥಿತಿಗೆ ತಲುಪಿದ್ದಾರೆ. ದೇಶವ್ಯಾಪಿ ಜನರಿಗೆ ಉದ್ಯೋಗವಿಲ್ಲ. ಆರೋಗ್ಯವಂತು ಕೇಳುವವರೆ ಇಲ್ಲದಂತಾಗಿದ್ದಾರೆ. ಕೋವಿಡ್ ಫಂಡ್ ಎಷ್ಟಾಗಿದೆ ಎಂದು ಗೊತ್ತಾಗುತ್ತಿಲ್ಲ. ಪ್ರಧಾನಿ ಮೋದಿ ಖರೀಧಿಸಿರುವ ವೈದ್ಯಕೀಯ ಉಪಕರಣಗಳಿಗೂ ರಾಜ್ಯ ಸರ್ಕಾರ ಖರೀಧಿಸಿರುವ ಉಪಕರಣಗಳಿಗೂ ಒಂದಕ್ಕೊಂದು ತಾಳೆಯಿಲ್ಲದಂತಾಗಿದೆ. ಒಟ್ಟಾರೆ ಇದೊಂದು ಲೂಟಿಕೋರ ಸರ್ಕಾರ ಜನ ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದರು.

      ವಿಧಾನಸಭೆ ಉಪಚುನಾವಣೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚುನಾವಣೆ ಪ್ರಕ್ರಿಯೆ ಉಲ್ಲಂಘಿಸಿದ್ದಾರೆ. ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕಾಗಿಯೇ ಖರೀಧಿಸಿರುವ ಹಾಸಿಗೆ ದಿಂಬಿನಲ್ಲಿಯೂ ಬಿಜೆಪಿ.ಗೆ ಒಳ್ಳೆ ಮೇವು ಸಿಕ್ಕಿದೆ. ಅಲಿಬಾಬ ಮತ್ತು ನಲವತ್ತು ಮಂದಿ ಕಳ್ಳರ ಸರ್ಕಾರ ಇದಾಗಿದೆ. ಪ್ರಧಾನಿ ಮೋದಿ, ಅಮಿತ್‍ಷಾ, ರಾಜ್ಯದ ಮುಖ್ಯಮಂತ್ರಿಗೆ ನಾನೆ ನೋಟಿಸ್ ಕಳಿಸಿದ್ದೇನೆ. ಉತ್ತರಿಸುತ್ತಿಲ್ಲ. ಕೋವಿಡ್‍ನಿಂದ ಮೃತಪಟ್ಟವರ ಅಂತ್ಯಸಂಸ್ಕಾರವನ್ನು ಸರ್ಕಾರ ಗೌರವಯುತವಾಗಿ ನೆರವೇರಿಸಲಿ. ಜನವಿರೋಧಿ ಲೂಟಿಕೋರ ಬಿಜೆಪಿ.ಸರ್ಕಾರಕ್ಕೆ ಮುಂದೆ ಜನರೇ ಉತ್ತಿರಿಸುತ್ತಾರೆನ್ನುವ ವಿಶ್ವಾಸ ನಮಗಿದೆ ಎಂದರು.

     ವಿಧಾನಪರಿಷತ್ ಸದಸ್ಯ ನಝಿರ್ ಅಹಮದ್ ಮಾತನಾಡಿ ಇಡಿ ದೇಶಕ್ಕೆ ಬೆಂಗಳೂರಿನಿಂದ ವೆಂಟಿಲೇಟರ್ ಸ್ಯಾನಿಟೈಸರ್ ಸಪ್ಲೆ ಆಗುತ್ತಿದೆ. ಆದರೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತ್ರ ಕೊರೋನಾ ನಿರ್ಮೂಲನೆ ಮಾಡಲು ಹೊರಗಡೆಯಿಂದ ವೈದ್ಯಕೀಯ ಉಪಕರಣಗಳನ್ನು ಖರೀಧಿಸುವ ಬಾಧೆ ಏನಿತ್ತು. ನಲವತ್ತು ಲಕ್ಷ ಲೀಟರ್ ಸ್ಯಾನಿಟೈಸರ್ ರಾಜ್ಯದಲ್ಲಿಯೇ ಉತ್ಪತ್ತಿಯಾಗುತ್ತಿದೆ. ಕೊರೋನಾ ವೆಚ್ಚಕ್ಕಾಗಿಯೇ ಮೂರು ಸಾವಿರ ಕೋಟಿ ರೂ.ಗಳನ್ನು ಆರ್.ಬಿ.ಐ.ನಿಂದ ಸಾಲ ಪಡೆಯುವ ಅವಶ್ಯಕತೆಯೇನಿತ್ತು. ದೊಡ್ಡ ಮಟ್ಟದ ಹಗರಣ ನ್ಯಾಯಾಂಗ ತನಿಖೆಯಾಗಲಿ ಎಂದು ಆಗ್ರಹಿಸಿದರು.

    ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಸಚಿವ ಹೆಚ್.ಆಂಜನೇಯ, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಮಾಜಿ ಶಾಸಕರುಗಳಾದ ಬಿ.ಜಿ.ಗೋವಿಂದಪ್ಪ, ಎ.ವಿ.ಉಮಾಪತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಜಿಲ್ಲಾ ಪಂ.ಅಧ್ಯಕ್ಷೆ ಶಶಿಕಲ ಸುರೇಶ್‍ಬಾಬು, ಸದಸ್ಯ ಬಿ.ಯೋಗೇಶ್‍ಬಾಬು, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಮಾಜಿ ವಿಧಾನಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಹನುಮಲಿ ಷಣ್ಮುಖಪ್ಪ, ಉಪಾಧ್ಯಕ್ಷ ಅಜ್ಜಪ್ಪ, ಕೆಪಿಸಿಸಿ ಮಾಧ್ಯಮ ವಕ್ತಾರ ಜಿ.ಬಿ.ಬಾಲಕೃಷ್ಣಸ್ವಾಮಿ ಯಾದವ್, ಕಾಂಗ್ರೇಸ್‍ಪ್ರಧಾನ ಕಾರ್ಯದರ್ಶಿ ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ, ಮುನಿರಾ ಎ.ಮಕಾಂದಾರ್, ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap