ಚಿತ್ರದುರ್ಗ:
ನಗರ ದೇವತೆ ಏಕನಾಥೇಶ್ವರಿಯ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ನಗರದ ರಾಜಬೀದಿಗಳಲ್ಲಿ ಅದ್ದೂರಿಯ ಮೆರವಣಿಗೆ ನಡೆಯಿತು.
ಕೋಟೆಯ ಮೇಲುದುರ್ಗದಲ್ಲಿ ಇರುವ ದೇವಿಯನ್ನು ಸಿಡಿ ಮಹೋತ್ಸವದ ಅಂಗವಾಗಿ ನಿನ್ನೆಯೇ ಕೆಳದುರ್ಗಕ್ಕೆ ಕರತರಲಾಗಿತ್ತು ಕೋಟೆಯ ರಸ್ತೆಯ ಪಾದಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿತ್ತು. ದೇಗುಲದ ಮುಂಭಾಗ ಬೆಳಿಗ್ಗೆಯಿಂದಲೇ ಜಮಾಯಿಸಿದ್ದ ಭಕ್ತರು ಬಹಳ ಉತ್ಸಾಹದಿಂದ ಕಾಯುತ್ತ ಕುಳಿತಿದ್ದರು.
ಅಶ್ವಾರೂಢಳಾಗಿರುವ ಶ್ರೀ ಏಕನಾಥೇಶ್ವರಿ ದೇವಿಯನ್ನು ಸುಗಂಧರಾಜ, ಸೇವಂತಿಗೆ, ಕನಕಾಂಬರ, ಮಲ್ಲಿಗೆ, ಕಲರ್ ಸೇವತಿಂಗೆ ಸೇರಿ ವಿವಿಧ ಹೂವಿನ ಹಾರಗಳಿಂದ ಸಿಂಗರಿಸಲಾಗಿದ್ದು ಭಕ್ತರ ಕಣ್ಮನ ಸೆಳೆಯುವಂತಿತ್ತು. ನಂತರ ಎತ್ತಿನ ಬಂಡಿಯಲ್ಲಿ ಕೂರಿಸಲಾಯಿತು.
ಈ ಸಂದರ್ಭದಲ್ಲಿ ಉದೋ, ಉದೋ ಎಂಬ ಉದ್ಘಾರ ಘೋಷಗಳು ಮೊಳಗಿದವು. ಕಹಳೆ, ಉರುಮೆ, ತಮಟೆ, ಡೊಳ್ಳು ಕುಣಿತ ಸೇರಿದಂತೆ ನಾನಾ ಜಾನಪದ ಕಲಾ ವಾದ್ಯಗಳೊಂದಿಗೆ ಪ್ರಮುಖ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮಹಿಳಾ ಭಕ್ತರು ಅಲ್ಲಲ್ಲಿ ಆರತಿ ಎತ್ತಿ ಧನ್ಯತಾಬಾವ ಮೆರೆದರು.
ಯುವಕರು ಕುಣಿದು ಸಂಭ್ರಮಿಸಿದರು. ದೇವಿಯನ್ನು ಮಡಿಯಿಂದ ಸ್ವಾಗತಿಸಲು ದಾರಿಯುದ್ಧಕ್ಕೂ ಭಕ್ತರು ತಮ್ಮ ಮನೆಗಳ ಮುಂದೆ ನೀರು ಚಿಮ್ಮಿಸಿ ರಂಗೋಲಿ ಹಾಕುತ್ತಿದ್ದ ದೃಶ್ಯ ಕಂಡು ಬಂದಿತು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜಾನಪದ ಕಲಾವಿದರು ಹಾಗೂ ಭಕ್ತರಿಗೆ ಅಲ್ಲಲ್ಲಿ ಮಜ್ಜಿಗೆ, ಪಾನಕ ವಿತರಿಸಲಾಯಿತು.
ಕೋಟೆ ರಸ್ತೆಯ ಶ್ರೀ ಏಕನಾಥೇಶ್ವರಿ ಪಾದಗುಡಿಯಿಂದ ಪ್ರಾರಂಭವಾದ ಮೆರವಣಿಗೆ ತರಾಸು ಬೀದಿ, ಚಿಕ್ಕಪೇಟೆ, ಆನೆಬಾಗಿಲು, ಬುರುಜನಹಟ್ಟಿ, ಸಂಗೊಳ್ಳಿ ರಾಯಣ್ಣ ವೃತ್ತ, ಗಾಂಧಿ ವೃತ್ತ, ಎಸ್‍ಬಿಎಂ ಸರ್ಕಲ್, ಧರ್ಮಶಾಲೆ ರಸ್ತೆ, ದೊಡ್ಡಪೇಟೆ, ಜೋಗಿಮಟ್ಟಿ ರಸ್ತೆ, ಸುಣ್ಣದ ಗುಮ್ಮಿ, ಕರುವಿನಕಟ್ಟೆ ವೃತ್ತ, ಫಿಲ್ಟರ್‍ಹೌಸ್ ರಸ್ತೆ ಮಾರ್ಗವಾಗಿ ದೇವಸ್ಥಾನ ತಲುಪಿತು. ದಾರಿಯುದ್ಧಕ್ಕೂ ಭಕ್ತರಿಂದ ಅಕ್ಕಿ, ಬೇಳೆ, ಬೆಲ್ಲ ಸೇರಿದಂತೆ ಮತ್ತಿತರ ದವಸ ದಾನ್ಯಗಳ ಮೀಸಲು ಸ್ವೀಕರಿಸಲಾಯಿತು.
ಮಲ್ಲಿಗೆ, ಕನಕಾಂಬರ, ಸೇವಂತಿಗೆ, ಸುಗಂಧರಾಜ, ಹಸಿರುಪತ್ರೆ ಹಾಗೂ ಬೃಹಧಾಕಾರದ ಹೂಮಾಲೆಗಳಿಂದ ಸಿಂಗರಿಸಲಾಗಿದ್ದ ಏಕನಾಥೇಶ್ವರಿ ಅಮ್ಮನನ್ನು ಎತ್ತಿನಬಂಡಿಯಲ್ಲಿ ಮೆರವಣಿಗೆ ಕೊಂಡೊಯ್ಯಲಾಯಿತು.ಡೊಳ್ಳು, ತಮಟೆ, ಉರುಮೆ, ಕಹಳೆ ಸದ್ದಿಗೆ ನೂರಾರು ಯುವಕರು ಹಾಗೂ ಭಕ್ತರು ಸುಡುಬಿಸಿಲನ್ನು ಲೆಕ್ಕಿಸದೆ ಮೆರವಣಿಗೆಯುದ್ದಕ್ಕು ಕುಣಿದು ಕುಪ್ಪಳಿಸಿದರು.
ಗೊಂಬೆಕುಣಿತ, ಕೀಲುಕುದುರೆ, ಸೋಮನ ಕುಣಿತ ಮೆರವಣಿಗೆಯಲ್ಲಿ ಆಕರ್ಷಣೀಯವಾಗಿತ್ತು. ರಸ್ತೆಯ ಎರಡು ಬದಿಗಳಲ್ಲಿ ನಿಂತ ಜನಸಾಮಾನ್ಯರು ಏಕನಾಥೇಶ್ವರಿ ಅಮ್ಮನ ಮೆರವಣಿಗೆಯನ್ನು ವೀಕ್ಷಿಸಿದರು. ಅಲ್ಲಲ್ಲಿ ಜನ ಮೊಬೈಲ್‍ನಲ್ಲಿ ಏಕನಾಥೇಶ್ವರಿಯನ್ನು ಸೆರೆಹಿಡಿದುಕೊಳ್ಳುತ್ತಿದ್ದರು. ಕೆಲವು ಕಡೆ ಭಕ್ತರಿಗೆ ನೀರು ಹಾಗೂ ಪಾನಕಗಳನ್ನು ವಿತರಿಸಲಾಯಿತು.
ನಗರಸಭೆ ಮಾಜಿ ಉಪಾಧ್ಯಕ್ಷ ರಾಮಜ್ಜ, ಮಾಜಿ ಸದಸ್ಯ ಗಾಡಿ ಮಂಜುನಾಥ್, ಮಾಜಿ ನಾಮ ನಿರ್ದೇಶನ ಸದಸ್ಯ ಓಂಕಾರ್ ಸೇರಿದಂತೆ ಇನ್ನು ಅನೇಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ