ನಾಗರೀಕರಿಗೂ ವಿಮೆ ಸೌಲಭ್ಯ ನೀಡಿ: ಎಚ್ ಕೆ ಪಾಟೀಲ್

ಬೆಂಗಳೂರು

      ಕೋವಿಡ್-19 ಸಂಕಷ್ಟದ ಪರಮಾವಧಿಯ ಈ ಸಂದರ್ಭದಲ್ಲಿ ರಾಜ್ಯದ ಪ್ರತಿಯೊಬ್ಬ ನಾಗರೀಕರನ್ನು ಕೊರೊನಾ ವಿಮೆ ವ್ಯಾಪ್ತಿಗೆ ಸರ್ಕಾರವೇ ವಿಮಾ ಕಂಪನಿಯ ಪ್ರೀಮಿಯಂ ಭರಿಸಿ ವಿಮೆ ವ್ಯಾಪ್ತಿಗೆ ತಕ್ಷಣ ತರಬೇಕು. ಪರಿಸ್ಥಿತಿ ಹದಗೆಡುವ ಮತ್ತು ಇನ್ನಷ್ಟು ಕೈಮೀರುವ ಮುನ್ನ ಈ ನಿರ್ಣಯ ಆಗಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ, ಶಾಸಕ ಎಚ್.ಕೆ.ಪಾಟೀಲ್ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ.

     ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಎಚ್.ಕೆ.ಪಾಟೀಲ್, ವಿಶ್ವದಾದ್ಯಂತ ಮಹಾಮಾರಿ ಕೊರೋನಾ ವೈರಸ್ (ಕೋವಿಡ್-19)ರಿಂದ ಜನರನ್ನು ರಕ್ಷಿಸಲು ಇಡೀ ವಿಶ್ವ ಆತಂಕಕ್ಕೀಡಾಗಿ ಗಂಭೀರವಾದ ಪರಿಸ್ಥಿತಿ ಎದುರಿಸುತ್ತಾ ಹಲವಾರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಾ, ಹೊಸ ಹೊಸ ಅನುಭವಗಳನ್ನು ಪಡೆಯುತ್ತಿದೆ. ಸರ್ಕಾರಗಳು ಮಾಡುತ್ತಿರುವ ಪ್ರಯತ್ನಗಳು ಏನೇನೂ ಸಾಲದು ಎಂಬಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

    ರಾಜ್ಯ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದ್ದರೂ ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯುವ ಗಂಭೀರ ರೋಗಿಗಳ ಕಾಳಜಿಯಲ್ಲಿ ಕೊರತೆ ಮತ್ತು ಇನ್ನೂ ಅನೇಕ ಕ್ರಮಗಳನ್ನು ಕೈಗೊಳ್ಳದೇ ಆಗಿರುವ ಪ್ರಮಾದಗಳು ಮತ್ತು ದೂರದೃಷ್ಟಿ ಮತ್ತು ದಿಕ್ಸೂಚಿ ಇಲ್ಲದ ಪರಿಣಾಮಕಾರಿ ಅಲ್ಲದ ಕ್ರಮಗಳು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿವೆ. ಇದರಿಂದಾಗಿ, ಮಹಾಮಾರಿಯ ಹರಡುವಿಕೆ ಇನ್ನಷ್ಟು ಹೆಚ್ಚಾಗಬಹುದೆಂಬ ಕಳವಳಕಾರಿ ಪರಿಸ್ಥಿತಿ ಉಂಟಾಗಿದೆ.

     ಈ ಕಳವಳಕ್ಕೆ ಹಲವಾರು ಕಾರಣಗಳಿವೆ ಮತ್ತು ಪರಿಹಾರಕ್ಕೆ ಸಮರೋಪಾದಿಯಲ್ಲಿ ಅನುಷ್ಠಾನಗೊಳಿಸಬೇಕಾದ ಪರಿಣಾಮಕಾರಿ ಅನೇಕ ಮಾರ್ಗಸೂತ್ರಗಳಿವೆ. ಸರ್ಕಾರ ಜನರ ಕಾಳಜಿ ದೃಷ್ಟಿಯಿಂದ ಹಲವಾರು ಸಲಹೆಗಳನ್ನು ಸ್ವೀಕರಿಸಬೇಕಾಗಿದೆ ಮತ್ತು ತಾರ್ಕಿಕ ಅಂತ್ಯ ಕಾಣುವ ಸೂಕ್ತ ಮತ್ತು ಗಂಭೀರವಾದ ಕ್ರಮಗಳನ್ನು ಪ್ರಾಮಾಣಿಕವಾಗಿ ಕೈಗೊಳ್ಳಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
ವಿಶ್ವದಾದ್ಯಂತ ಮಹಾಮಾರಿ ಕೊರೋನಾ ವೈರಸ್ (ಕೋವಿಡ್-19)ರಿಂದಾಗಿ ಆಘಾತಕಾರಿ ಹಂತ ತಲುಪುತ್ತಿರುವ ಸಂದರ್ಭದಲ್ಲಿ ಕರ್ನಾಟಕದಲ್ಲಿಯೂ ಸಹ ಅತ್ಯಂತ ಗಂಭೀರವಾದ ಪರಿಸ್ಥಿತಿ ಈಗ ನಿರ್ಮಾಣವಾಗುತ್ತಿದೆ. ಈ ಸಂದರ್ಭದಲ್ಲಿ ಅತ್ಯಂತ ಅವಶ್ಯಕ ಮತ್ತು ತುರ್ತಾಗಿ ಕೆಲವು ಕ್ರಮಗಳನ್ನು ಕೈಗೊಳ್ಳಲೇಬೇಕಾದ ಅವಶ್ಯಕತೆ ಇರುವುದರಿಂದ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದವರು ಆಗ್ರಹಿಸಿದ್ದಾರೆ.

     ಕೋವಿಡ್-19 ಕೊರೋನಾ ವೈರಸ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರವು ಎಲ್ಲಾ ರಂಗಗಳಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂಬ ಭಾವನೆಗಳು ಜನಮಾನಸದಲ್ಲಿ ಗಟ್ಟಿಗೊಳ್ಳುತ್ತಿವೆ. ಕೋವಿಡ್ ಸೋಂಕಿತರಿಗೆ ಮತ್ತು ಶಂಕಿತರಿಗೆ ಗುಣಮಟ್ಟದ ಸೇವೆ ಮತ್ತು ಉತ್ತಮ ಚಿಕಿತ್ಸೆ ಒದಗಿಸುವಲ್ಲಿ ಆಗುತ್ತಿರುವ ದೈನಂದಿನ ವೈಫಲ್ಯಗಳು ರಾಜ್ಯದಲ್ಲಿ ಒಂದು ಕರಾಳ ಅಧ್ಯಾಯವನ್ನು ಆರಂಭಿಸಿವೆ. ಸೋಂಕಿತರಿರಲಿ ಅಥವಾ ಶಂಕಿತರಿರಲಿ ಅವರಿಗೆ ಕನಿಷ್ಠ ಸೌಲಭ್ಯಗಳುಳ್ಳ ಸೇವೆ ದೊರಕುವುದು ಮರೀಚಿಕೆಯಾಗಿ ಮಾನವೀಯ ಅನುಕಂಪದ ಕ್ರಮಗಳು ಇಲ್ಲದಿರುವುದರಿಂದ ಶಂಕಿತರು ಮತ್ತು ಸೋಂಕಿತರು ವಿಲವಿಲ ಒದ್ದಾಡುವಂತಾಗಿದೆ ಎಂದು ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap