ತಿಪಟೂರು
ಸತತ ಮಳೆಯಾಗಿ ರಾಗಿಯನ್ನು ಬಿತ್ತಲು ಮತ್ತು ಅರಗಲು ಮಳೆ ಬಿಡುವು ಕೊಟ್ಟರೆ ಸಾಕೆಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದ ಅನ್ನದಾತರು ಇಂದು ಅದೇ ಮಳೆಗಾಗಿ ಮತ್ತೆ ಮುಗಿಲನ್ನು ನೋಡುತ್ತಿದ್ದಾರೆ.ಈ ಬಾರಿಯ ಹಿಂಗಾರು ಮಳೆ ಉತ್ತಮವಾಗಿ ಆಗುತ್ತಿದ್ದು, ರೈತರ ಮೊಗ ಹೊಸ ಪೈರಿನಂತೆ ನಳನಳಿಸುತ್ತಿತ್ತು. ಇದೇ ಸಂದರ್ಭದಲ್ಲಿ ರೈತರು ಈ ಬಾರಿ ನಮಗೆ ಉತ್ತಮ ಮಳೆಯಾಗುತ್ತದೆಂಬ ನಂಬಿಕೆಯಿಂದ ಮತ್ತು ನಂಬಿ ಕೆಟ್ಟವರಿಲ್ಲವೋ ಮಣ್ಣನ್ನು ಎಂಬ ಗಾದೆಯಿಂದ ಪ್ರೇರಿತರಾದಂತೆ, ಕೊರೊನಾ ಮಹಾಮಾರಿಯ ನಡುವೆ ಮನೆಗೆ ಬಂದಿದ್ದ ಮಕ್ಕಳು-ಮರಿಯೊಂದಿಗೆ ಸೇರಿ, ಅಲ್ಲಿ ಇಲ್ಲಿ ಕೂಡಿಟ್ಟ ಹಣ ಮತ್ತು ಸಾಲ ಸೋಲ ಮಾಡಿ ಬಿತ್ತನೆಗೆ ಬೇಕಾದ ತಯಾರು ಮಾಡಿಕೊಂಡರು.
ಈ ಸಂದರ್ಭದಲ್ಲಿ ನಿಮ್ಮೊಂದಿಗೆ ನಾನಿದ್ದೇನೆಂಬಂತೆ ಬಂದ ಮಳೆಯು ಸಹ ರೈತರಲ್ಲಿ ಇನ್ನಷ್ಟು ಹುರುಪನ್ನು ಮೂಡಿಸಿತು. ಈ ಹುರುಪು ಹೆಚ್ಚುವ ಮೊದಲೇ ಮಳೆಯು ದಿನ ನಿತ್ಯ ಸುರಿದು, ರೈತರು ಜಮೀನಿಗೆ ಹೋಗದಷ್ಟು ತೇವವನ್ನು ಮಾಡಿತು. ಇದರಿಂದ ರೈತರು ಸ್ವಲ್ಪ ಮಳೆ ಬಿಡುವು ಕೊಟ್ಟರೆ ಸಾಕೆಂದು ದೇವರಲ್ಲಿ ಪ್ರಾರ್ಥಿಸಿದರು. ಆದರೆ ಈ ಪ್ರಾರ್ಥನೆ ಪ್ರಮಾಣ ಹೆಚ್ಚಾಯಿತೊ, ಇಲ್ಲ ನಾನು ಮಳೆ ಸುರಿಸಿದರೆ ಈ ರೈತರೇಕೆ ಮಳೆ ನಿಲ್ಲಿಸೆಂದು ಪ್ರಾರ್ಥಿಸುತ್ತಾರೆ ಎಂಬ ಗೊಂದಲದಲ್ಲಿ ಮಳೆರಾಯ ಸಂಪೂರ್ಣವಾಗಿ ಮಳೆಯನ್ನೇ ನಿಲ್ಲಿಸಿದ್ದು, ರೈತನ ಬೆನಿನ್ನ ಮೇಲೆ ಬರೆ ಎಳೆದಂತಾಗಿದೆ.
ತಾಲ್ಲೂಕಿನ ಎಲ್ಲಾ ಹೋಬಳಿಗಳಲ್ಲು ಬಿತ್ತನೆ ಕಾರ್ಯ ಮುಗಿದಿದ್ದು ಮುಂದಿನ ಮಳೆಯ ಕೊರತೆಯಿಂದ ಈಗಾಗಲೇ ಬೆಳೆಯು ಕಳೆಗುಂದಿದ್ದು ಮುಂದಿನ ವಾರದಲ್ಲಿ ಮಳೆ ಬಾರದೇ ಹೋದರೆ ಬೆಳೆ ಕೈ ತಪ್ಪುವ ಭೀತಿಯಲ್ಲಿ ಅನ್ನದಾತರಿದ್ದಾರೆ.ತಾಲ್ಲೂಕಿನಲ್ಲಿ 17,500 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದೆ. ಇನ್ನು ತಾಲ್ಲೂಕಿನ ಹೊನ್ನವಳ್ಳಿ ಭಾಗದಲ್ಲಿ ಯೂರಿಯಾ ಕೊರತೆ ಎದುರಾಗಿತ್ತು, ಆದರೆ ಈಗ ಯೂರಿಯಾ ದಾಸ್ತಾನು ಇದೆಯಾದರೂ ಅದನ್ನು ಬಳಸಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೆ ಯೂರಿಯಾವನ್ನು ಖರೀದಿಸಿ ಬೆಳೆಗೆ ಹಾಕಿರುವ ರೈತರು ಮಳೆಗಾಗಿ ವರುಣನನ್ನು ಪ್ರಾರ್ಥಿಸುತ್ತಿದ್ದಾರೆ.
ಅನ್ನದಾತರೊಂದಿಗೆ ಜೂಜಾಟವಾಡುತ್ತಿರುವ ಮಳೆರಾಯ :
ಆಗಸ್ಟ್ ತಿಂಗಳಲ್ಲಿ ತಾಲ್ಲೂಕಿನ ವಾಡಿಕೆ ಮಳೆಯ ಪ್ರಮಾಣ 66.30ಎಂ.ಎಂ ರಷ್ಟಿದ್ದು, ವಾಸ್ತವವಾಗಿ 73.40ಎಂ.ಎಂ ಮಳೆಯಾಗಿದ್ದು, ಶೇಕಡ 10.71 ಮಳೆ ಜಾಸ್ತಿಯೇ ಆಗಿದೆ. ಆದರೆ ಇದೇ ತಿಂಗಳ 21 ರಿಂದ ಇಲ್ಲಿಯವರೆಗೆ ಮಳೆಯು ಸಂಪೂರ್ಣವಾಗಿ ಆಗದೇ ಇರುವುದು ರೈತರಿಗೆ ತೀವ್ರ ಸಂಕಷ್ಟವನ್ನು ತಂದೊಡ್ಡಿದೆ.
ಕೃಷಿ ಇಲಾಖೆಯ ಮಾಹಿತಿಯಂತೆ ಮೊದಲು ಬಿತ್ತಿದ್ದ ಬೆಳೆಯು ಬಾಡುತ್ತಿದೆ. ಕೊನೆಯ ವೇಳೆಯಲ್ಲಿ ಹಾಕಿದ ರಾಗಿಗೆ ಮುಂದಿನ ವಾರ ಮಳೆ ಬಂದರು ಪರವಾಗಿಲ್ಲ, ಆದರೆ ಮೊದಲು ಬಿತ್ತಿದ್ದ ಬೆಳೆಗೆ 3-4 ದಿನಗಳಲ್ಲಿ ಮಳೆಯಾಗಲೇಬೇಕು. ಇಲ್ಲದಿದ್ದರೆ ರಾಗಿಯ ಬೆಳೆ ಹಾಳಾಗಿ ಹೋಗುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ