ಕೌಶಲ್ಯಾಭಿವೃದ್ದಿ ತರಬೇತಿ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ : ಡಿಹೆಚ್‍ಒ

ಬಳ್ಳಾರಿ

   ಆರೋಗ್ಯ ಇಲಾಖೆ ಜೊತೆಗೆ ಅಪೋಲೊ ಮೆಡಿಸ್ಕಿಲ್, ರಾಮಯ್ಯ ಮೆಮೋರಿಯಲ್ ಆಸ್ಪತ್ರೆ, ನಾರಾಯಣ ಹೃದಯಾಲಯದಂತಹ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ನಡೆಯುವ ತರಬೇತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿ ಕೌಶಲ್ಯಾಭಿವೃದ್ದಿ ತರಬೇತಿಯನ್ನು ಪಡೆದು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವರಾಜ್ ಹೆಡೆ ಅವರು ಕರೆ ನೀಡಿದರು.

   ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಗುರುವಾರರಂದು ಎಸ್.ಸಿ.ಪಿ. ಟಿ.ಎಸ್.ಪಿ. ಯೋಜನೆ ಅಡಿಯಲ್ಲಿ ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಹಮ್ಮಿಕೊಂಡಿದ್ದ ಉದ್ಯೋಗ ಮೇಳದಲ್ಲಿ ಅವರು ಮಾತನಾಡಿದರು.

   ತರಬೇತಿ ನಂತರ ಶೇ.75ರಷ್ಟು ಹುದ್ದೆಗಳನ್ನು ಸದರಿ ಆಸ್ಪತ್ರೆಯಲ್ಲಿ ಭರ್ತಿ ಮಾಡುವ ಭರವಸೆಯೊಂದಿಗೆ ಫಾರ್ಮಸಿ ಅಸಿಸ್ಟೆಂಟ್, ಹಾಸ್ಪಿಟಲ್ ಆಪರೇಷನ್ ಎಕ್ಸಿಕ್ಯೂಟೀವ್, ಅನಸ್ತೇನಿಯ ಟೆಕ್ನಿಷಿಯನ್, ಡ್ಯೂಟಿ ಮ್ಯಾನೆಜರ್-ಪೇಷೆಂಟ್ ರಿಲೇಷನ್ ಸರ್ವಿಸಸ್, ಹಾಸ್ಪಿಟಲ್ ನರ್ಸ್ ಪಾರ್ ಅಡ್ವಾನ್ಸ್‍ಡ್ ಕೇರ್, ಕ್ರಿಟಿಕಲ್ ಕೇರ್ ಅಸಿಸ್ಟೆಂಟ್ ಕಾರ್ಡಿಯಾಕ್ ಐ.ಟಿ.ಯು, ಕಾರ್ಡಿಯಾಕ್ ಕೇರ್ ಟೆಕ್ನಿಷಿಯನ್ ಪ್ರೋಗ್ರಾಂ (ಸಿ.ಸಿ.ಟಿ) ಹುದ್ದೆಗಳಿಗೆ ತರಬೇತಿ ನೀಡಲಾಗುತ್ತಿದ್ದು ಪಿ.ಯು.ಸಿ. ವಿಜ್ಞಾನ, ಯಾವುದೇ ಪದವಿ, ಜಿ.ಎನ್.ಎಮ್, ಬಿ.ಎಸ್ಸಿ ನರ್ಸಿಂಗ್ ಹಾಗೂ ಎ.ಎನ್.ಎಂ ತರಬೇತಿಯ ವಿದ್ಯಾರ್ಹತೆ ಹೊಂದಿರುವವರು ಸದರಿ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉದ್ಯೋಗದ ಅವಕಾಶವನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದರು.

    ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ಮಾತನಾಡಿ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಕೌಶಲ್ಯಾಭಿವೃದ್ದಿ ತರಬೇತಿ ಯೋಜನೆ ಅಡಿಯಲ್ಲಿ ಜಿಲ್ಲೆಯ ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟ ಪಂಗಡದ 18 ರಿಂದ 35 ವರ್ಷದೊಳಗಿನ ಅರ್ಹ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದ ಅವರು ಹೈದರಾಬಾದ್ ಕರ್ನಾಟಕದ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿ, ಈ ತರಬೇತಿಗೆ ಆಯ್ಕೆಯಾಗಿ ಎಂದರು.

     ಈ ಸಂದರ್ಭದಲ್ಲಿ ವೈದ್ಯರಾದ ಡಾ.ರಾಜಶೇಖರರೆಡ್ಡಿ, ಡಾ.ಇಂದ್ರಾಣಿ, ಡಾ.ವಿರೇಂದ್ರ ಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಜಿಲ್ಲಾಸ್ಪತ್ರೆಯ ಸಿಬ್ಬಂದಿಗಳಾದ ಬಸವರಾಜ್, ರಾಜೇಶ್ವರಿ, ಕೃಷ್ಣ ನಾಯ್ಕ ಟಿ, ರಂಗನಾಥ, ವಿಶ್ವೇಶ್ವರ, ಪ್ರೀತಿಕಾ ಸೇರಿದಂತೆ ಅಭ್ಯರ್ಥಿಗಳು ಇದ್ದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link