ಬಳ್ಳಾರಿ
ಜಿಲ್ಲಾಡಳಿತ ಮತ್ತು ಜಿಪಂ ಸಮನ್ವಯದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಬರಪರಿಸ್ಥಿತಿ ನಿರ್ವಹಣೆಗಾಗಿ ಅಗತ್ಯ ಸಿದ್ಧತೆಗಳನ್ನು ಮತ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಪ್ರಸ್ತುತ 4,86,332 ದನ ಮತ್ತು ಎಮ್ಮೆ ಹಾಗೂ 9,43,540 ಕುರಿ ಮತ್ತು ಮೇಕೆಗಳಿದ್ದು, ಜಿಲ್ಲೆಯಲ್ಲಿ ಬಿತ್ತನೆ ಪ್ರಮಾಣ ಮತ್ತು ಸದರಿ ಬೆಳೆಗಳಿಂದ ಲಭ್ಯವಿರುವ ಮೇವಿನ ಪ್ರಮಾಣದ ಆಧಾರದ ಮೇಲೆ ಜಾನುವಾರು ಸಂಖ್ಯೆ ಅನುಗುಣವಾಗಿ ಪ್ರಸ್ತುತ ಲಭ್ಯವಿರುವ 4,95,308 ಟನ್ ಮೇವು ಸರಾಸರಿ 29 ವಾರಗಳಿಗೆ ಸಾಕಾಗುವಷ್ಟು ಇದೆ ಎಂದು ಅವರು ವಿವರಿಸಿದ್ದಾರೆ.
ತೀವ್ರ ಮೇವಿನ ಕೊರತೆ ಉಂಟಾಗಬಹುದಾದ ಗ್ರಾಮಗಳನ್ನು ಗುರುತಿಸಿ ಆ ಗ್ರಾಮಗಳಿಗೆ ಮೇವಿನ ಬ್ಯಾಂಕ್ ಮತ್ತು ಗೋಶಾಲೆಗಳನ್ನು ಪ್ರಾರಂಭಿಸಲು ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿರುವ ಅವರು, ಮೇವಿನ ಲಭ್ಯತೆಯನ್ನು ಹೆಚ್ಚಿಸಲು ನೀರಾವರಿ ಸೌಲಭ್ಯ ಹೊಂದಿರುವ ರೈತರಿಗೆ ಮೇವು ಬೆಳೆಯಲು ಸೂಚಿಸಲಾಗಿದೆ. 3629 ಸೋರ್ಗಂ ಮೇವಿನ ಕಿರುಪೊಟ್ಟಣ ಮತ್ತು 2886 Sಂಖಿ ಮೆಕ್ಕೆಜೋಳದ ಮೇವಿನ ಕಿರುಪೊಟ್ಟಣಗಳು ಒಟ್ಟು 6515 ಮೇವಿನ ಕಿರುಪೊಟ್ಟಣಗಳು ಸರಬರಾಜು ಮಾಡಲಾಗಿದೆ. ಅಂದಾಜು 19,545 ಟನ್ ಮೇವು ಉತ್ಪಾದನೆಯಾಗುವ ನಿರೀಕ್ಷೆ ಹೊಂದಿದ್ದು, ಇನ್ನೂ ಅಗತ್ಯವಿದ್ದಲ್ಲಿ 16,810 ಮೇವಿನ ಕಿರುಪೊಟ್ಟಣಗಳು ಶೀಘ್ರವೇ ಸರಬರಾಜಾಗುವ ವ್ಯವಸ್ಥೆ ಮಾಡಲಾಗುತ್ತದೆ ಎಂದಿದ್ದಾರೆ.
ಗ್ರಾಮಗಳಲ್ಲಿ ನೀರಿನ ತೊಟ್ಟಿಗಳ ನಿರ್ವಹಣೆಯ ಜೊತೆಗೆ ಹೆಚ್ಚುವರಿಯಾಗಿ 229 ಕುಡಿಯುವ ನೀರಿನ ತೊಟ್ಟಿಗಳ ನಿರ್ಮಾಣಕ್ಕಾಗಿ ಕ್ರಮವಹಿಸಲಾಗಿದೆ. ಜಾನುವಾರುಗಳಿಗೆ ವಿವಿಧ ಸಾಂಕ್ರಾಮಿಕ ರೋಗವನ್ನು ನಿಯಂತ್ರಣಕ್ಕಾಗಿ ಸೂಕ್ತ ಮುನ್ನೆಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಅಗತ್ಯ ಲಸಿಕೆ ಮತ್ತು ಔಷಧಿಗಳನ್ನು ದಾಸ್ತಾನೀಕರಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಂಭವನೀಯ ಬರಪರಿಸ್ಥಿತಿಯಲ್ಲಿ ರೈತರು ಆತಂಕಕ್ಕೊಳಗಾಗಿ ಅಸಹಾಯಕತೆಯಿಂದ ಅತೀ ಕಡಿಮೆಬೆಲೆಗೆ ಜಾನುವಾರುಗಳನ್ನು ಮಾರಾಟ ಮಾಡದಂತೆ ಮನವೊಲಿಸಲು ಹಾಗೂ ಸರಕಾರದಿಂದ ದೊರೆಯುತ್ತಿರುವ ನೆರವಿನ ಬಗ್ಗೆ ರೈತರಿಗೆ ಇಲಾಖೆಯ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಮೂಲಕ ತಿಳಿವಳಿಕೆ ನೀಡಿ ಕ್ರಮವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅವಶ್ಯವಿದ್ದಲ್ಲಿ ರೈತರು, ಜಾನುವಾರು ಮಾಲೀಕರಿಗಾಗಿ ಸಹಾಯವಾಣಿ ಸ್ಥಾಪಿಸಲಾಗಿದ್ದು, ಅವರು ಹೆಚ್ಚಿನ ಮಾಹಿತಿಗೆ ಜಿಪಂ ಸಹಾಯವಾಣಿ ಸಂಖ್ಯೆ:08392-268955, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರ ಕಚೇರಿ ದೂ.ಸಂ.08392-275146, ಬಳ್ಳಾರಿ ಸಹಾಯಕ ನಿರ್ದೇಶಕರ ದೂ.ಸಂ.08392-276358, ಸಿರುಗುಪ್ಪ ಸಹಾಯಕ ನಿರ್ದೇಶಕರ ದೂ.ಸಂ.08396-220336, ಸಂಡೂರು ಸಹಾಯಕ ನಿರ್ದೇಶಕರ ದೂ.ಸಂ.08395-260338, ಹೊಸಪೇಟೆ ಸಹಾಯಕ ನಿರ್ದೇಶಕರ ದೂ.ಸಂ.08394-227320, ಹಗರಿಬೊಮ್ಮನಹಳ್ಳಿ ಸಹಾಯಕ ನಿರ್ದೇಶಕರ ದೂ.ಸಂ.08397-238352, ಹಡಗಲಿ ಸಹಾಯಕ ನಿರ್ದೇಶಕರ ದೂ.ಸಂ.08399-240314, ಕೂಡ್ಲಿಗಿ ಸಹಾಯಕ ನಿರ್ದೇಶಕರ ದೂ.ಸಂ.08391-220371 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ